ಪಕ್ಷ ನೋಂದಣಿಗೆ ಬಿಎಸ್‌ವೈ ಮನವಿ

7

ಪಕ್ಷ ನೋಂದಣಿಗೆ ಬಿಎಸ್‌ವೈ ಮನವಿ

Published:
Updated:

ಬೆಂಗಳೂರು: ಬಿಜೆಪಿ ತ್ಯಜಿಸುವ ಸಿದ್ಧತೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೊಸ ರಾಜಕೀಯ ಪಕ್ಷವೊಂದನ್ನು ನೋಂದಣಿ ಮಾಡಲು ಮತ್ತು ಚಿಹ್ನೆಯೊಂದನ್ನು ಪಡೆಯಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. `ಕರ್ನಾಟಕ ಜನತಾ ಪಕ್ಷ ಎಂಬ ಹೆಸರಿನ ಪ್ರಾದೇಶಿಕ ಪಕ್ಷವನ್ನು ನೋಂದಣಿ ಮಾಡಲು ಅವಕಾಶ ನೀಡುವಂತೆ ಯಡಿಯೂರಪ್ಪ ಅವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.ಈ ಪಕ್ಷಕ್ಕೆ `ಸೈಕಲ್~ ಚಿಹ್ನೆಯನ್ನು ನೀಡುವಂತೆಯೂ ಪತ್ರದಲ್ಲಿ ಕೋರಿದ್ದಾರೆ. ಆದರೆ, ಆಯೋಗದಿಂದ ಇದುವರೆಗೂ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ~ ಎಂದು ಯಡಿಯೂರಪ್ಪ ಅವರ ಆಪ್ತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಪದ್ಮನಾಭ ಪ್ರಸನ್ನಕುಮಾರ್ ಎಂಬುವರು ಈಗಾಗಲೇ `ಕರ್ನಾಟಕ ಜನತಾ ಪಕ್ಷ~ (ಕೆಜೆಪಿ) ಎಂಬ ಹೆಸರಿನ ಪಕ್ಷವನ್ನು ನೋಂದಣಿ ಮಾಡಿಸಿದ್ದಾರೆ. ಸೈಕಲ್ ಚಿಹ್ನೆಯನ್ನೂ ಪಡೆದಿದ್ದಾರೆ. ಪಕ್ಷವನ್ನು ಯಡಿಯೂರಪ್ಪ ಅವರ ಹೆಸರಿಗೆ ವರ್ಗಾವಣೆ ಮಾಡಲು ಅವರು ಒಲವು ತೋರಿದ್ದಾರೆ ಎನ್ನಲಾಗಿದೆ.ಈ ಕಾರಣದಿಂದ ತಮ್ಮ ಹೆಸರಿನಲ್ಲಿ ಕರ್ನಾಟಕ ಜನತಾ ಪಕ್ಷವನ್ನು ನೋಂದಣಿ ಮಾಡುವಂತೆ ಅಥವಾ ಈಗಿರುವ `ಕೆಜೆಪಿ~ಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡುವಂತೆ ಯಡಿಯೂರಪ್ಪ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.ಡಿಸೆಂಬರ್ 10ರಂದು ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ. ಅದಕ್ಕೂ ಮುನ್ನವೇ ಹೊಸ ಪಕ್ಷದ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಯೋಚಿಸಿದ್ದಾರೆ. ತಮ್ಮ ಬೆಂಬಲಿಗರಾದ ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರ ತವರು ಕ್ಷೇತ್ರದಲ್ಲಿ ಸಮಾವೇಶ ನಡೆಸುವ ಮೂಲಕ ಶಕ್ತಿ ಪ್ರದರ್ಶಿಸುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry