ಶನಿವಾರ, ಜೂನ್ 19, 2021
27 °C
ಬಲಿಗೆ ಮತದಾನ ಬಹಿಷ್ಕಾರ

ಪಟ್ಟು ಬಿಡದ ಇನಾಂ ಭೂಮಿ ನಿವಾಸಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳಸ: ಹೋಬಳಿಯ ಇನಾಂ ಭೂಮಿ ಹೋರಾಟದ ಮುಂಚೂಣಿಯಲ್ಲಿರುವ ಬಲಿಗೆ ಗ್ರಾಮಸ್ಥರು ಮುಂದಿನ ತಿಂಗಳಿನ ಲೋಕಸಭಾ ಚುನಾವಣೆ­ಯಲ್ಲಿ ಮತದಾನ ಮಾಡದಿರುವ ತಮ್ಮ ನಿರ್ಧಾರವನ್ನು ಇನ್ನಷ್ಟು ಗಟ್ಟಿ­ಗೊಳಿಸಿದ್ದಾರೆ.5 ದಿನಗಳಿಂದ ಬಲಿಗೆ ಕಡಿವೆ ಪ್ರದೇಶದಲ್ಲಿ ಸತತ ಧರಣಿ ನಡೆಸುತ್ತಿರುವ ಬಲಿಗೆ ಗ್ರಾಮಸ್ಥರು ತಮ್ಮ ಭೂಮಿಯ ಹಕ್ಕು ಸಿಗದ ಹೊರತು ಮತದಾನ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಾರೆ.ಶನಿವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ್ದ ತಹಸೀಲ್ದಾರ್‌ ಶಿವರಂಗಪ್ಪ ಗ್ರಾಮಸ್ಥರು ಮತದಾನ ಮಾಡುವಂತೆ ಒಲಿಸಲು ಮಾಡಿದ ಎಲ್ಲ ಯತ್ನವೂ ವಿಫಲವಾಯಿತು.‘ನೀವು ಮತದಾನ ಮಾಡಿ ನಿಮಗೆ ತಕ್ಕ ಅಭ್ಯರ್ಥಿಯನ್ನು ಆರಿಸಿದರೆ ಅವರ ಬಳಿ ನಿಮ್ಮ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸುವ ನೈತಿಕತೆ ಇರುತ್ತದೆ. ಮತದಾನ ಬಹಿಷ್ಕಾರ ಮಾಡಿದರೆ ಈ ವಿಚಾರದಲ್ಲಿ ಹಿನ್ನಡೆ ಉಂಟಾಗುತ್ತದೆ’ ಎಂದು ತಹಸೀಲ್ದಾರ್‌ ಗ್ರಾಮಸ್ಥರ ಮನವೊಲಿಸುವ ಯತ್ನ ಮಾಡಿದರು.ಆದರೆ ಈ ಓಲೈಕೆಗೆ ಬಗ್ಗದ ಗ್ರಾಮಸ್ಥರು, ತಾವು ಕೃಷಿ ಮಾಡಿರುವ ಭೂಮಿ ಕಳಸೇಶ್ವರ ಸ್ವಾಮಿಯ ಇನಾಂ ಭೂಮಿಯೋ ಅಥವಾ ಮೀಸಲು ಅರಣ್ಯವೋ ಎಂಬುದು ಮೊದಲು ತೀರ್ಮಾನ ಆಗಬೇಕು. ತಲೆತಲಾಂತರ­ದಿಂದ ಕೃಷಿ ಮಾಡಿರುವವರನ್ನು ಮತ್ತು ಸರ್ಕಾರದ ಹಕ್ಕುಪತ್ರ ಪಡೆದವರನ್ನೂ ಒಕ್ಕಲೆಬ್ಬಿಸಲು ಮುಂದಾಗಿರುವುದು ಪ್ರಜಾಪ್ರಭುತ್ವವೇ’ ಎಂದು ತಹಶೀ­ಲ್ದಾರರಿಗೆ ಮರುಪ್ರಶ್ನೆ ಹಾಕಿದರು.ಇನಾಂ ವಿವಾದವು ಸದ್ಯ ನ್ಯಾಯಾ­ಲಯದಲ್ಲಿ ಇರುವುದರಿಂದ ಈ ಬಗ್ಗೆ ಈಗಲೇ ಪರಿಹಾರ ಸಾಧ್ಯವಿಲ್ಲ ಎಂದು ತಹಶೀಲ್ದಾರರು ಜನರಿಗೆ ವಿವರಣೆ ನೀಡಿದರು. ಆದರೆ ಇದರಿಂದ ತೃಪ್ತರಾಗದ ಗ್ರಾಮಸ್ಥರು ‘ಸರ್ಕಾರ ಕೂಡಲೇ ಇನಾಂಭೂಮಿ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಲೇಬೇಕು. ಇಲ್ಲ­ದಿದ್ದರೆ ನಾವು ಮತದಾನ ಮಾಡುವುದೇ ಇಲ್ಲ. ಜೊತೆಗೆ ಅನಿರ್ದಿಷ್ಟ ಅವಧಿವರೆಗೆ ಮುಷ್ಕರ­ವನ್ನೂ ಮುಂದುವರೆಸುತ್ತೇವೆ’ ಎಂದು ಖಡಾಖಂಡಿತವಾಗಿ ಹೇಳಿದರು.ಗ್ರಾಮಸ್ಥರಾದ ಸವಿಂಜಯ, ಪ್ರಕಾಶ್‌, ಧರಣೇಂದ್ರ, ಪುಟ್ಟಯ್ಯ, ದೇವರಾಜಯ್ಯ, ಸತ್ಯೇಂದ್ರ, ಪಾರ್ಶ್ವ­ನಾಥ್‌ ಮತ್ತಿತರರು ಈ ಸಂದರ್ಭ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.