ಪಠ್ಯದಲ್ಲಿ ಆಧುನಿಕ ಸಾಹಿತ್ಯ ಅಳವಡಿಸಿ

7

ಪಠ್ಯದಲ್ಲಿ ಆಧುನಿಕ ಸಾಹಿತ್ಯ ಅಳವಡಿಸಿ

Published:
Updated:

ಬಳ್ಳಾರಿ: ವಿಲಿಯಂ ಶೇಕ್ಸ್‌ಪಿಯರ್ ಹಾಗೂ ಇತರ ಪುರಾತನ ಸಾಹಿತಿಗಳು ರಚಿಸಿರುವ ಇಂಗ್ಲಿಷ್ ಸಾಹಿತ್ಯವನ್ನೇ ಭಾಷಾ ವಿದ್ಯಾರ್ಥಿಗಳ ಪಠ್ಯ ವಿಷಯದಲ್ಲಿ ಅಳವಡಿಸುವ ಬದಲು, ಯುವ ಪೀಳಿಗೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಆಧುನಿಕ ಸಾಹಿತ್ಯವನ್ನು ಅಳವಡಿಸುವ ಅಗತ್ಯವಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಡಾ. ಮಂಜಪ್ಪ ಹೊಸಮನೆ ಅಭಿಪ್ರಾಯಪಟ್ಟರು.ನಗರದ ವೀರಶೈವ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾಗದಿಂದ ಶುಕ್ರವಾರ ಏರ್ಪಡಿಸಿದ್ದ `ಭಾರತೀಯ ಇಂಗ್ಲಿಷ್ ಸಾಹಿತ್ಯ- ಪ್ರಸ್ತುತ ವಿದ್ಯಮಾನ~ ವಿಷಯ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ಕಳೆದ ಶತಮಾನದ 50 ಮತ್ತು 60ರ ದಶಕದಲ್ಲಿ ಭಾರತೀಯ ಸಾಹಿತಿಗಳು ಇಂಗ್ಲಿಷ್ ಸಾಹಿತ್ಯದಲ್ಲಿ ತೊಡಗಿದರೆ, ಆರ್.ಕೆ. ನಾರಾಯಣ್ ಮತ್ತಿತರ ಸಾಹಿತಿಗಳು 60ರ ದಶಕದ ನಂತರ ಇಂಗ್ಲಿಷ್ ಸಾಹಿತ್ಯದಲ್ಲಿ ತೊಡಗಿ, ಇಂಗ್ಲಿಷ್ ಸಾಹಿತ್ಯ ರಚನೆಯಲ್ಲಿ ಭಾರತೀಯರು ಸಂಪೂರ್ಣ ಹಿಡಿತ ಸಾಧಿಸಿದ್ದನ್ನು ಸಾಬೀತು ಪಡಿಸಿದ್ದಾರೆ ಎಂದು ಅವರು ಹೇಳಿದರು.1980ರ ಈಚೆಗೆ ಭಾರತೀಯ ಸಾಹಿತಿಗಳಿಂದ ರಚಿತವಾಗುತ್ತಿರುವ ಇಂಗ್ಲಿಷ್ ಸಾಹಿತ್ಯವು ಓದುಗರು ಅರಗಿಸಿಕೊಳ್ಳದಷ್ಟು ಕ್ಲಿಷ್ಟವಾಗಿದ್ದು, ಯುವಜನರನ್ನು ಸೆಳೆಯುವಂತಹ ಸಾಹಿತ್ಯ ರಚನೆ ಇಂದಿನ ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.ಕೆಲವೇ ಕೆಲವರನ್ನು ಹೊರತುಪಡಿಸಿದಂತೆ ಬಹುತೇಕ ಭಾರತೀಯ ಇಂಗ್ಲಿಷ್ ಸಾಹಿತಿಗಳು ಸ್ಥಳೀಯ ಪರಂಪರೆ ಮತ್ತು ಸಂಸ್ಕೃತಿಯಿಂದ ದೂರವಾಗಿಯೇ ಇದ್ದಾರೆ ಎಂದು ವಿಶೇಷ ಉಪನ್ಯಾಸ ನೀಡಿದ ಹೈದರಾಬಾದ್‌ನ ಇಂಗ್ಲಿಷ್ ಹಾಗೂ ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪ್ರೊ. ಅಮಿತ್‌ಕುಮಾರ್ ಹೇಳಿದರು.ಭಾರತದಲ್ಲಿ ಮೇಲ್ಮಧ್ಯಮ ವರ್ಗದವರೇ ಇಂಗ್ಲಿಷ್ ಸಾಹಿತ್ಯದಲ್ಲಿ ತೊಡಗಿ, ದೇಶದ ಸ್ಥಿತಿಗತಿಯನ್ನು ಬಣ್ಣಿಸಿದ್ದಾರೆ. ಅವರಲ್ಲೇ ಕೆಲವರು ಇಲ್ಲಿನ ಬಡತನವನ್ನೇ ಮೂಲವಾಗಿಸಿಕೊಂಡು ಸಾಹಿತ್ಯ ರಚಿಸಿದ್ದು, ಪಾಶ್ಚಿಮಾತ್ಯರೂ ಅದನ್ನು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ ಎಂದರು.ಭಾರತೀಯ ಇಂಗ್ಲಿಷ್ ಸಾಹಿತಿಗಳಿಗೂ ಪ್ರಾದೇಶಿಕ ಭಾಷೆಗಳ ಸಾಹಿತಿಗಳಿಗೂ ಸಾಕಷ್ಟು ವ್ಯತ್ಯಾಸವಿದ್ದು, ಅವರವರ ಕೃತಿಗಳಲ್ಲೇ ಕಂಡುಬರುತ್ತದೆ. ಪ್ರಸ್ತುತ ಅನೇಕ ವಿವಿಗಳು, ಪ್ರಕಾಶನ ಸಂಸ್ಥೆಗಳು ಪ್ರಾದೇಶಿಕ ಭಾಷೆಯ ಸಾಹಿತಿಗಳ ರಚನೆಯ ಅನುವಾದಕ್ಕೂ ಆದ್ಯತೆ ನೀಡುತ್ತಿವೆ. ಪಾಶ್ಚಾತ್ಯರಿಗೆ ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸಲು ಇದರಿಂದ ನೆರವಾಗಿದೆ ಎಂದು ಅವರು ತಿಳಿಸಿದರು.ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್, ಜಾನೆಕುಂಟೆ ಸಣ್ಣ ಬಸವರಾಜ್, ಕೆ.ಎಂ. ಮಹೇಶ್ವರಸ್ವಾಮಿ, ಜೆ.ನೇಪಾಕ್ಷಪ್ಪ, ಎಂ. ಶರಣಬಸವನಗೌಡ, ಎಸ್.ಎಂ. ಪ್ರಭುಸ್ವಾಮಿ ಉಪಸ್ಥಿತರಿದ್ದರು. ಪ್ರಾಚಾರ್ಯ ಡಾ.ಆರ್. ಮರೇಗೌಡ ಅಧ್ಯಕ್ಷತೆವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry