ಪಟಾಕಿ ದುಬಾರಿಯಾದರೂ ಖರೀದಿ ಜೋರು

7

ಪಟಾಕಿ ದುಬಾರಿಯಾದರೂ ಖರೀದಿ ಜೋರು

Published:
Updated:

ಬೆಂಗಳೂರು: ರಾಜಧಾನಿಯ ಜನತೆ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮಗಳಿಂದ ಆಚರಿಸುತ್ತಿದ್ದಾರೆ. ಅದರಲ್ಲೂ ಮಕ್ಕಳು ಪಟಾಕಿ ಸಿಡಿಸುವ ಮೂಲಕ ಸಂತಸಪಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು. ಪಟಾಕಿ ಬೆಲೆ ತುಸು ದುಬಾರಿ ಎನಿಸಿದರೂ ಖರೀದಿ ಮಾತ್ರ ಜೋರಾಗಿಯೇ ನಡೆದಿತ್ತು.ಮಂಗಳವಾರ ಬೆಳಕು ಹರಿಯುತ್ತಿದ್ದಂತೆ ಪಟಾಕಿ ಸಿಡಿಸುತ್ತಿದ್ದ ಶಬ್ದ ಕೇಳಲಾರಂಭಿಸಿತ್ತು. ಮನೆಗಳ ಮುಂದೆ, ಆಟದ ಮೈದಾನ, ಪಾದಚಾರಿ ಮಾರ್ಗದಲ್ಲಿ ಚಿಣ್ಣರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಆಗಾಗ್ಗೆ ಮಳೆ ಸುರಿಯುತ್ತಿದ್ದರಿಂದ ಹಬ್ಬದ ಆಚರಣೆಗೆ ತುಸು ಅಡ್ಡಿಯಾಗಿತ್ತು.ಸರ್ಕಾರಿ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಿದ್ದರೆ, ಖಾಸಗಿ ಶಾಲೆಗಳು ಕೂಡ ಹಬ್ಬದ ಪ್ರಯುಕ್ತ ರಜೆ ಘೋಷಿಸಿವೆ. ಹೀಗಾಗಿ, ಮಕ್ಕಳ ಹಬ್ಬದ ಸಡಗರಕ್ಕೆ ಪಾರವೇ ಇರಲಿಲ್ಲ. ಸುರಿವ ಮಳೆಯ ನಡುವೆಯೂ ಪಟಾಕಿ ಸಿಡಿಸಿ ಸಂಭ್ರಮಿಸಿದರು.ಅಮಾವಾಸ್ಯೆ ದಿನವಾದ ಬುಧವಾರ ದೀಪಾವಳಿ ಆಚರಣೆ ಭರ್ಜರಿಯಾಗಿ ಸಾಗಿತ್ತು. ಮಳಿಗೆದಾರರು, ವ್ಯಾಪಾರಿಗಳು, ಉದ್ಯಮಿಗಳು ಲಕ್ಷ್ಮೀ ಪೂಜೆ ಸಲ್ಲಿಸಿ ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸಿದ ದೃಶ್ಯ ಸಾಮಾನ್ಯವಾಗಿತ್ತು.ಈ ಬಾರಿ ಪಟಾಕಿ ಬೆಲೆ ತುಸು ದುಬಾರಿ ಎನಿಸಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಪಟಾಕಿ ದರದಲ್ಲಿ ಶೇ 10ರಷ್ಟು ಹೆಚ್ಚಳವಾಗಿದೆ. ಆದರೂ ಜನತೆ ಮುಗಿಬಿದ್ದು, ಪಟಾಕಿ ಖರೀದಿಸುತ್ತಿದ್ದುದು ಕಂಡುಬಂತು.

`ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪಟಾಕಿ ಬೆಲೆಯಲ್ಲಿ ಏರಿಕೆಯಾಗಿದೆ.ಭಾರಿ ಸ್ಫೋಟಕದ ಪಟಾಕಿಗಳ ಬೆಲೆಯಲ್ಲಿ ಹೆಚ್ಚಿನ ಬದಲಾವಣೆ ಇಲ್ಲ. ಸುರುಸುರು ಬತ್ತಿ, ಹೂಕುಂಡ, ಭೂಚಕ್ರ, ವಿಷ್ಣು ಚಕ್ರದಂತಹ ಪಟಾಕಿಗಳ ಬೆಲೆ ಹೆಚ್ಚಾಗಿದೆ. ಆದರೆ ಜನರು ಸುರುಸುರು ಬತ್ತಿ, ಹೂಕುಂಡದಂತಹ ಪಟಾಕಿಗಳನ್ನೇ ಹೆಚ್ಚಾಗಿ ಖರೀದಿಸುತ್ತಿರುವುದರಿಂದ ಬೆಲೆ ತುಸು ದುಬಾರಿ ಎನಿಸಿದೆ~ ಎಂದು ಪಟಾಕಿ ವ್ಯಾಪಾರಿ ಜಯಶಂಕರ್ ತಿಳಿಸಿದರು.`ಮಂಗಳವಾರ ಮತ್ತು ಬುಧವಾರ ಪಟಾಕಿಗಳ ಎಂ.ಆರ್. ಪಿ. ದರದಲ್ಲಿ ಕ್ರಮವಾಗಿ ಶೇ 70 ಹಾಗೂ ಶೇ 75ರಷ್ಟು ರಿಯಾಯ್ತಿ ನೀಡಲಾಯಿತು. ದೀಪಾವಳಿಯ ಕೊನೆಯ ದಿನವಾದ ಬಲಿಪಾಡ್ಯಮಿಯಂದು ಇನ್ನಷ್ಟು ರಿಯಾಯ್ತಿ ನೀಡಿ ಮಾರಾಟ ಮಾಡಲಾಗುವುದು~ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry