ಪಕ್ಷೇತರರ ಅನರ್ಹತೆ: ಹೈಕೋರ್ಟ್ ಅಸ್ತು

7

ಪಕ್ಷೇತರರ ಅನರ್ಹತೆ: ಹೈಕೋರ್ಟ್ ಅಸ್ತು

Published:
Updated:

ಬೆಂಗಳೂರು: ಮತದಾರರ ನಿರೀಕ್ಷೆ ಮೀರಿದರೆ ಜನಪ್ರತಿನಿಧಿಗಳು ಅಪಾಯದ ಅಂಚನ್ನು ತಲುಪುತ್ತಾರೆ ಎನ್ನುವ ಸೂಚ್ಯ ಸಂದೇಶ ಹಾಗೂ ಪರೋಕ್ಷ ಎಚ್ಚರಿಕೆ ನೀಡುವ ಮೂಲಕ ಐವರು ಪಕ್ಷೇತರ ಶಾಸಕರ ಅನರ್ಹತೆ ಆದೇಶವನ್ನು ಹೈಕೋರ್ಟ್ ಸೋಮವಾರ ಎತ್ತಿ ಹಿಡಿದಿದೆ.ಬಿಜೆಪಿ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆದ ಕಾರಣಕ್ಕೆ ಅನರ್ಹಗೊಳಿಸಿದ ಕಳೆದ ಅ.10ರ ವಿಧಾನ ಸಭಾಧ್ಯಕ್ಷರ ಆದೇಶದ ರದ್ದತಿಗೆ ಕೋರಿ ಪಕ್ಷೇತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಮೋಹನ ಶಾಂತನಗೌಡರ್, ಎಸ್.ಅಬ್ದುಲ್ ನಜೀರ್ ಹಾಗೂ ಎ.ಎಸ್.ಬೋಪಣ್ಣ ಅವರನ್ನು ಒಳಗೊಂಡ ಪೂರ್ಣಪೀಠ ಒಮ್ಮತದಿಂದ ತಿರಸ್ಕರಿಸಿದೆ. ಇದರೊಂದಿಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ಸಂಖ್ಯಾಬಲದ ದೃಷ್ಟಿಯಿಂದ ಮತ್ತೆ ಮೇಲುಗೈ ಪಡೆದಂತಾಗಿದೆ.ಮೂರು ಪ್ರಶ್ನೆಗಳಿಗೆ ಉತ್ತರ:192 ಪುಟಗಳ ಈ ತೀರ್ಪಿನಲ್ಲಿ ಮೂರು ಪ್ರಶ್ನೆಗಳಿಗೆ ನ್ಯಾಯಮೂರ್ತಿಗಳು ಉತ್ತರ ನೀಡಿದ್ದಾರೆ. ಮತದಾರರು ನೀಡಿರುವ ದೂರಿನ ಮೇಲೆ ಅನರ್ಹಗೊಳಿಸಿರುವುದು ಸರಿಯೇ, ಸ್ಪೀಕರ್ ಅವರಿಗೆ ಈ ರೀತಿ ಆದೇಶ ಹೊರಡಿಸಿರುವ ಅಧಿಕಾರ ಸಂವಿಧಾನದತ್ತವಾಗಿ ಇದೆಯೇ ಹಾಗೂ ಈ ಆದೇಶವು ಪೂರ್ವಗ್ರಹ ಪೀಡಿತವಾಗಿದೆಯೇ ಎಂಬುದಕ್ಕೆ ಮೂವರು ನ್ಯಾಯಮೂರ್ತಿಗಳು ಒಮ್ಮತದ ಉತ್ತರ ನೀಡಿದ್ದಾರೆ.ಮತದಾರ ಮೂಕ ಪ್ರೇಕ್ಷಕನಾಗಲಾರ: ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಕಳೆದ ಅ. 11ರಂದು ಬಹುಮತ ಸಾಬೀತು ಪಡಿಸಬೇಕಿತ್ತು. ಅದಕ್ಕಾಗಿಯೇ ತಮ್ಮ ವಿರುದ್ಧ ಕ್ಷೇತ್ರದ ಮತದಾರರಿಂದ ಅರ್ಜಿ ಹಾಕಿಸಿದ್ದಾರೆ. ಸ್ಪೀಕರ್ ಅವರು ಅರ್ಜಿಯಲ್ಲಿನ ಸತ್ಯಾಸತ್ಯತೆ ಪರಿಶೀಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಬೇಕಿತ್ತು. ಮುಖ್ಯಮಂತ್ರಿ ಸೇರಿದಂತೆ ಬಿಜೆಪಿಯ ಯಾರೊಬ್ಬರ ಒತ್ತಡಕ್ಕೂ ಮಣಿಯದೆ ಪಕ್ಷಾತೀತವಾದ ತೀರ್ಮಾನಕ್ಕೆ ಬರಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಕಾನೂನು ಬಾಹಿರವಾಗಿ ಅವರು ವರ್ತಿಸಿದ್ದಾರೆ ಎನ್ನುವುದು ಈ ಅನರ್ಹರ ವಾದವಾಗಿತ್ತು.ತಾವು ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುವವರೆಗೂ ಸ್ಪೀಕರ್ ಅವರ ಮುಂದೆ ತಮ್ಮ ವಿರುದ್ಧ ಯಾವುದೇ ದೂರು ಕೂಡ ದಾಖಲು ಆಗಿರಲಿಲ್ಲ. ಬಿಜೆಪಿಯ ಸದಸ್ಯರೇ ಆಗಿರಲಿ, ಪ್ರತಿಪಕ್ಷದವರೇ ಆಗಿರಲಿ ಅಥವಾ ಮತದಾರರೇ ಆಗಿರಲಿ, ಯಾರೊಬ್ಬರೂ ತಮ್ಮ ವಿರುದ್ಧ ಬೆರಳು ಮಾಡಿ ತೋರಿಸಿರಲಿಲ್ಲ. ಆದರೆ ಆ ನಂತರ ತಮ್ಮ ಕ್ಷೇತ್ರಗಳ ಮತದಾರರಿಂದಲೇ ದೂರು ಸ್ವೀಕರಿಸಿ ತಮ್ಮನ್ನು ಅನರ್ಹಗೊಳಿಸಿದ್ದಾರೆ ಎಂದು ಅವರು ವಾದಿಸಿದ್ದರು.ಆದರೆ ಈ ವಾದಗಳನ್ನು ಪೀಠ ತಳ್ಳಿಹಾಕಿದೆ. ಕಾನೂನು ಉಲ್ಲಂಘಿಸಿ ಪಕ್ಷಾಂತರ ಮಾಡಿದಂತಹ ಸಂದರ್ಭದಲ್ಲಿ ಇತರ ಶಾಸಕರು ಪರಸ್ಪರ ಸಹಮತದಿಂದ ಸುಮ್ಮನೆ ಉಳಿಯಬಹುದು. ಹಾಗಂತ ತಾವೇ ಆರಿಸಿ ಕಳುಹಿಸಿರುವ ಪ್ರತಿನಿಧಿಗಳು ನಿಯಮಬಾಹಿರವಾಗಿ ವರ್ತಿಸಿದಾಗ ಮತದಾರರು ಮೂಕ ಪ್ರೇಕ್ಷಕರಂತೆ ಕುಳಿತುಕೊಳ್ಳುವಲ್ಲಿ ಅರ್ಥವಿಲ್ಲ. ಆತ ಹಾಗೆ ಮಾಡಲೂ ಬಾರದು ಎಂಬುದು ಪೀಠದ ಅಭಿಮತ.‘ಯಾವುದೇ ಮತದಾರ ತಮ್ಮ ಕ್ಷೇತ್ರದ ಜನಪ್ರತಿನಿಧಿ ಪಕ್ಷಾಂತರ ಮಾಡಿದರೆ, ದೂರು ದಾಖಲು ಮಾಡಬಾರದು ಎಂದು ಸಂವಿಧಾನದ 10ನೇ ಪರಿಚ್ಛೇದದಲ್ಲಿ ಇಲ್ಲ. ಬದಲಿಗೆ ಆ ಹಕ್ಕನ್ನು ಪ್ರತಿ ಪ್ರಜೆಗೂ ನೀಡಲಾಗಿದೆ’ ಎಂದು ಅವರು ವಿವರಿಸಿದ್ದಾರೆ.ಸಹಜ ನ್ಯಾಯ ಮೀರಿಲ್ಲ: ಸ್ಪೀಕರ್ ಅವರ ಆದೇಶ ಸಹಜ ನ್ಯಾಯದಿಂದ ಕೂಡಿದೆ ಎಂದು ಪೀಠ ಅಭಿಪ್ರಾಯ ಪಟ್ಟಿದೆ. ತಾವು 2008ರಿಂದಲೇ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ಎಂದಿಗೂ ಬಿಜೆಪಿ ಸದಸ್ಯರಾಗಿರಲಿಲ್ಲ. ಬದಲಿಗೆ ಪಕ್ಷೇತರರಾಗಿಯೇ ಮುಂದುವರಿದಿದ್ದೇವೆ. ಆದರೆ ತಾವು ಸರ್ಕಾರಕ್ಕೆ ಸೂಚಿಸಿದ್ದ ಬೆಂಬಲ ವಾಪಸ್ ಪಡೆದ ಕೇವಲ 14 ಗಂಟೆಯ ಒಳಗೆಯೇ ಬಿಜೆಪಿಯ ಸದಸ್ಯರು ಎಂಬಂತೆ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿದೆ. ಇದು ಸಂವಿಧಾನದ ಉಲ್ಲಂಘನೆ ಎಂಬ ಅನರ್ಹ ಶಾಸಕರ ವಾದದಲ್ಲಿ ಹುರುಳಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.ಈ ಬಗ್ಗೆ ಸ್ಪಷ್ಟಪಡಿಸಿರುವ ಅವರು, ಅ.8ರಂದು ಪಕ್ಷೇತರ ಶಾಸಕರಿಗೆ ಸ್ಪೀಕರ್ ನೋಟಿಸ್ ನೀಡಿದ್ದಾರೆ. ಅ.10ರ ಮಧ್ಯಾಹ್ನ 3.30ಕ್ಕೆ ವಿಚಾರಣೆಗೆ ಅವರನ್ನು ಕರೆಸಲಾಗಿತ್ತು. 9ರಂದೇ ಅವರಿಗೆ ಈ ಬಗ್ಗೆ ತಿಳಿಸಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಅರ್ಜಿದಾರರಾಗಲೀ, ಅವರ ಪರ ವಕೀಲರಾಗಲೀ ತಮಗೆ ಹೆಚ್ಚಿನ ಕಾಲಾವಕಾಶ ಬೇಕು ಎಂದು ಸ್ಪೀಕರ್ ಅವರನ್ನು ಕೋರುವುದಾಗಲೀ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ವಾದ, ಪ್ರತಿವಾದಗಳನ್ನು ಆಲಿಸಿ ಸ್ಪೀಕರ್ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನಿಗದಿತ ಅವಧಿಯಲ್ಲಿ ವಕೀಲರಿಗೆ ತಲುಪಿವೆ ಎಂಬ ಬಗ್ಗೆಯೂ ತಿಳಿದುಬಂದಿದೆ.

ಇದರಿಂದ ಸಹಜ ನ್ಯಾಯದ ಉಲ್ಲಂಘನೆ ಎಂಬ ಆರೋಪ ಸರಿಯಲ್ಲ’ ಎಂದು ವಿವರಿಸಲಾಗಿದೆ. ಪೂರ್ವಗ್ರಹ ಪೀಡಿತವಲ್ಲ: ಸ್ಪೀಕರ್ ಅವರ ಆದೇಶ ಪೂರ್ವಗ್ರಹಪೀಡಿತವಾಗಿದೆ ಎಂದು ಅರ್ಜಿದಾರರು ಮಾಡಿರುವ ಆರೋಪವನ್ನೂ ನ್ಯಾಯಮೂರ್ತಿಗಳು ತಳ್ಳಿಹಾಕಿದ್ದಾರೆ.ಭಾರತೀಯ ಜನತಾ ಪಕ್ಷ ರಚಿಸಿರುವ ಸಚಿವ ಸಂಪುಟಕ್ಕೆ ಅರ್ಜಿದಾರರು ಸೇರ್ಪಡೆಗೊಂಡಿದ್ದಾರೆ. ಪಕ್ಷದ ಎಲ್ಲ ಸಭೆಗಳಲ್ಲಿ ಪಾಲ್ಗೊಂಡು ಸಂಬಂಧಿತ ನೋಂದಣಿ ಪುಸ್ತಕದಲ್ಲಿ ಸಹಿ ಮಾಡಿದ್ದಾರೆ. ಪಕ್ಷದ ಮುಖ್ಯ ಸಚೇತಕರು ಹೊರಡಿಸಿರುವ ವಿಪ್ ಅನ್ನು ಸ್ವೀಕರಿಸಿ, ಅದರಂತೆ ನಡೆದುಕೊಂಡಿದ್ದಾರೆ, ಇದೇ ಪಕ್ಷದಿಂದ ನಡೆದಂತಹ ಕಾರ್ಯಕ್ರಮಗಳಲ್ಲಿ ಪಕ್ಷದ ಬಾವುಟದ ಜೊತೆ ಪಾಲ್ಗೊಂಡಿದ್ದಾರೆ. ಇವೆಲ್ಲವುಗಳನ್ನು ಗಣನೆಗೆ ತೆಗೆದುಕೊಂಡೇ ಸ್ಪೀಕರ್ ಆದೇಶ ಹೊರಡಿಸಿರುವುದರಿಂದ ಅದು ಅಸಾಂವಿಧಾನಿಕ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.ಅ.11ರಂದು ಮುಖ್ಯಮಂತ್ರಿಯವರು ವಿಶ್ವಾಸಮತ ಯಾಚನೆ ಮಾಡಲಿದ್ದ ಹಿನ್ನೆಲೆಯಲ್ಲಿ, ತರಾತುರಿಯಿಂದ ಅವರ ಸೂಚನೆ ಮೇರೆಗೆ ಸ್ಪೀಕರ್ ಬೋಪಯ್ಯನವರು ತಮ್ಮನ್ನು ಅನರ್ಹಗೊಳಿಸಿದ್ದಾರೆ ಎನ್ನುವುದು ಅರ್ಜಿದಾರರ ಪ್ರಮುಖ ಆರೋಪವಾಗಿತ್ತು. ಆದರೆ ಈ ಬಗ್ಗೆ ಅರ್ಜಿಯಲ್ಲಿ ಮಾಡಿರುವ ಆರೋಪದ ಹೊರತಾಗಿ ಯಾವುದೇ ರೀತಿಯ ಸೂಕ್ತ ದಾಖಲೆಗಳನ್ನು ಒದಗಿಸಲು ಅವರು ವಿಫಲರಾಗಿದ್ದಾರೆ. ಅಷ್ಟೇ ಅಲ್ಲದೇ ಈ ವಿಷಯ ತಮಗೆ ತಿಳಿಸಿದವರು ಯಾರು ಎಂಬ ಬಗ್ಗೆಯೂ ಅರ್ಜಿದಾರರು ಬಹಿರಂಗಪಡಿಸಿಲ್ಲ. ಈ ಹಿನ್ನೆಲೆಯಲ್ಲಿ ಕೇವಲ ಊಹೆಯ ಆಧಾರದ ಮೇಲೆ ಸ್ಪೀಕರ್ ಅವರು ಪೂರ್ವಗ್ರಹಪೀಡಿತರಾಗಿ ಆದೇಶ ಹೊರಡಿಸಿದ್ದಾರೆ ಎನ್ನುವಲ್ಲಿ ಅರ್ಥವಿಲ್ಲ ಎಂದೂ ತೀರ್ಪಿನಲ್ಲಿ ವಿವರಿಸಲಾಗಿದೆ.ಸುಪ್ರೀಕೋರ್ಟ್‌ಗೆ ಮೇಲ್ಮನವಿ: ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅನರ್ಹಗೊಂಡ ಪಕ್ಷೇತರ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಲು ತೀರ್ಮಾನಿಸಿದ್ದಾರೆ.ಹೈಕೋರ್ಟ್ ತೀರ್ಪು ಸೋಮವಾರ ಸಂಜೆ ಹೊರಬಿದ್ದ ನಂತರ ಐದು ಮಂದಿ ಪಕ್ಷೇತರರು ಪಿ.ಎಂ.ನರೇಂದ್ರಸ್ವಾಮಿ ಮನೆಯಲ್ಲಿ ತುರ್ತು ಸಭೆ ಸೇರಿ, ಈ ನಿರ್ಧಾರಕ್ಕೆ ಬಂದರು. ಅನರ್ಹರಾದ ಶಿವರಾಜ ತಂಗಡಗಿ, ಡಿ.ಸುಧಾಕರ್, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ ಈ ಸಭೆಯಲ್ಲಿ ಹಾಜರಿದ್ದರು.‘ಹೈಕೋರ್ಟ್ ತೀರ್ಪಿನ ವಿರುದ್ಧ ನ್ಯಾಯ ಪಡೆಯುವ ವಿಶ್ವಾಸ ಇದೆ. ರಾಜ್ಯದ ಜನರಿಗೆ ವಸ್ತು ಸ್ಥಿತಿ ಏನು ಎನ್ನುವುದು ಚೆನ್ನಾಗಿ ಗೊತ್ತಿದೆ. ಇಂತಹ ಸನ್ನಿವೇಶದಲ್ಲಿ ಹೈಕೋರ್ಟ್ ತೀರ್ಪಿನ ಬಗ್ಗೆ ಏನನ್ನೂ ಹೇಳುವುದಿಲ್ಲ. ಬದಲಿಗೆ ಕಾನೂನು ಹೋರಾಟ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ’ ಎಂದು ನರೇಂದ್ರಸ್ವಾಮಿ ಹೇಳಿದರು.

‘ಅಧಿಕಾರಕ್ಕೆ ಬರುವವರೆಗೆ ಚೆನ್ನಾಗಿ ಬಳಸಿಕೊಂಡು, ನಂತರ ಬೆನ್ನಿಗೆ ಚೂರಿ ಹಾಕಲಾಗಿದೆ. ಇವತ್ತು ಐದು ವಿಧಾನಸಭಾ ಕ್ಷೇತ್ರಗಳು ಅನಾಥವಾಗಿವೆ. ಒಟ್ಟಿನಲ್ಲಿ ಯಾರು ಯಾರಿಂದ ಬದುಕಿದರು ಎನ್ನುವುದನ್ನೇ ಮರೆತುಬಿಟ್ಟಿದ್ದಾರೆ. ಬದುಕಿಸಿದವರ ಕಗ್ಗೊಲೆ ಆಗಿದೆ’ ಎಂದು ಅವರು ಕೆಂಡಕಾರಿದರು.ಶಿವರಾಜ್ ತಂಗಡಿ ಮಾತನಾಡಿ, ‘ನಮ್ಮನ್ನು ಮೆಟ್ಟಿಲಾಗಿ ಬಳಸಿಕೊಂಡು ಅಧಿಕಾರಕ್ಕೆ ಬಂದ ಯಡಿಯೂರಪ್ಪ ಆನಂತರ ಆಪರೇಷನ್ ಕಮಲದ ಮೂಲಕ ಕುರ್ಚಿ ಭದ್ರಪಡಿಸಿಕೊಂಡರು. ಈಗ ನಾವು ಅವರಿಗೆ ಬೇಕಾಗಿಲ್ಲ. ಹೀಗಾಗಿ ಅನರ್ಹಗೊಳಿಸಿ, ನಮ್ಮ ವಿರುದ್ಧ ವಕ್ರದೃಷ್ಟಿ ಬೀರಿದರು’ ಎಂದು ಆಕ್ಷೇಪಿಸಿದರು.ಒಂದೆರಡು ದಿನಗಳಲ್ಲೇ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆದಿದ್ದು, ಪಕ್ಷೇತರರು ಆದಷ್ಟು ಬೇಗ ದೆಹಲಿಗೆ ತೆರಳಿ ವಕೀಲರನ್ನು ಸಂಪರ್ಕಿಸುವ ಸಾಧ್ಯತೆ ಇದೆ. 

 

ಮರುಪರಿಶೀಲಿಸಲಿ: ಪರಮೇಶ್ವರ್

ತುಮಕೂರು: ಐವರು ಪಕ್ಷೇತರ ಶಾಸಕರ ಅನರ್ಹತೆ ಎತ್ತಿಹಿಡಿದಿರುವ ಹೈಕೋರ್ಟ್ ತೀರ್ಪು ಮರುಪರಿಶೀಲಿಸುವುದು ಅಗತ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನತೆ ಅಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಆದರೆ, ಇಂತಹ ತೀರ್ಪಿನಿಂದಾಗಿ ಜನತೆ ನ್ಯಾಯ ವ್ಯವಸ್ಥೆ ಮೇಲೆ ಇಟ್ಟುಕೊಂಡಿರುವ ಗೌರವವೇ ಪ್ರಶ್ನಾರ್ಹವಾಗುವ ಆತಂಕವಿದೆ. ಈ ತೀರ್ಪು ‘ಬೆಂಚ್ ಮಾರ್ಕ್’ ಆಗುತ್ತದೆ. ನಾವೆಲ್ಲರೂ ನ್ಯಾಯಸಮ್ಮತ ತೀರ್ಪು ನಿರೀಕ್ಷೆ ಮಾಡಿದ್ದೆವು.ಆದರೆ ಈಗ ಬಂದಿರುವ ತೀರ್ಪು ಗಮನಿಸಿದರೆ ಪಕ್ಷೇತರ ಶಾಸಕರಿಗೆ ಅನ್ಯಾಯ ಆಗಿದೆ ಎನಿಸುತ್ತಿದೆ. ನ್ಯಾಯಾಲಯದ ತೀರ್ಪನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡಬೇಕಾಗುತ್ತದೆ ಎಂದರು.ಪಕ್ಷೇತರ ಶಾಸಕರು ಯಾವುದೇ ಸರ್ಕಾರ ಅಥವಾ ಪಕ್ಷದ ಸಹ ಸದಸ್ಯರಾಗಲು ಅವಕಾಶ ಇದೆ. ಇದೊಂದೇ ಕಾರಣವಿಟ್ಟುಕೊಂಡು ಸ್ಪೀಕರ್, ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಶಾಸಕರನ್ನು ಅನರ್ಹಗೊಳಿಸಿರುವುದು ನ್ಯಾಯಸಮ್ಮತವಲ್ಲ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವೇ ಅಲುಗಾಡುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಪ್ರತಿಪಕ್ಷಗಳು ನಿತ್ಯ ಕಿರುಕುಳ ನೀಡುತ್ತಿವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಳಲುತೋಡಿಕೊಂಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ‘ಇದು ನಿಜಕ್ಕೂ ಬಿಗ್ ಜೋಕ್. ಯಾವುದಕ್ಕೆ ಕಿರುಕುಳ? ಎಂತಹ ಕಿರುಕುಳ? ಎನ್ನುವುದನ್ನು ಯಡಿಯೂರಪ್ಪ ಸ್ಪಷ್ಟಪಡಿಸಬೇಕು. ಅವರು ನಡೆಸಿರುವ ಭ್ರಷ್ಟಾಚಾರ, ಹಗರಣಗಳನ್ನು ಪ್ರಶ್ನಿಸುವುದನ್ನೇ ಕಿರುಕುಳವಾಗಿ ಭಾವಿಸಿದರೆ ಅದಕ್ಕಿಂತ ದೊಡ್ಡ ಜೋಕ್ ಮತ್ತೊಂದಿಲ್ಲ.

ಒಳ್ಳೆಯ ಆಡಳಿತ ನೀಡಿದ್ದರೆ ಅವರಿಗೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ’ ಎಂದು ಮರುಕಪಟ್ಟರು.ಧರ್ಮಕ್ಕೆ ಖಂಡಿತ ಜಯ

ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಕ್ರಮ ಸರಿ ಎಂದು ಹೈಕೋರ್ಟ್ ಪೂರ್ಣಪೀಠ ತೀರ್ಪು ನೀಡಿದೆ. ಈಗ ಪಕ್ಷೇತರರು ಸುಪ್ರೀಂಕೋರ್ಟ್ ಮುಂದೆ ಹೋಗುವ ಅವಕಾಶ ಇದೆ. ಅವರು ಅದನ್ನು ಬಳಸಿಕೊಳ್ಳುತ್ತಾರೆ.ಎರಡು ದಿನಗಳ ಹಿಂದೆ ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ರಾಜ್ಯದ ಕಾನೂನು ಸಚಿವರು, ‘ತೀರ್ಪು ಸರ್ಕಾರದ ಪರವಾಗಿಯೇ ಬರುತ್ತದೆ’ ಎಂದು ಖಚಿತವಾಗಿ ಹೇಳಿದ್ದರು. ಈ ವಿಷಯ ಅವರಿಗೆ ಹೇಗೆ ತಿಳಿದಿತ್ತು? ಅವರ ಹೇಳಿಕೆಯನ್ನು ನ್ಯಾಯಾಲಯ ಗಮನಿಸಿದೆಯೇ? ಸರ್ಕಾರ ವಾಮಮಾರ್ಗ ಅನುಸರಿಸಿ ತೀರ್ಪನ್ನು ಮೊದಲೇ ತಿಳಿದುಕೊಂಡಿತ್ತೇ? ಎಂಬ ಅನುಮಾನ ಮೂಡುತ್ತದೆ.ಬಿಜೆಪಿ ಸರ್ಕಾರದ ವಿರುದ್ಧದ ಕಾನೂನು ಹೋರಾಟ ನ್ಯಾಯಾಲಯದಲ್ಲಿ ಮುಂದುವರಿಯುತ್ತದೆ. ಅಂತಿಮವಾಗಿ ಜನತಾ ನ್ಯಾಯಾಲಯದಲ್ಲಿ ಹೋರಾಟ ನಡೆಯುತ್ತದೆ. ಅಲ್ಲಿ ಧರ್ಮಕ್ಕೆ ಖಂಡಿತವಾಗಿಯೂ ಜಯ ದೊರೆಯುತ್ತದೆ ಎಂಬ ವಿಶ್ವಾಸವಿದೆ.

 - ಎಚ್.ಡಿ.ಕುಮಾರಸ್ವಾಮಿ,

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ

ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿಯ ವ್ಯಕ್ತಿತ್ವ ಹಾಗೂ ಆತ ಪ್ರತಿನಿಧಿಸುವ ಪಕ್ಷದ ಆಧಾರದ ಮೇಲೆ ಮತದಾರ ಮತ ಚಲಾಯಿಸುತ್ತಾನೆ. ನಮ್ಮ ಪ್ರತಿನಿಧಿ ಇದೇ ರೀತಿ ಇರಬೇಕು ಎಂಬುದು ಬಹುತೇಕ ಮತದಾರರ ಅಪೇಕ್ಷೆ ಆಗಿರುತ್ತದೆ. ಆದರೆ ಚುನಾಯಿತ ಪ್ರತಿನಿಧಿ ಅದನ್ನು ಮೀರಿ ನಡೆದುಕೊಂಡಾಗ, ಇದನ್ನು ಗಮನಿಸಿಯೂ ಇತರ ಶಾಸಕರು ಚಕಾರ ಎತ್ತದೇ ಹೋದಾಗ ಅದನ್ನು ಸ್ಪೀಕರ್ ಅವರ ಗಮನಕ್ಕೆ ತರುವುದು ಪ್ರಜೆಯ ಕರ್ತವ್ಯ.

ನ್ಯಾ. ಮೋಹನ ಶಾಂತನಗೌಡರ್, ನ್ಯಾ. ಎಸ್. ಅಬ್ದುಲ್ ನಜೀರ್,   ನ್ಯಾ. ಎ.ಎಸ್. ಬೋಪಣ್ಣ

ಪಾಠ

 ಪಕ್ಷೇತರ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪು ಐತಿಹಾಸಿಕವಾದುದು. ಆಯಾರಾಂ ಗಯಾರಾಂಗಳಿಗೆ ಇದೊಂದು ಪಾಠ.  ಕರ್ನಾಟಕದಲ್ಲಿ ಅಷ್ಟೇ ಅಲ್ಲ, ದೇಶದಲ್ಲಿ ಈ ರೀತಿಯ ರಾಜಕಾರಣ ಮಾಡುವವರಿಗೆ ಕರ್ನಾಟಕದ ಹೈಕೋರ್ಟ್ ತೀರ್ಪು ತಕ್ಕ ಪಾಠ ಕಲಿಸಿದೆ. 

 - ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

 ಹೇಗೆ?

ಈ ತೀರ್ಪು ನ್ಯಾಯಯುತವಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಪಕ್ಷೇತರರು ಸರ್ಕಾರ ಸೇರುವುದಕ್ಕೆ ಅವಕಾಶ ಇದೆ.  ಪಕ್ಷದ ಸಭೆ-ಸಮಾರಂಭಗಳಿಗೆ ಹೋಗಿದ್ದೇ ತಪ್ಪು ಎನ್ನುವುದಾದರೆ ಹೇಗೆ?

 ಡಾ.ಜಿ.ಪರಮೇಶ್ವರ್,   ಅಧ್ಯಕ್ಷರು, ಪ್ರದೇಶ ಕಾಂಗ್ರೆಸ್ ಸಮಿತಿ

 ಬೆಚ್ಚಿಬಿದ್ದೆವು

ನಾವು ತೀರ್ಪು ಕೇಳಲು ನ್ಯಾಯಾಲಯಕ್ಕೆ ಹೋಗಿದ್ದೆವು. ಆದರೆ, ತೀರ್ಪು ಕೇಳಿ ಬೆಚ್ಚಿಬಿದ್ದೆವು’ 

ಡಿ.ಸುಧಾಕರ್ ಅನರ್ಹಗೊಂಡ ಶಾಸಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry