ಸೋಮವಾರ, ನವೆಂಬರ್ 18, 2019
23 °C

ಪಕ್ಷೇತರರಿಗೆ ಮಣೆ ಹಾಕುವ ಯತ್ನ

Published:
Updated:

ದೇವನಹಳ್ಳಿ: ವಿಧಾನ ಸಭೆ ಚುನಾವಣೆ ಪ್ರಕ್ರಿಯೆಯ ಪ್ರಮುಖ ಹಂತ ಬುಧವಾರ ಮುಕ್ತಾಯಗೊಂಡಿತು. ಈ ಬಾರಿ ಹಿಂದೆಂದಿಗಿಂತಲೂ ಬಂಡಾಯದ ಬಿಸಿ ಹೆಚ್ಚಿದ್ದು ರಾಜಕೀಯ ರಂಗಿನಾಟ ಸಾರ್ವಜನಿಕರ ಕುತೂಹಲ ಹೆಚ್ಚಿಸಿದೆ.ತಾವು ಬಯಸಿದ ಪಕ್ಷಗಳಿಂದ ಟಿಕೆಟ್ ಪಡೆಯುವುದಕ್ಕೆ ಆಕಾಂಕ್ಷಿಗಳು ನಡೆಸಿದ ಭರಾಟೆ, ಅದಕ್ಕಾಗಿ ರಾಜ್ಯ ಮತ್ತು ರಾಷ್ಟ್ರನಾಯಕರ ದುಂಬಾಲು ಬಿದ್ದದ್ದು, ಶತಾಯ ಗತಾಯ ಎಂಬಂತೆ ಟಿಕೆಟ್ ಪಡೆದದ್ದು ಇಷ್ಟು ದಿನಗಳ ವಿಶೇಷವಾಗಿತ್ತು.ವಿವಿಧ ಪಕ್ಷಗಳ ಅಭ್ಯರ್ಥಿಗಳು ಬಾರಿಬಾರಿಗೆ ಪೂಜೆ ಪುನಸ್ಕಾರ, ರಾಹುಕಾಲ, ಯಮಗಂಡಕಾಲ ಇತ್ಯಾದಿಗಳನ್ನು ನೋಡಿ ತಂತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ಬಿ.ಫಾರಂ ನೀಡಿಯೇ ನಾಮಪತ್ರ ಸಲ್ಲಿಸಿದ್ದಾರೆ. ಏನೇ ಟಿಕೆಟ್ ಗಿಟ್ಟಿಸಿಕೊಂಡಿದ್ದೇವೆ ಎಂದರೂ ಈಗ ಪಕ್ಷಗಳಲ್ಲಿ ಉಲ್ಬಣಗೊಂಡಿರುವ ಬಂಡಾಯದ ಬಿಸಿ ಇವರ ಪಾಲಿನ ಬಿಸಿ ತುಪ್ಪವಾಗಿದೆ. ಇದನ್ನು ತಣ್ಣಗಾಗಿಸಲು ಈಗ ಆತ್ಮೀಯರಿಂದ, ವಿವಿಧ ಸಮುದಾಯದ ಮುಖಂಡರ ಮೊರೆ ಹೋಗಿದ್ದಾರೆ.ಏ.18 (ಗುರುವಾರ) ನಾಮಪತ್ರ ಪರಿಶೀಲನೆ ನಡೆಯಲಿದೆ. ಹಿಂಪಡೆಯಲು ಏಪ್ರಿಲ್ 20 ಮಾತ್ರ ಅಂತಿಮ ದಿನವಾಗಿದೆ. ಕ್ಷೇತ್ರದಲ್ಲಿ ಈವರೆವಿಗೂ ಯಾವುದೇ ಪಕ್ಷದ ಅಭ್ಯರ್ಥಿಗಳು ಮತಯಾಚನೆಗೆ ತೆರಳಿಲ್ಲ. ಎಲ್ಲ ನಿಚ್ಚಳವಾಗಲಿ ಎಂದು ಕಾಯುತ್ತಿರುವಂತಹ ಸನ್ನಿವೇಶ ಎಲ್ಲ ಪಕ್ಷಗಳಲ್ಲಿ ಕಂಡು ಬರುತ್ತಿದೆ.ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 258 ಮತಗಟ್ಟೆಗಳಿಗೆ ಸುಮಾರು ಮುನ್ನೂರಕ್ಕೂ ಹೆಚ್ಚು ಗ್ರಾಮಗಳು ಸೇರಿವೆ. ಪ್ರತಿ ಗ್ರಾಮದಲ್ಲಿನ ಮತದಾರರ ಬಳಿ ತೆರಳಿ ಮತಭಿಕ್ಷೆ ಬೇಡಲು ಅಭ್ಯರ್ಥಿಗಳ ಪಾಲಿಗೆ ಉಳಿದಿರುವುದು ಇನ್ನು ಹದಿಮೂರೇ ದಿನಗಳು. ವಿವಿಧ ಪಕ್ಷದಲ್ಲಿನ ಹೊಸ ಮುಖದ ಅಭ್ಯರ್ಥಿಗಳಿಗೆ ಈ ಹದಿಮೂರು ದಿನಗಳು ಕಠಿಣ ಎನಿಸಿದರೂ ಹಾಲಿ ಮತ್ತು ಮಾಜಿ ಶಾಸಕರಿಗೆ ಅಷ್ಟೇನೂ ಕಷ್ಟ ಎನಿಸುವುದಿಲ್ಲ ಎಂಬ ವಾತಾವರಣ ಇದೆ.ದಿನಕ್ಕೊಂದು ತಿರುವು ಪಡೆಯುತ್ತಿರುವ ಚುನಾವಣಾ ಅಖಾಡದಲ್ಲಿ ಪಕ್ಷೇತರರು ಎಷ್ಟು ಮಂದಿ ಉಳಿಯುತ್ತಾರೆ ? ನೇರವಾಗಿ ನಾಮಪತ್ರ ಹಿಂಪಡೆಯದೆ ಕಣದ್ಲ್ಲಲೇ ಉಳಿದು ತಟಸ್ಥರಾಗಬಲ್ಲ ಅಭ್ಯರ್ಥಿಗಳು ಯಾರಿರಬಹುದು? ಅಂಥವರ ಬೆಂಬಲಿಗರು ಎಷ್ಟು? ಅವರ ಸಮುದಾಯದಲ್ಲಿರುವ ಮತಗಳು ಎಷ್ಟು... ಎಂಬ ಲೆಕ್ಕಚಾರದಲ್ಲಿ ಗಟ್ಟಿ ಅಭ್ಯರ್ಥಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.ಅಂತಿಮ ದಿನದ ವೇಳೆಗೆ ಒಟ್ಟು ಹದಿನಾರು ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಈಗಾಗಲೇ ಪಕ್ಷೇತರರಾಗಿ ಕಣದಲ್ಲಿರುವ ಅಭ್ಯರ್ಥಿಗಳ ಮನವೊಲಿಸುವ `ಗಂಭೀರ ಪ್ರಯತ್ನ'ಗಳು ನಡೆಯುತ್ತಿವೆ. ಇದರಲ್ಲಿ ಜೆ.ಡಿ.ಎಸ್ ಟಿಕೆಟ್ ವಂಚಿತ ಜಿ.ಚಂದ್ರಣ್ಣ ಬಿಜೆಪಿ ಯಿಂದ ಉಮೇದುವಾರಿಕೆ ಖಚಿತ ಪಡಿಸಿಕೊಂಡಿದ್ದರೆ ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಡಿ.ಆರ್.ನಾರಾಯಣಸ್ವಾಮಿ ಶ್ರಿರಾಮುಲು ಫ್ಯಾನಿಗೆ ತಮ್ಮ ಭವಿಷ್ಯ ಒಡ್ಡಿ ನಿಂತಿದ್ದಾರೆ. ಎಸ್.ಜಿ.ನಾರಾಯಣಸ್ವಾಮಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಯತ್ನಿಸಿ ವಿಫಲರಾದ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಮಾಜಿ ಶಾಸಕ ಮುನಿನರಸಿಂಹಯ್ಯ ಹಾಲಿ ಶಾಸಕ ಕೆ.ವೆಂಕಟಸ್ವಾಮಿ ಅವರ ವಿರುದ್ಧ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಜೆ.ಡಿ.ಎಸ್‌ನಿಂದ ತಮಗೆ ಟಿಕೆಟ್ ಸಿಗಲಿಲ್ಲ ಎಂಬ ಕಾರಣವೊಡ್ಡಿ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಪಕ್ಷದ ಯುವ ಮುಖಂಡ ಬಿ.ಕೆ.ಶಿವಪ್ಪ, ಕೆ.ಎಸ್.ಸ್ವಾಮಿ ಪಕ್ಷೇತರರಾಗಿ ತಮ್ಮ ಉಮೇದುವಾರಿಕೆ ಸಲ್ಲಿಸ್ದ್ದಿದಾರೆ. ಕೆ.ಜೆ.ಪಿಯಿಂದಲೂ ಟಿಕೆಟ್ ವಂಚಿತ ರಾಮಾನಾಯ್ಕ ಪಕ್ಷೇತರರಾಗಿ ಕಣದಲ್ಲಿದ್ದಾರೆ.ಈಗಿನ ಪರಿಸ್ಥಿತಿಯಲ್ಲಿ ಬಂಡಾಯ ಮತ್ತು ಪಕ್ಷೇತರ ಅಭ್ಯರ್ಥಿಗಳ ನಿಜಬಣ್ಣ ಬಯಲಾಗಲು ಇನ್ನೂ ಮೂರು ದಿನ ಕಾಲಾವಕಾಶವಿದೆ.

ಪ್ರತಿಕ್ರಿಯಿಸಿ (+)