ಪಕ್ಷ ವಿರೋಧಿ ಚಟುವಟಿಕೆ: ಅಮಾನತಿಗೆ ಮನವಿ

7

ಪಕ್ಷ ವಿರೋಧಿ ಚಟುವಟಿಕೆ: ಅಮಾನತಿಗೆ ಮನವಿ

Published:
Updated:

ಹೊಸನಗರ: ಮಾಜಿ ಶಾಸಕರು ಹಾಗೂ ತಾ.ಪಂ. ಮಾಜಿ ಅಧ್ಯಕ್ಷರ ಮೇಲೆ ಪಕ್ಷ ವಿರೋಧಿ ಚಟುವಟಿಕೆಯ ಅಧಾರದ ಮೇಲೆ ಶಿಸ್ತುಕ್ರಮ ಜರುಗಿಸಿ, ಅಮಾನುತು ಮಾಡುವಂತೆ ಹೊಸನಗರ ಕಾಂಗ್ರೆಸ್ ಬ್ಲಾಕ್ ಸಮಿತಿಯ ಅಧ್ಯಕ್ಷ ಪಟೇಲ್ ಗರುಡಪ್ಪಗೌಡ ಕೆಪಿಸಿಸಿಗೆ ವರದಿ ನೀಡಿರುವುದಾಗಿ ತಿಳಿಸಿದ್ದಾರೆ.ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಗೆ ವಿರೋಧವಾಗಿ ಪ್ರಚಾರ ಮಾಡಿದ್ದಾರೆ ಎಂದು ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ಡಾ.ಜಿ.ಡಿ. ನಾರಾಯಣಪ್ಪ ಮತ್ತು ತಾ.ಪಂ. ಮಾಜಿ ಅಧ್ಯಕ್ಷರಾದ ಅಬ್ಬಿ ಮಲ್ಲೇಶಪ್ಪ, ಕೂರಂಬಳ್ಳಿ ಷಣ್ಮುಖಪ್ಪ ಅವರ ಮೇಲೆ ಸೂಕ್ತ ಜರುಗಿಸುವಂತೆ ಅವರು ಒತ್ತಾಯಿಸಿದ್ದಾರೆ.ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಗೆ ಸಲ್ಲಿಸಿದ ವರದಿಯಲ್ಲಿ ಮಾಜಿ ಶಾಸಕರಿಬ್ಬರು ಹಾಗೂ ಮಾಜಿ ಅಧ್ಯಕ್ಷರಿಬ್ಬರೂ ಸಹ ರಿಪ್ಪನ್‌ಪೇಟೆ ಜಿ.ಪಂ. ಕ್ಷೇತ್ರದಲ್ಲಿ ಬಹಿರಂಗವಾಗಿ ಅಧಿಕೃತ ಅಭ್ಯರ್ಥಿ ಕಲಗೋಡು ರತ್ನಾಕರ ಅವರ ವಿರೋಧವಾಗಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ಸೂಚಿಸಿ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.ಮಾಜಿ ಶಾಸಕ ಬಿ. ಸ್ವಾಮಿರಾವ್ ಪುತ್ರ ಕಳೆದ ಬಾರಿಯ ನಗರ ಜಿ.ಪಂ. ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಸ್ವಾಮಿರಾವ್ ಕಳೂರು ತಾ.ಪಂ. ಕ್ಷೇತ್ರದ ರುಕ್ಮಿಣಿ ಲೇಖನಮೂರ್ತಿ ಅವರ ವಿರೋಧವಾಗಿ ಪಕ್ಷೇತರ ಅಭ್ಯರ್ಥಿ ಕಾಮಾಕ್ಷಿ ಕಾಯಿ ತಿಮ್ಮಪ್ಪ ಅವರಿಗೆ ಕರಪತ್ರ ಪ್ರಾಯೋಜಿಸುವ ಮೂಲಕ ಬೆಂಬಲ ಸೂಚಿಸಿರುವುದು ಸಹ ಪಕ್ಷದ ವರಿಷ್ಠರ ಗಮನಕ್ಕೆ ತರಲಾಗಿದೆ ಎಂದರು.ಸೋನಲೆ ಗ್ರಾಮದಲ್ಲಿ ಈಚೆಗೆ ನಡೆದ ಕಾಂಗ್ರೆಸ್ ಅಭಿನಂದನಾ ಸಭೆಯಲ್ಲಿ ಜಿ.ಪಂ. ಸದಸ್ಯೆ ಜ್ಯೋತಿ ಚಂದ್ರಮೌಳಿ ಅವರ ಮೇಲೆ ಮಾಜಿ ಶಾಸಕರ ಪುತ್ರರಿಬ್ಬರು ಚಪ್ಪಲಿ ಎಸೆದು ಗಲಾಟೆ ಮಾಡಿದ ಬಗ್ಗೆಯೂ ಸಹ ಪೊಲೀಸ್ ಹಾಗೂ ಕೆಪಿಸಿಸಿಗೆ ದೂರು ನೀಡಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಚ್.ಆರ್. ಪ್ರಭಾಕರ್, ಏರಗಿ ಉಮೇಶ್, ಎಚ್. ಮಹಾಬಲರಾವ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry