ಬುಧವಾರ, ಜೂನ್ 23, 2021
30 °C

ಪಕ್ಷ ನಿಷ್ಠ, ಕಳಂಕ ರಹಿತ ಸಜ್ಜನ ರಾಜಕಾರಣಿ

ಪ್ರಜಾವಾಣಿ ವಾರ್ತೆ/ ಸಿ.ಕೆ.ಮಹೇಂದ್ರ Updated:

ಅಕ್ಷರ ಗಾತ್ರ : | |

ತುಮಕೂರು: ಜನ ಸಂಘದ ರಾಜ್ಯ ಅಧ್ಯಕ್ಷ­ರಾಗಿದ್ದರು. ನಾಲ್ಕು ಸಲ ಜಿಲ್ಲೆಯನ್ನು ಲೋಕ­ಸಭೆ­ಯಲ್ಲಿ ಪ್ರತಿನಿಧಿಸಿದವರು. ಲೋಕಸಭೆ­ಉಪಸಭಾಧ್ಯಕ್ಷರಾದ ರಾಜ್ಯದ ಮೊದಲ ಸಂಸದ. ಇಷ್ಟಿದ್ದು ಪಕ್ಷ ಅವರಿಗೆ ಕಳೆದ ಬಾರಿ ಲೋಕಸಭೆ ಟಿಕೆಟ್‌ ನಿರಾಕರಿಸಿದಾಗ ಸಿಟ್ಟಿಗೇಳದೆ ಪಕ್ಷಕ್ಕೆ ನಿಷ್ಠೆ ತೋರಿದ ರಾಜಕಾರಣಿ. ಇಂಥ ರಾಜಕಾರಣಿ ಮತ್ತೊಬ್ಬ ಇರಲಾರರು.ಸರಳತೆಯೇ ಅವರ ಶಕ್ತಿಯಾಗಿತ್ತು. ಸಜ್ಜನಿಕೆಯ, ಕಳಂಕ ರಹಿತ ರಾಜಕಾರಣಿ ಎಸ್‌.ಮಲ್ಲಿಕಾರ್ಜುನಯ್ಯ ಇನ್ನಿಲ್ಲ.

ನಾಗವಲ್ಲಿ ಸಮೀಪದ ಹೊನಸಿಗೆರೆ ಗ್ರಾಮದ ಮಲ್ಲಿಕಾರ್ಜುನಯ್ಯ ಕೃಷಿ ಕುಟುಂಬದಿಂದ ಬಂದರೂ ದಿಲ್ಲಿಯವರೆಗೂ ಬೆಳೆದ ಪರಿ ದೊಡ್ಡದು. ಸೋಲಿಗೆ ಎಂದಿಗೂ ಎದೆಗುಂದದ ಅವರು ರಾಜಕಾರಣದ ಗೆಲುವನ್ನು ಅಮಲಿಗೇ­ರಿಸಿ­ಕೊಂಡವರಲ್ಲ.ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ನಡೆಸಿ ಜೈಲು ವಾಸ ಅನುಭವಿಸಿದ­ವರು. ರಾಜ್ಯದಲ್ಲಿ ಜನ ಸಂಘ, ಜನತಾ ಪಕ್ಷ, ಬಿಜೆಪಿ ಕಟ್ಟಿ ಬೆಳೆಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ತುಮಕೂರು ನಗರಸಭೆ ಸದಸ್ಯರಾಗಿ ರಾಜಕೀಯ ಆರಂಭಿಸಿದ ಅವರು, ವಿಧಾಸಸಭೆ, ವಿಧಾನ ಪರಿಷತ್‌ಗೆ ಸ್ಪರ್ಧಿಸಿ ಸೋತವರು. ಲೋಕಸಭೆ ಚುನಾವಣೆಯಲ್ಲೂ ಸೋತು ಮತ್ತೇ ಗೆದ್ದವರು.ಪಕ್ಷಕ್ಕೆ ಕಟು ನಿಷ್ಠರಾಗಿದ್ದರೂ ಪಕ್ಷಾತೀತ ರಾಜ­­ಕಾರಣಿ. ಹೇಮಾವತಿ ನೀರಾವರಿ ಹೋರಾಟ­­ಕ್ಕಾಗಿ ವೈ.ಕೆ.ರಾಮಯ್ಯ ಅವರನ್ನು ಹುರಿ­­ದುಂಬಿಸುತ್ತಿದ್ದದ್ದು ಇದಕ್ಕೆ ಸಾಕ್ಷಿ. ಲೋಕ­ಸಭೆ ಉಪಸಭಾಧ್ಯಕ್ಷರಾಗಿದ್ದಾಗ ವಿರೋಧ ಪಕ್ಷದ ಸದಸ್ಯರಿಗೆ ಸದನದಲ್ಲಿ ಮಾತನಾಡಲು ಪ್ರೇರೇಪಿಸುತ್ತಿದ್ದರು. ಹೆಚ್ಚು ಸಮಯ ನೀಡು­ತ್ತಿದ್ದರು. ಹೀಗಾಗಿಯೇ ಮಲ್ಲಿಕಾರ್ಜುನಯ್ಯ ಅವರನ್ನೂ ಪಕ್ಷಾತೀತವಾಗಿ ಎಲ್ಲರೂ ಪ್ರೀತಿಸುತ್ತಿದ್ದರು.ರಾಜಕಾರಣದ ಗುಂಪುಗಾರಿಕೆ ಮಾಡದ ಕಾರಣಕ್ಕಾಗಿಯೇ ಅವರಿಗೆ ಅನ್ಯಾಯವೂ ಆಗಿದೆ. ಶಿಕಾರಿಪುರದಿಂದ ವಿಧಾನಸಭೆಗೆ ಸ್ಪರ್ಧಿ­ಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿ­ಯೂರಪ್ಪ ಅವರಿಗೆ ಟಿಕೆಟ್‌ ನೀಡಿದ್ದ ಮಲ್ಲಿಕಾರ್ಜುನಯ್ಯ ಅವರಿಗೇ ಯಡಿ­ಯೂರಪ್ಪ ಲೋಕಸಭೆಗೆ ಟಿಕೆಟ್‌ ತಪ್ಪಿಸಿದ್ದು ಇತಿಹಾಸ.ಉಪಸಭಾಧ್ಯಕ್ಷರಾಗಿದ್ದಾಗ ಗುಬ್ಬಿಗೆ ಭೇಟಿ ನೀಡಿದಾಗಲೆಲ್ಲ ಅವರನ್ನು ಪಟ್ಟಣದ ರುದ್ರ­ಶೆಟ್ಟರ ದಿನಸಿ ಅಂಗಡಿಯಲ್ಲಿ ಕಾಣಬಹುದಿತ್ತು. ಅವರನ್ನು ಆಗ ನೋಡಿದವರು ಇವರೇನಾ ನಮ್ಮ ಲೋಕಸಭೆಯ ಉಪಸಭಾಧ್ಯಕ್ಷ ಎಂದು ಅಚ್ಚರಿ ಪಡುತ್ತಿದ್ದರು. ದಿನಸಿ ಅಂಗಡಿಯ ಮೂಟೆಯೊಂದರ ಮೇಲೆ ಕೂರುತ್ತಿದ್ದರು. ಕುರ್ಚಿಯನ್ನೂ ಸಹ ಹಾಕಿಸಿಕೊಂಡವರಲ್ಲ. ಮೂಟೆ ಮೇಲೆ ಕುಳಿತೇ ಜನರ ಸಮಸ್ಯೆಗಳನ್ನು ಕೇಳಿ ತಿಳಿಯುತ್ತಿದ್ದರು. ಅಗತ್ಯವಿದ್ದವರಿಗೆ ಶಿಫಾ­ರಸು ಪತ್ರ (ಎಂ.ಪಿ ಲೆಟರ್‌) ನೀಡುತ್ತಿದ್ದರು.ಲೋಕಸಭೆ ಉಪಸಭಾಧ್ಯಕ್ಷರು ಎಂಬ ಹಮ್ಮು–­ಬಿಮ್ಮು ಅವರಿಗಿರಲಿಲ್ಲ. ದೆಹಲಿ­ಯಲ್ಲಿದ್ದರೂ ಸಾಮಾನ್ಯ ಜನರ ದೂರವಾಣಿ ಕರೆ ಸ್ವೀಕರಿಸುತ್ತಿದ್ದರು. ಕಾರ್ಯಕ್ರಮಗಳಿಗೆ ಅವರನ್ನು ಆಹ್ವಾನಿಸಲು ದೆಹಲಿಗೆ ಹೋಗ­ಬೇಕಿರ­ಲಿಲ್ಲ. ದೂರವಾಣಿ ಮೂಲಕ ಕರೆದರೂ ಸಾಕು ಬರುತ್ತಿದ್ದರು. ಬಿಡುವಿಲ್ಲದೆ ಇದ್ದರೂ ಕಾರ್ಯಕ್ರಮ ಮುಗಿಯುವವರೆಗೂ ಇರು­ತ್ತಿದ್ದರು. ಹಾಗೆ ನೋಡಿದರೆ, ಮಲ್ಲಿಕಾರ್ಜು­ನಯ್ಯ ನಿಜವಾದ ಸ್ವಯಂ ಸೇವಕ ಅಷ್ಟೇ ಆಗಿರ­ಲಿಲ್ಲ, ನಿಜವಾದ ಜನ ಸೇವಕರೂ ಆಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.