ಸೋಮವಾರ, ಅಕ್ಟೋಬರ್ 21, 2019
26 °C

ಪಠ್ಯದಲ್ಲಿ ಭಗವದ್ಗೀತೆ: ಚಿಂತನೆ

Published:
Updated:

ಬೆಂಗಳೂರು: `ಭಗವದ್ಗೀತೆಯನ್ನು ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಲು ಸರ್ಕಾರ ಚಿಂತನೆ ನಡೆಸಿದೆ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೆ ಮಹಾಸಂಸ್ಥಾನ ಮಠದ ವತಿಯಿಂದ ಭಾನುವಾರ ನಗರದ ಅರಮನೆ ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಮಧ್ಯಪ್ರದೇಶದಲ್ಲಿ ಜಾರಿಗೆ ಬಂದಂತೆ ಕರ್ನಾಟಕದಲ್ಲೂ ಭಗವದ್ಗೀತೆಯನ್ನು ಎಲ್ಲ ಶಾಲೆಗಳ  ಪಠ್ಯಕ್ರಮದಲ್ಲಿ ಅನ್ವಯಿಸುವಂತೆ ಸಾರ್ವಜನಿಕವಾಗಿ ಚರ್ಚೆ ನಡೆಸಿ, ಅದರ ಬಗೆಗೆ ಕ್ರಮ ಕೈಗೊಳ್ಳಲಾಗುವುದು~ ಎಂದರು.

`ಭಗವದ್ಗೀತೆಯನ್ನು ಮಕ್ಕಳಿಗೆ ಕಂಠಪಾಠ ಮಾಡಿಸಿ, ಮನೆ-ಮನೆಗಳಲ್ಲೂ ಅಭಿಯಾನ ನಡೆಸಿ ಅದರ ಬಗೆಗೆ ಅರಿವು ಮೂಡಿಸುವಂತಾಗಬೇಕು. ಭಗವದ್ಗೀತೆಯ ಮಹತ್ವ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಅರ್ಥವಾಗುವಂತಾಗಬೇಕು. ಭಗವದ್ಗೀತೆ ಒಂದೇ ಧರ್ಮಕ್ಕೆ ಸೀಮಿತವಾದಂತಹುದಲ್ಲ. ಅದರಲ್ಲಿ ಎಲ್ಲ ಧರ್ಮಗಳ ಸಾಮರಸ್ಯ ಸಾಧಿಸುವಂತಹ ಅಂಶಗಳಿವೆ~ ಎಂದು ಹೇಳಿದರು.

`ಭಗವದ್ಗೀತೆಯಲ್ಲಿ ದುಷ್ಟ ಶಕ್ತಿಯನ್ನು ಶಿಕ್ಷಿಸುವ, ಮನುಷ್ಯನ ಅಂತರಂಗ ಮತ್ತು ಬಹಿರಂಗವನ್ನು ನಿರ್ಮಲಗೊಳಿಸುವ ಭಾವವಿದೆ. ರಾಷ್ಟ್ರೀಯ ಭಾವೈಕ್ಯ ಸಾರುವ ಗುಣವಿದೆ. ಇತ್ತೀಚೆಗೆ ಭಗವದ್ಗೀತೆ ಬಗೆಗೆ ಅಪಪ್ರಚಾರ ಕಾರ್ಯಗಳು ನಡೆಯುತ್ತಿವೆ. ಇದರ ಬಗೆಗೆ ಅವರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲಿ. ರಷ್ಯಾದಲ್ಲಿ ನಡೆದ ಭಗವದ್ಗೀತೆಯ ಅವಮಾನಕ್ಕೆ ಈ ಅಭಿಯಾನ ತಕ್ಕ ಉತ್ತರ ನೀಡಿದೆ~ ಎಂದರು.

ವಿರೋಧವಿಲ್ಲ: ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, `ಭಗವದ್ಗೀತೆಯನ್ನು ಶಾಲಾ ಪಠ್ಯವನ್ನಾಗಿಸುವ ಬಗೆಗೆ ಯಾರ ವಿರೋಧವೂ ಇರುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಸದಾನಂದಗೌಡರು ತೀರ್ಮಾನ ಕೈಕೊಳ್ಳಬೇಕು~ ಎಂದರು.

`ಭಗವದ್ಗೀತೆ ಜಗತ್ತಿಗೆ ಸಮಾನತೆಯ ತತ್ವವನ್ನು ಸಾರುತ್ತದೆ. ಭ್ರಾತೃತ್ವದ ಗುಣವನ್ನು ನೀಡುತ್ತದೆ. ಇದರಿಂದ ಗೀತೆಯ ಪಠಣ ಎಲ್ಲರಿಗೂ ಪ್ರಿಯವಾಗುತ್ತದೆ.  ಬೇರೆ ಧರ್ಮದವರೂ ಸಹ ಭಗವದ್ಗೀತೆಯ ಪಠಣ ಮಾಡುವುದರಿಂದ ಯಾರ ಆಕ್ಷೇಪವು ವ್ಯಕ್ತವಾಗುವುದಿಲ್ಲ ಎಂಬ ವಿಶ್ವಾಸವಿದೆ~ ಎಂದು ಅವರು ಹೇಳಿದರು.

ಸೋಂದಾ ಸ್ವರ್ಣವಲ್ಲೆ ಮಹಾಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ, `ಆಧುನಿಕ ವಿಜ್ಞಾನ ಮನಸ್ಸಿಗೆ ಬಲ ನೀಡುವಲ್ಲಿ ಸೋತಿದೆ. ಬೆಂಗಳೂರಿನಲ್ಲಿ ನಿತ್ಯ ನಡೆಯುತ್ತಿರುವ ಆತ್ಮಹತ್ಯೆಗಳು ಇದಕ್ಕೆ ಸಾಕ್ಷಿಯಾಗಿವೆ. ಮನಸ್ಸನ್ನು ದುರ್ಬಲಗೊಳಿಸಿ ಜೀವನವನ್ನು ಸುಲಭವಾಗಿ  ಅಂತ್ಯಗೊಳಿಸುವುದು ಇಂದು ಹೆಚ್ಚಾಗಿ ನಡೆಯುತ್ತಿದೆ~ ಎಂದು ಹೇಳಿದರು.

`ಭಗವದ್ಗೀತೆಯಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ಶ್ರೀಕೃಷ್ಣ ಪರಮಾತ್ಮ ನೀಡಿದ್ದಾನೆ. ಅವುಗಳ ಅನುಷ್ಠಾನ ಮತ್ತು ಅನುಕರಣೆ ಸಮ ಪ್ರಮಾಣದಲ್ಲಿ ಆಗಬೇಕು. ಆಗಲೇ ಮನುಷ್ಯ ಜನ್ಮ ಸಾರ್ಥಕವಾಗಲು ಸಾಧ್ಯವಿದೆ~ ಎಂದು ನುಡಿದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಮಾತನಾಡಿ, `ಭಗವದ್ಗೀತೆ ಸಾರ್ವಕಾಲಿಕವಾದುದು. ಎಲ್ಲ ಕಾಲಕ್ಕೂ, ಎಲ್ಲರಿಗೂ ಅನ್ವಯವಾಗುವಂತಹುದು. ಮನುಷ್ಯನ ಮನಸ್ಸನ್ನು ನಿಯಂತ್ರಿಸಿ, ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಪ್ರೇರೇಪಣೆ ನೀಡುವ ಶಕ್ತಿ ಭಗವದ್ಗೀತೆಗೆ ಇದೆ~ ಎಂದರು.

ಸಮಾರಂಭದಲ್ಲಿ ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ, ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಮಕೃಷ್ಣಮಠದ ಹರ್ಷಾನಂದ ಸ್ವಾಮೀಜಿ, ರಾಜ್ಯಸಭಾ ಸದಸ್ಯ ಎಂ.ರಾಮಾ ಜೋಯಿಸ್ ಮತ್ತಿತರರು ಇದ್ದರು.

Post Comments (+)