ಪಟಾಕಿದುಬಾರಿ?

7

ಪಟಾಕಿದುಬಾರಿ?

Published:
Updated:

ನವದೆಹಲಿ / ಚೆನ್ನೈ (ಪಿಟಿಐ): ಪರಿಸರ ಕಾಳಜಿ ಮತ್ತು ದುಬಾರಿ ಬೆಲೆಯ ಕಾರಣಕ್ಕೆ ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ಪಟಾಕಿಗಳ ಬೇಡಿಕೆ ಶೇ 40ರಷ್ಟು ಕಡಿಮೆಯಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ನಡೆಸಿದ ಅಧ್ಯಯನ ತಿಳಿಸಿದೆ.

ಪಟಾಕಿ ತಯಾರಿಕೆಗೆ ಬಳಸುವ ಕಚ್ಚಾ ಸರಕು ಮತ್ತು ಇಂಧನ ಬೆಲೆ, ಕಾರ್ಮಿಕರ ಕೂಲಿ ದರ ಹೆಚ್ಚಿರುವುದರಿಂದ  ಕಳೆದ ವರ್ಷದ ಬೆಲೆಗಳಿಗೆ ಹೋಲಿಸಿದರೆ ಶೇ 50ರಷ್ಟು ಏರಿಕೆಯಾಗುವ ಸಾಧ್ಯತೆಗಳು ಇವೆ. ಇದರಿಂದ ಬೇಡಿಕೆ ಕಡಿಮೆಯಾಗಲಿದ್ದು, ತಯಾರಕರ ಲಾಭಕ್ಕೂ ಕತ್ತರಿ ಬಿದ್ದಿದೆ. ಚೆನ್ನೈ, ದೆಹಲಿ, ಮುಂಬೈ, ಕೋಲ್ಕತ್ತ ಮತ್ತು  ಲಖನೌ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿನ 250 ಪಟಾಕಿ ತಯಾರಕರು ಮತ್ತು 500 ಮಾರಾಟಗಾರರ ಅಭಿಪ್ರಾಯ ಆಧರಿಸಿ ಈ ಅಧ್ಯಯನ ನಡೆಸಲಾಗಿದೆ ಎಂದು `ಅಸೋಚಾಂ~ನ ಪ್ರಧಾನ ಕಾರ್ಯದರ್ಶಿ ಡಿ. ಎಸ್. ರಾವತ್ ಹೇಳಿದ್ದಾರೆ. ಬೆಲೆಗಳು ಏರಿಕೆಯಾಗಿರುವುದರಿಂದ ಜನರು ಪಟಾಕಿ ಖರೀದಿಗೆ ಮಾಡುವ ವೆಚ್ಚ ಕಡಿಮೆ ಮಾಡಲಿದ್ದಾರೆ. ಪಟಾಕಿ ಸಿಡಿಸುವುದರಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಹೆಚ್ಚುತ್ತಿರುವುದರಿಂದ ಪಟಾಕಿ ರಹಿತ ಇಲ್ಲವೇ ಕಡಿಮೆ ಪ್ರಮಾಣದಲ್ಲಿ ಪಟಾಕಿ  ಸಿಡಿಸುವ ಮೂಲಕ ದೀಪಾವಳಿ ಆಚರಿಸಲು ನಿರ್ಧರಿಸಿದ್ದಾರೆ ಎಂದು ಅಧ್ಯಯನ ತಿಳಿಸಿದೆ.

ದೇಶಿ ಪಟಾಕಿ ತಯಾರಿಕಾ ಉದ್ಯಮದ ವಾರ್ಷಿಕ ವಹಿವಾಟು ಅಂದಾಜು ್ಙ1,200 ಕೋಟಿಗಳಷ್ಟಿದೆ. ಈ ಬಾರಿ ಬೇಡಿಕೆ ಶೇ 35ರಿಂದ 40ರಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ. ಪಟಾಕಿ ಉದ್ಯಮವು ದಕ್ಷಿಣ ಭಾರತದಲ್ಲಿ ಕೇಂದ್ರೀಕೃತವಾಗಿದ್ದು, ತಮಿಳುನಾಡಿನ ಶಿವಕಾಶಿ ಪಟ್ಟಣವೊಂದರಲ್ಲಿಯೇ ಶೇ 55ರಷ್ಟು ಪಟಾಕಿಗಳು ತಯಾರಾಗುತ್ತವೆ.

ಇಲ್ಲಿ 9,500 ಪಟಾಕಿ ತಯಾರಿಕೆಯ ಕಾರ್ಖಾನೆಗಳಿದ್ದು, 1.50 ಲಕ್ಷ  ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿವೆ. ಉತ್ತರ ಭಾರತದಲ್ಲಿ ಪಟಾಕಿಗಳಿಗೆ ಒಟ್ಟು ವಹಿವಾಟಿನ ಶೇ 75ರಷ್ಟು ಬೇಡಿಕೆ ಇದೆ. ಆದರೆ, ಈ ಬಾರಿ ಉತ್ತರ ಭಾರತದ ರಾಜ್ಯಗಳಿಂದ ಶೇ 15ರಷ್ಟು ಕಡಿಮೆ ಬೇಡಿಕೆ ಕಂಡುಬಂದಿರುವುದು ಅಧ್ಯಯನದಿಂದ ತಿಳಿದು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry