ಮಂಗಳವಾರ, ಅಕ್ಟೋಬರ್ 15, 2019
28 °C

ಪಟ್ಟಣ ಸಂಪರ್ಕ ರಸ್ತೆ ಅಭಿವೃದ್ಧಿಗೆ ಕ್ರಮ

Published:
Updated:

ಬೆಂಗಳೂರು: `ರಾಜ್ಯದ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ 615.61 ಕಿ.ಮೀ. ಉದ್ದದ ರಸ್ತೆಯನ್ನು 1151.67 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕಾಮಗಾರಿ ಇದೇ ಮಾರ್ಚ್‌ನಿಂದ ಆರಂಭವಾಗಲಿದೆ~ ಎಂದು ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಶುಕ್ರವಾರ ಇಲ್ಲಿ ತಿಳಿಸಿದರು.`ಇದಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) 315 ದಶಲಕ್ಷ ಡಾಲರ್ ಆರ್ಥಿಕ ನೆರವು ನೀಡಲಿದ್ದು, ಒಂದೂವರೆಯಿಂದ ಎರಡೂವರೆ ವರ್ಷದಲ್ಲಿ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ~ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.`ಒಟ್ಟು ಒಂಬತ್ತು ಪ್ಯಾಕೇಜ್‌ಗಳಿದ್ದು, ಏಳು ಸಂಸ್ಥೆಗಳಿಗೆ ಟೆಂಡರ್ ನೀಡಲಾಗಿದೆ. ಗುತ್ತಿಗೆ ಪಡೆದ ಸಂಸ್ಥೆಗಳ ಜತೆಗೂ ಸರ್ಕಾರ ಒಪ್ಪಂದ ಮಾಡಿಕೊಂಡಿದ್ದು, ಅಗತ್ಯ ಪರವಾನಗಿ ಹಾಗೂ ಅನುಮತಿಗಳನ್ನು (ಪರಿಸರ, ಗಣಿ ಇಲಾಖೆಯ ನಿರಪೇಕ್ಷಣಾ ಪತ್ರ) ಪಡೆದ ನಂತರ ಕಾಮಗಾರಿಗಳು ಆರಂಭವಾಗಲಿವೆ~ ಎಂದು ಹೇಳಿದರು.`ಈ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಯ ಗುಣಮಟ್ಟವನ್ನು ಹೊಂದಿರುತ್ತವೆ. ದ್ವಿಪಥದ ರಸ್ತೆಗಳ ಅಭಿವೃದ್ಧಿಗೆ ಪ್ರತಿ ಕಿ.ಮೀ.ಗೆ 2.5 ಕೋಟಿ ರೂಪಾಯಿಯನ್ನು ಗುತ್ತಿಗೆದಾರರಿಗೆ ನೀಡಲಾಗುತ್ತದೆ~ ಎಂದು ಹೇಳಿದರು. `ಅಭಿವೃದ್ಧಿ ನಂತರ ಈ ರಸ್ತೆಗಳಲ್ಲಿ ಸಂಚರಿಸುವ ವಾಹನಗಳಿಂದ ಬಳಕೆ ಶುಲ್ಕ ಸಂಗ್ರಹಿಸುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ~ ಎಂದೂ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ವಿಶ್ವಬ್ಯಾಂಕ್ ನೆರವು: ವಿಶ್ವ ಬ್ಯಾಂಕ್ ನೆರವು ಪಡೆದು ಸುಮಾರು 562.77 ಕಿ.ಮೀ. ರಸ್ತೆ ಅಭಿವೃದ್ಧಿಪಡಿಸುವ ಬಗ್ಗೆಯೂ ಕ್ರಮ ತೆಗೆದುಕೊಂಡಿದ್ದು, ಈ ವರ್ಷದ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಕಾಮಗಾರಿ ಆರಂಭವಾಗಲಿದೆ. ಇದರ ಒಟ್ಟು ಅಂದಾಜು ರೂ 1522.87 ಕೋಟಿ.ಯಾವ ರಸ್ತೆಗಳು?: ಮಳವಳ್ಳಿ- ಮದ್ದೂರು- ಹುಲಿಯೂರುದುರ್ಗ- ಕುಣಿಗಲ್- ತುಮಕೂರು- ಕೊರಟಗೆರೆ- ಮಧುಗಿರಿ- ಪಾವಗಡ (190 ಕಿ.ಮೀ- ರೂ 559 ಕೋಟಿ); ಮುಧೋಳ- ಮಹಲಿಂಗಪುರ- ಕಬ್ಬೂರು- ಚಿಕ್ಕೋಡಿ- ನಿಪ್ಪಾಣಿ (107 ಕಿ.ಮೀ, ರೂ 317 ಕೋಟಿ), ಶಿಕಾರಿಪುರ- ಅನಂತಪುರಂ, ಶಿವಮೊಗ್ಗ- ಸಾವಲಂಗ- ಶಿಕಾರಿಪುರ- ಶಿರಾಳಕೊಪ್ಪ- ತೊಗರ‌್ಸಿ- ಆವಂತಿ- ಗೊಂಡಿ- ಹಾನಗಲ್ (153 ಕಿ.ಮೀ, ರೂ 397 ಕೋಟಿ); ಮನಗೂಳಿ- ಬಸವನಬಾಗೇವಾಡಿ- ತಾಳಿಕೋಟೆ- ಹುಣಸಗಿ- ದೇವಪುರ (61 ಕಿ.ಮೀ, ರೂ 248 ಕೋಟಿ).

ಈ ರಸ್ತೆಗಳ ಅಭಿವೃದ್ಧಿಗೆ ಗುತ್ತಿಗೆದಾರರ ತಾಂತ್ರಿಕ ಬಿಡ್‌ಗಳನ್ನು ಪರಿಶೀಲಿಸಿ, ವಿಶ್ವಬ್ಯಾಂಕ್‌ಗೆ ಕಳುಹಿಸಿದ್ದು, ಇನ್ನೂ ಅನುಮತಿ ಸಿಕ್ಕಿಲ್ಲ. ಈ ಅನುಮತಿ ಸಿಕ್ಕ ನಂತರವೇ ಟೆಂಡರ್ ಕರೆದು ಅಂತಿಮಗೊಳಿಸಲಾಗುವುದು.ಸರ್ಕಾರ ಶೇ 50ರಷ್ಟು ಹಣ ನೀಡಿದರೆ, ಗುತ್ತಿಗೆದಾರರು ಉಳಿದ ಹಣ ತೊಡಗಿಸಬೇಕಾಗಿದೆ. ಈ ಕಾರಣಕ್ಕೆ ಒಪ್ಪಂದದ ನಂತರ ಗುತ್ತಿಗೆದಾರರಿಗೆ ಹಣ ಕ್ರೋಡೀಕರಿಸಲು ಆರು ತಿಂಗಳ ಸಮಯ ನೀಡಲಾಗುವುದು. ಹೀಗಾಗಿ ಈ ಕಾಮಗಾರಿಗಳು ಆರಂಭವಾಗಲು ಸ್ವಲ್ಪ ತಡವಾಗುತ್ತದೆ ಎಂದರು.ಶುಲ್ಕ-ರಸ್ತೆಗೆ ಕೇಂದ್ರ ಅಸ್ತು: ರಸ್ತೆ ಬಳಕೆ ಶುಲ್ಕ ಸಂಗ್ರಹಿಸುವ ಮೂರು ರಸ್ತೆಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದೆ. ಗಿಣಿಗೇರ- ಗಂಗಾವತಿ- ಸಿಂಧನೂರು (87 ಕಿ.ಮೀ, ರೂ 193 ಕೋಟಿ); ಲಿಂಗಸುಗೂರು- ಕಲ್ಮಲ- ದೇವಸುಗೂರು (102 ಕಿ.ಮೀ, ರೂ 271 ಕೋಟಿ); ಶಿವಮೊಗ್ಗ- ಹೊನ್ನಾಳಿ- ಹರಿಹರ (78 ಕಿ.ಮೀ, ರೂ 136 ಕೋಟಿ); ಈ ರಸ್ತೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಲಾ ಶೇ 20ರಷ್ಟು ಅನುದಾನ ನೀಡಲಿವೆ. ಬಾಕಿ ಹಣವನ್ನು ಗುತ್ತಿಗೆದಾರ ಸಂಸ್ಥೆಗಳೇ ಹೂಡಿಕೆ ಮಾಡಬೇಕು. ಆ ನಂತರ ಅವರು ರಸ್ತೆ ಬಳಕೆ ಶುಲ್ಕ ಸಂಗ್ರಹಿಸುವುದರ ಮೂಲಕ ಅದನ್ನು ವಾಪಸ್ ಪಡೆಯಬಹುದಾಗಿದೆ ಎಂದು ಉದಾಸಿ ಹೇಳಿದರು.ಜಿಲ್ಲಾ ರಸ್ತೆ: ಸುಮಾರು 7,754 ಕಿ.ಮೀ. ಉದ್ದದ ರಾಜ್ಯ ಮತ್ತು ಜಿಲ್ಲಾ ಹೆದ್ದಾರಿಗಳನ್ನು 2,797 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸುವ ಉದ್ದೇಶ ಇದ್ದು, ಇದಕ್ಕೆ ಇದೇ 9ರಂದು ಹಣಕಾಸು ಇಲಾಖೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಈ ಕುರಿತು ಮುಖ್ಯಮಂತ್ರಿ ಜತೆಗೂ ಚರ್ಚಿಸಲಾಗುವುದು ಎಂದರು.ರಸ್ತೆಗುಂಡಿ: ರಾಜ್ಯದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಶೇ 71ರಷ್ಟು ಆಗಿದ್ದು, ಈ ತಿಂಗಳಲ್ಲಿ ಎಲ್ಲ ಕಡೆಯೂ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಉದಾಸಿ ಉತ್ತರಿಸಿದರು.ಶಿರಾಡಿಘಾಟ್ ರಸ್ತೆಯಲ್ಲೂ 22 ಕಿ.ಮೀ. ಉದ್ದದ ರಸ್ತೆಯಲ್ಲಿ ಗುಂಡಿ ಮುಚ್ಚಲಾಗಿದೆ. ಇನ್ನೂ 14 ಕಿ.ಮೀ. ಬಾಕಿ ಇದ್ದು, ಅದನ್ನು 10 ದಿನದಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

 

Post Comments (+)