ಪಟ್ಟಣದ ಆಕರ್ಷಣೆ ಇಲ್ಲ, ನನಗೆ ಕೃಷಿಯೇ ಎಲ್ಲ

7

ಪಟ್ಟಣದ ಆಕರ್ಷಣೆ ಇಲ್ಲ, ನನಗೆ ಕೃಷಿಯೇ ಎಲ್ಲ

Published:
Updated:
ಪಟ್ಟಣದ ಆಕರ್ಷಣೆ ಇಲ್ಲ, ನನಗೆ ಕೃಷಿಯೇ ಎಲ್ಲ

ಬೆಂಗಳೂರು: ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ಕೃಷಿಕ ಚಂದ್ರಶೇಖರ ಬಸನಗೌಡ ಪಾಟೀಲ ಅವರದು 7.8 ಎಕರೆ ವಿಸ್ತೀರ್ಣದ ಜಮೀನು. ಅವರ ಜಮೀನಿನ ಮೇಲ್ಭಾಗದಲ್ಲಿ ಚಿಕ್ಕ ಹಳ್ಳ ಹರಿಯುತ್ತಿದ್ದ ಕಾರಣ ಮಣ್ಣು ಜವುಳಾಗಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿತ್ತು. ಸೋಯಾ ಅವರೆ ಮತ್ತು ಬತ್ತ ಬೆಳೆಯಲು ಮುಂದಾದ ಪಾಟೀಲರು ಸೋಲುಂಡಿದ್ದೂ ಆಯಿತು.ನಂತರ ಹಳ್ಳದಲ್ಲಿ ತುಂಬಿದ್ದ ಹೂಳು ತೆಗೆದು, ಜವುಗು ಮಣ್ಣಿನ ಸಮಸ್ಯೆಯನ್ನು ನಿವಾರಿಸಿದ್ದಾಯಿತು. ಹಳ್ಳದಲ್ಲಿ ದೊರೆತ ಹೂಳನ್ನು ಜಮೀನಿಗೆ ಹಾಕಿ ಅಲ್ಲಿನ ಮಣ್ಣನ್ನೂ ಫಲವತ್ತಾಗಿಸಿದರು. ಪ್ರಸ್ತುತ ನಾಲ್ಕು ಎಕರೆ ಭೂಮಿಯಲ್ಲಿ ಏಲಕ್ಕಿ ಬಾಳೆ ಸೇರಿದಂತೆ ತಮ್ಮ ಜಮೀನಿನಲ್ಲಿ ಮಿಶ್ರ ಬೆಳೆ ಬೆಳೆಯುತ್ತಿರುವ ಪಾಟೀಲರು ಕೃಷಿ ಖರ್ಚೆಲ್ಲ ಕಳೆದು ವರ್ಷವೊಂದಕ್ಕೆ 8 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ.ಅವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕೃಷಿ ಮೇಳದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಗುರುವಾರ `ಡಾ.ಎಂ.ಎಚ್. ಮರಿಗೌಡ ರಾಜ್ಯಮಟ್ಟದ ಅತ್ಯುತ್ತಮ ತೋಟಗಾರಿಕಾ ಪ್ರಶಸ್ತಿ~ ನೀಡಿ ಗೌರವಿಸಿದರು. ಇವರ ಜೊತೆಗೆ ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕೃಷಿಕ ಗಂಗಯ್ಯ ಅವರಿಗೂ ಈ ಪ್ರಶಸ್ತಿಯನ್ನು ಮುಖ್ಯಮಂತ್ರಿಗಳು ಪ್ರದಾನ ಮಾಡಿದರು.`ಬಿ.ಕಾಂ ಪದವಿ ಪಡೆದ ನಂತರ ಯಾವ ಕಚೇರಿ, ಸಂಸ್ಥೆಗಳಿಗೂ ಕೆಲಸ ಕೇಳಿಕೊಂಡು ಹೋಗಿಲ್ಲ. ನನ್ನ ತಂದೆಗೆ ನಾನೇ ಹಿರಿಯ ಮಗನಾಗಿದ್ದ ಕಾರಣ ಓದು ಮುಗಿಸಿ ನೇರವಾಗಿ ಕೃಷಿ ಭೂಮಿಯತ್ತ ಮುಖ ಮಾಡಿದೆ. ಪಟ್ಟಣ ಯಾವತ್ತಿಗೂ ನನ್ನ ಪಾಲಿಗೆ ಆಕರ್ಷಣೆಯಾಗಿರಲಿಲ್ಲ~ ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಚಂದ್ರಶೇಖರ ಪಾಟೀಲರು ಅನಿಸಿಕೆ ಹಂಚಿಕೊಂಡರು.ಪಾಟೀಲರು ತಮ್ಮ ಜಮೀನಿನಲ್ಲಿ ರಾಸಾಯನಿಕ ಬಳಸುತ್ತಿಲ್ಲ. ಹಸಿರೆಲೆ ಗೊಬ್ಬರ, ಕೊಟ್ಟಿಗೆ ಗೊಬ್ಬರಗಳೇ ಅವರ ಜಮೀನಿಗೆ ಪೋಷಕಾಂಶ ಒದಗಿಸುತ್ತಿವೆ. ಬಾಳೆ, ಮಾವು, ಚಿಕ್ಕು, ಅಡಿಕೆ ಮತ್ತು ತೆಂಗು ಇವರಿಗೆ ಕೈತುಂಬ ಆದಾಯ ತರುತ್ತಿರುವ ಬೆಳೆಗಳು. ಕೃಷಿ ಕ್ಷೇತ್ರದಲ್ಲಿನ ಸಾಧನೆಯನ್ನು ಗುರುತಿಸಿ ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲೂ ಇವರಿಗೆ ಪ್ರಶಸ್ತಿಯ ಗೌರವ ದಕ್ಕಿದೆ.`ಕೃಷಿಗಾಗಿ ಬ್ಯಾಂಕ್ ಹುದ್ದೆ ತೊರೆದೆ~:ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಗಂಗಯ್ಯ ಅವರ ಯಶೋಗಾಥೆಯೂ ಸ್ವಾರಸ್ಯಕರವಾಗಿದೆ. ಬಿಎ ಪದವಿ ಪಡೆದ ಇವರು ನಂತರ ವಿಜಯಾ ಬ್ಯಾಂಕ್‌ನಲ್ಲಿ ಎರಡು ವರ್ಷಗಳ ಕಾಲ ಕೆಲಸ ನಿರ್ವಹಿಸಿದರು. ನಂತರ ಕೃಷಿ ಇವರನ್ನು ತನ್ನತ್ತ ಸೆಳೆಯಿತು. ಪ್ರಸ್ತುತ ತಮ್ಮ 10 ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿರುವ ಗಂಗಯ್ಯ ಅವರು ಮೂರು ಎಕರೆ ಪ್ರದೇಶದಲ್ಲಿ 40 ಟನ್ ಕುಂಬಳಕಾಯಿ ಬೆಳೆ ಬೆಳೆದ ಸಾಧನೆಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಇದೇ ಕಾರಣದಿಂದ ಇವರಿಗೆ `ಕುಂಬಳಕಾಯಿ ಗಂಗಣ್ಣ~ ಎಂಬ ಹೆಸರೂ ಅಯಾಚಿತವಾಗಿ ಬಂದಿದೆ!`ಜಮೀನಿನಲ್ಲಿ 300 ತೆಂಗಿನ ಮರಗಳು ಮತ್ತು 2,000 ಅಡಿಕೆ ಮರಗಳೂ ಇವೆ. ಅಲ್ಲದೆ ನಾನು ಪ್ರತಿ ವರ್ಷ ಸುಮಾರು 100 ಮೂಟೆ ಕಾಫಿಯನ್ನೂ ಬೆಳೆಯುತ್ತಿದ್ದೇನೆ. ಕಾಫಿ ಬೆಳೆಯಲು ಇಳಿಜಾರು ಮತ್ತು ಸಾಕಷ್ಟು ನೆರಳು ಇರುವ ಪ್ರದೇಶವೇ ಆಗಬೇಕು ಎಂಬ ವಾದವನ್ನು ನಾನು ಸುಳ್ಳು ಮಾಡಿದ್ದೇನೆ. ಆಸಕ್ತರು ನನ್ನ ಜಮೀನಿಗೆ ಬಂದು ನೋಡಬಹುದು~ ಎಂದು ಗಂಗಯ್ಯ ಅವರು ಪತ್ರಕರ್ತರೊಂದಿಗೆ ವಿಶ್ವಾಸದಿಂದ ತಮ್ಮ ಕೃಷಿ ಬದುಕಿನ ಕುರಿತು ವಿವರಿಸಿದರು.`ನಮ್ಮ ಊರಿನಲ್ಲಿ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಗಂಭೀರವಾಗಿದೆ. ಒಬ್ಬ ಕೂಲಿಯಾಳಿಗೆ ದಿನವೊಂದಕ್ಕೆ 200 ರೂಪಾಯಿ ನೀಡಬೇಕಾದ ಪರಿಸ್ಥಿತಿಯೂ ಇದೆ. ಆದರೂ  ಕೃಷಿಗಾಗಿ ನಾನು ಮಾಡುವ ಖರ್ಚನ್ನೆಲ್ಲ ಕಳೆದರೆ ವರ್ಷಕ್ಕೆ ಆರು ಲಕ್ಷ ರೂಪಾಯಿ ಸಂಪಾದಿಸುತ್ತೇನೆ. ಕಳೆದ 30 ವರ್ಷಗಳಿಂದ ಮಣ್ಣಿನೊಂದಿಗೆ ಸಂಬಂಧ ಇಟ್ಟುಕೊಂಡಿದ್ದೇನೆ. ಈ ವೃತ್ತಿ ಯಾವತ್ತೂ ಬೇಸರ ತರಿಸಿಲ್ಲ~ ಎನ್ನುತ್ತಾರೆ ಗಂಗಯ್ಯ.ತೋಟಗಾರಿಕಾ ಕ್ಷೇತ್ರದಲ್ಲಿ ಆಗಿರುವ ನೂತನ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳ ಕುರಿತು ಅಧ್ಯಯನ ನಡೆಸಲು ಗಂಗಯ್ಯ ಅವರು ರಾಜ್ಯ ತೋಟಗಾರಿಕಾ ಇಲಾಖೆಯ ಸಹಾಯದಿಂದ ಇಂಡೋನೇಷ್ಯಾ ಮತ್ತು ಥಾಯ್‌ಲೆಂಡ್ ದೇಶಗಳಲ್ಲೂ ಅಧ್ಯಯನ ಪ್ರವಾಸ ಕೈಗೊಂಡಿದ್ದರು. `ಡಾ.ಎಂ.ಎಚ್. ಮರಿಗೌಡ ಪ್ರಶಸ್ತಿ~ ಐದು ಸಾವಿರ ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry