ಪಕ್ಷ ಬಲವರ್ಧನೆಗೆ ಈಶ್ವರಪ್ಪ ಸೂಚನೆ

ಭಾನುವಾರ, ಜೂಲೈ 21, 2019
22 °C

ಪಕ್ಷ ಬಲವರ್ಧನೆಗೆ ಈಶ್ವರಪ್ಪ ಸೂಚನೆ

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದ ಗಣಂಗೂರು ಅರಣ್ಯ ಭವನದಲ್ಲಿ ಮಂಗಳವಾರ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪಕ್ಷದ ಮುಖಂಡರ ಸಭೆ ನಡೆಯಿತು.  ಜಿಲ್ಲೆಯಲ್ಲಿ ಬಿಜೆಪಿಗೆ ನೆಲೆ ಇಲ್ಲದಂತಾಗಿದೆ. ಜಿ.ಪಂ, ತಾ.ಪಂ. ಹಾಗೂ ಎಪಿಎಂಸಿ ಚುನಾವಣೆಗಳಲ್ಲಿ ಪಕ್ಷದ ಸಾಧನೆ ಶೂನ್ಯವಾಗಿದೆ. ಜೆಡಿಎಸ್ ಪ್ರಾಬಲ್ಯ ಮುರಿಯಲು ಪಕ್ಷದ ಮುಖಂಡರು ಕಾರ್ಯತಂತ್ರ ರೂಪಿಸಬೇಕು. ಪಕ್ಷದ ಮುಖಂಡರು ನಿಷ್ಠಾವಂತ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಳ ಮಟ್ಟದಿಂದ ಸಂಘಟನೆಗೆ ಮುಂದಾಗಬೇಕು ಎಂದರು ಎಂದು ಮೂಲಗಳು ತಿಳಿಸಿವೆ.  ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಬಿಜೆಪಿ ಮುಖಂಡರು, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ನಮ್ಮ ಮಾತನ್ನು ಕೇಳುತ್ತಿಲ್ಲ. ಶಾಸಕರ ಆಣತಿಯಂತೆ ನಡೆದುಕೊಳ್ಳುತ್ತಿದ್ದಾರೆ. ನಮ್ಮದೇ ಸರ್ಕಾರ ಇದ್ದೂ ನಮ್ಮ ಕೆಲಸಗಳು ಆಗದ ಕಾರಣಕ್ಕೆ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು. ಪ್ರಾಮಾಣಿಕ ಕಾರ್ಯಕರ್ತರಿಗೆ ಕಾಮಗಾರಿ ಗುತ್ತಿಗೆ ನೀಡಬೇಕು ಎಂದು ತಮ್ಮ ಅಹವಾಲು ಸಲ್ಲಿಸಿದರು ಎಂದು ತಿಳಿದುಬಂದಿದೆ.  ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಹೇಳಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ಪಕ್ಷದ ಪ್ರಮುಖರು ಮಾತ್ರ ಸಭೆಯಲ್ಲಿ ಭಾಗವಹಿಸಿದ್ದು, ಕಾರ್ಯಕರ್ತರು ಒಳ ಪ್ರವೇಶಿಸದಂತೆ ಪೊಲೀಸರು ಗೇಟ್ ಬಳಿ ತಡೆದು ನಿಲ್ಲಿಸಿದರು. ಗಂಟೆಗಟ್ಟಲೆ ಕಾದು ವಾಪಸಾದರು. ಮಾಧ್ಯಮದವರನ್ನು ಕೂಡ ಸಭೆಯಿಂದ ದೂರ ಇಡಲಾಗಿತ್ತು. ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್‌ಜಿ, ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ್, ಮಾಜಿ ಶಾಸಕರಾದ ಜಿ.ಬಿ.ಶಿವಕುಮಾರ್, ಮಾರುತಿರಾವ್‌ಪವಾರ್, ಹೊನ್ನಪ್ಪ, ಎಲ್.ಆರ್.ಶಿವರಾಮೇಗೌಡ, ಡಿ.ಸಿ.ತಮ್ಮಣ್ಣ, ಜಿಲ್ಲಾಧ್ಯಕ್ಷ ಎಚ್.ಪಿ.ಮಹೇಶ್, ಕೆ.ಬಲರಾಂ, ತಾಲ್ಲೂಕು ಅಧ್ಯಕ್ಷ ಪಿ.ಎಚ್.ಚಂದ್ರಶೇಖರ್, ತಾ.ಪಂ.ಅಧ್ಯಕ್ಷ ಟಿ.ಶ್ರೀಧರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry