ಶನಿವಾರ, ಡಿಸೆಂಬರ್ 7, 2019
24 °C

ಪಟ ಪಟ... ಹಾರೋ ಗಾಳಿಪಟ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ ಪಟ... ಹಾರೋ ಗಾಳಿಪಟ..!

ಸಂಕ್ರಾಂತಿ ಹಬ್ಬವನ್ನು ಪರಸ್ಪರ ಎಳ್ಳು-ಬೆಲ್ಲ ವಿನಿಮಯ ಮಾಡಿಕೊಂಡು ಆಚರಿಸುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಬೀದರ್ ಜಿಲ್ಲೆ ಹುಮನಾಬಾದ್ ಪಟ್ಟಣದಲ್ಲಿ ಬೇರೆ ಕಡೆಯಂತೆ ಎಳ್ಳುಬೆಲ್ಲ ವಿನಿಮಯ ಮಾಡಿಕೊಳ್ಳುವ ಜೊತೆಗೆ `ಗಾಳಿಪಟಗಳ ಹಬ್ಬ~ವಾಗಿಯೂ ಆಚರಿಸುವುದು ವಿಶೇಷ.ಹಬ್ಬಕ್ಕೂ ಹಲವು ತಿಂಗಳ ಮುಂಚಿತವಾಗಿಯೇ ಗಾಳಿಪಟ ಸಿದ್ಧಪಡಿಸುವ ಕಾಯಕ ಆರಂಭವಾಗುತ್ತದೆ. ಅದಕ್ಕೆ ಅವಶ್ಯಕವಾದ ದಾರಕ್ಕೆ (ಮಾಂಜಾ) ಮಾಡುವ ಕಾರ್ಯ ಸಾಕಷ್ಟು ಮೊದಲೇ ಆರಂಭಗೊಳ್ಳುತ್ತದೆ.ಚಿಕ್ಕವರು, ದೊಡ್ಡವರು ಎಂಬ ಭೇದವಿಲ್ಲದೇ ಪ್ರತಿ ಓಣಿಗಳಲ್ಲಿನ ಛಾವಣಿ ಮೇಲೆ ಶಾಮಿಯಾನಾ ಹಾಕಲಾಗುತ್ತದೆ.ಪತಂಗಗಳಲ್ಲಿ ಸ್ಪರ್ಧೆ ನಡೆಯುವಾಗ ಧ್ವನಿವರ್ಧಕ ತಪ್ಪದೇ ಬಳಸಲಾಗುತ್ತದೆ. ಅವರವರ ಸಾಮರ್ಥ್ಯದ ಮೇರೆಗೆ ಅಗತ್ಯ ಬಿದ್ದರೆ ಮಿರ್ಚಿ ಭಜಿ, ಅಲೂಭಾತ್, ಎಣ್ಣೆ ಹೋಳಿಗೆ ಮೊದಲಾದ ಉಪಾಹಾರ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.ರೆಡಿಮೇಡ್ ಪಟ ಲಗ್ಗೆ!: ಮೊದಲು ಹಾಳೆಯಿಂದ ಮನೆಯಲ್ಲೇ ಪಟ ಸಿದ್ಧಪಡಿಸಲಾಗುತ್ತಿತ್ತು. ಈಗ ತಾಳ್ಮೆಯಿಂದ ಕುಳಿತು ಪಟ ತಯಾರಿಸಲು ಯಾರಿಗೂ ಸಮಯ- ವ್ಯವಧಾನ ಇಲ್ಲವಾಗಿದೆ. ಕೇಳಿದ ತಕ್ಷಣ ಎಲ್ಲವೂ ಕೈಗೆ ಸಿಗಬೇಕು! ಪ್ಲಾಸ್ಟಿಕ್‌ನಿಂದ ಸಿದ್ಧಪಡಿಸಲಾದ ಕಡಿಮೆ ಬೆಲೆಯ ಪಟಗಳು ಮಾರುಕಟ್ಟೆಗೆ ಲಗ್ಗೆ ಹಾಕಿವೆ. ಚಿಣ್ಣರು ಮತ್ತು ಯುವಕರನ್ನು ಆಕರ್ಷಿಸಲು ಪಟಗಳಿಗೆ ಚಾಲ್ತಿಯಲ್ಲಿರುವ ಹೊಸ ಚಲನಚಿತ್ರ ಹಾಗೂ ನಟ, ನಟಿಯರ ಹೆಸರು ಇಡಲಾಗುತ್ತಿದೆ. ಅಂಗಡಿಗೆ ಬರುವ ಗ್ರಾಹಕರು ಒಂದು ಡಜನ್ ಟಾರ್ಜನ್, ರೋಬೋಟ್, ಸಲ್ಮಾನ್, ಶಾರೂಖ್, ಕರಿನಾ, ಪ್ರಿಯಾಂಕಾ, ರಾಖಿ ಸಾವಂತ್ ಹೆಸರಿನ ಪಟ ನೀಡುವಂತೆ ಕೇಳುತ್ತಾರೆ ಎನ್ನುವುದು ಜೆ.ಕೆ ಡಿಪಾರ್ಟ್‌ಮೆಂಟ್ ಮಾಲೀಕರ ಅಭಿಪ್ರಾಯ.ಮೊದಲು ಪಟ್ಟೆದಾರ್, ಟೋಪೇದಾರ, ಆಂಖೇದಾರ್, ಧುಮೆದಾರ್, ಚೌಕೆದಾರ್ ಮೊದಲಾದ ಹೆಸರಿನ ಪಟಗಳು ಇರುತ್ತಿದ್ದವು. ಈಗ ಅವುಗಳ ಹೆಸರು ಮಾಯವಾಗಿವೆ. ಆದರೆ ದೇಸಿ ಪಟುಗಳು ಹೆಚ್ಚು ಭಾರ ಇರುವುದರಿಂದ ಬೇಗನೆ ಮೇಲೆ ಹಾರುತ್ತವೆ. ಗಡ್ಡಲ್ ಶಿವಕುಮಾರ, ಮಹೇಶ ಅಗಡಿ, ವಿಜಯಕುಮಾರ ಚೆಟ್ಟಿ ಸೇರಿದಂತೆ ಅಧಿಕ ಆಸಕ್ತಿಯಿಂದ ಪಟ ಹಾರಿಸುವ 30ಕ್ಕೂ ಅಧಿಕ ತಂಡಗಳು ಒಂದು ತಿಂಗಳ ಮುಂಚಿತವಾಗಿಯೇ ಹಣ ನೀಡುತ್ತಾರೆ ಎಂದು ರಾಜಶೇಖರ ಶೀಲವಂತ ಹೇಳುತ್ತಾರೆ.“ರಾಜಶೇಖರ ಅವರು ಸಿದ್ಧಪಡಿಸುವ ಪಟಗಳು ಗುಣಮಟ್ಟದ ಜೊತೆಗೆ ಬೇಗನೇ ಮೇಲೆ ಹಾರುತ್ತವೆ ಎಂಬ ಕಾರಣಕ್ಕಾಗಿ ನಾವು ಕಳೆದ 15 ವರ್ಷಗಳಿಂದ ಶೀಲವಂತ ಅವರ ಬಳಿಯೇ ಪಟ ಖರೀದಿಸುತ್ತಿದ್ದೇವೆ” ಎಂದು ಶಶಿಕಾಂತ ಯಲಾಲ್, ಬಾಬುರಾವ ಪರಮಶೆಟ್ಟಿ, ದತ್ತಕುಮಾರ ಚಿದ್ರಿ, ಶಿವಕುಮಾರ ಚಿಟನಳ್ಳಿ, ಲಾರಾ, ಮಾಣಿಕಪ್ಪ, ಶ್ರೀಕಾಂತ ತಾಂಡೂರ್, ಪ್ರೇಮ ಜಾಜಿ, ಮಲ್ಲಿಕಾರ್ಜುನ ಸೀಗಿ ಇತರರು ಹೇಳುತ್ತಾರೆ.25 ವರ್ಷದಿಂದಲೂ

ಹುಮನಾಬಾದಿನ ರಾಜಶೇಖರ ಶಿವಶರಣಪ್ಪ ಶೀಲವಂತ 25 ವರ್ಷಗಳಿಂದ ಪಟ ತಯಾರಿಸುವ ಕಾಯಕವನ್ನು ನಿರಂತರ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಹಿಂದೆ ಇವರ ಸಹೋದರ ಸುಭಾಷ ಶೀಲವಂತ ಅವರು ಸಿದ್ಧಪಡಿಸಿದ ಪಟಗಳು ಬೇಗ ಮೇಲೆ ಹಾರುವ ಮೂಲಕ ಖುಷಿ ನೀಡುತ್ತಿದ್ದವು. ಜನರಿಂದ ಮೆಚ್ಚುಗೆ ಬಂತು. ಅವರ ಕಲೆ ಕರಗತ ಮಾಡಿಕೊಂಡ ತಾವು ಅಣ್ಣನ ಮರಣಾನಂತರ ಅವರ ಸವಿನೆನಪಿಗಾಗಿ ಪಟ ತಯಾರಿ- ಮಾರಾಟ ಆರಂಭಿಸಿದ್ದಾಗಿ ಹೇಳುವ ರಾಜಶೇಖರ, ಈ ಕೆಲಸ ಆರಂಭಿಸಿ ಈಗ 25 ವರ್ಷ ಪೂರ್ಣಗೊಂಡಿದೆ ಎಂದು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)