ಗುರುವಾರ , ನವೆಂಬರ್ 21, 2019
20 °C

`ಪಕ್ಷ ವಿರೋಧಿ ಚಟುವಟಿಕೆಗೆ ಪ್ರಚೋದನೆ'

Published:
Updated:

ಹಾವೇರಿ: `ನಾನು ಯಾವುದೇ ತರಹದ ಪಕ್ಷವಿರೋಧಿ ಚಟುವಟಿಕೆ ಮಾಡಿಲ್ಲ. ಬಿಜೆಪಿ ಮುಖಂಡರು ನನ್ನನ್ನು ಪಕ್ಷದಿಂದ ಅಮಾನತು ಮಾಡುವ ಮೂಲಕ ಪಕ್ಷವಿರೋಧಿ ಚಟುವಟಿಕೆ ಮಾಡುವಂತೆ ಪ್ರಚೋದನೆ ಮಾಡುತ್ತಿದ್ದಾರೆ' ಎಂದು ಸಂಸದ ಶಿವಕುಮಾರ ಉದಾಸಿ ಆರೋಪಿಸಿದರು.ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಸೋಮವಾರ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಅವರು, `ಇದೊಂದು ಸ್ಪಷ್ಟತೆ ಹಾಗೂ ಸ್ವಚ್ಛ ಮನಸ್ಸಿನಿಂದ ತೆಗೆದುಕೊಂಡಿರುವ ಕ್ರಮವಲ್ಲ. ಯಾವುದೇ ಒಂದು ವಿಚಾರದಲ್ಲಿ ಬಿಜೆಪಿ ನಾಯಕರಿಗೂ ಸ್ಪಷ್ಟತೆ ಇಲ್ಲ. ಇದರ ಹಿಂದೆ ಉಳಿದವರಲ್ಲಿಯೂ ಗೊಂದಲ ಮೂಡಿಸುವ ಹುನ್ನಾರ ಅಡಗಿದೆ' ಎಂದರು.`ನಾನು ಪಕ್ಷವಿರೋಧಿ ಚಟುವಟಿಕೆ ಮಾಡಿರುವ ಬಗ್ಗೆ ದಾಖಲೆಗಳು ಇದ್ದರೆ ಅಥವಾ ಬಿಜೆಪಿ ಮುಖಂಡರಿಗೆ ಈ ಬಗ್ಗೆ ಖಚಿತತೆ ಇದ್ದರೆ, ನನ್ನನ್ನು ಅಮಾನತುಗೊಳಿಸುವ ಬದಲು ನೇರವಾಗಿ ಪಕ್ಷದಿಂದ ಉಚ್ಚಾಟನೆ ಮಾಡಬಹುದಿತ್ತು. ಕೇವಲ ಅಮಾನತು ಮಾಡಿರುವುದನ್ನು ಗಮನಿಸಿದರೆ, ನಾನು ಪಕ್ಷವಿರೋಧಿ ಚಟುವಟಿಕೆ ಮಾಡಿದ್ದೇನೆಯೋ ಇಲ್ಲವೋ ಎಂಬ ಗೊಂದಲ ಅವರಲ್ಲಿ ಇರುವುದು ಸ್ಪಷ್ಟವಾಗುತ್ತದೆ' ಎಂದರು.ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾಗಬಹುದೆಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಹತಾಶೆಯಿಂದ ಅವಸರದಲ್ಲಿ ಈ ತರಹದ ನಿರ್ಣಯ ತೆಗೆದುಕೊಂಡಿದ್ದಾರೆ ಎಂದೆನಿಸುತ್ತದೆ. ಅಮಾನತು ಆದೇಶ ಕೈ ಸೇರಿದ ನಂತರ ನನ್ನ ಮುಂದಿನ ನಿರ್ಧಾರ ಪ್ರಕಟಿಸುವೆ' ಎಂದು ಉದಾಸಿ ತಿಳಿಸಿದರು.

ಪ್ರತಿಕ್ರಿಯಿಸಿ (+)