ಗುರುವಾರ , ಜನವರಿ 23, 2020
28 °C

ಪಠ್ಯದಲ್ಲಿ ಸಹಕಾರ ತತ್ವ ಅಳವಡಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ‘ಪಠ್ಯಪುಸ್ತಕದಲ್ಲಿ ಸಹಕಾರ ತತ್ವಗಳ ಮಹತ್ವ ಕುರಿತು ಮಕ್ಕಳಿಗೆ ಅರಿವು ಮೂಡಿಸಲು ಸರ್ಕಾರ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಎಂ. ಗುರುಮಲ್ಲಪ್ಪ ತಿಳಿಸಿದರು.ನಗರದ ಸರ್ಕಾರಿ ಪದವಿಪೂರ್ವ ಬಾಲಕರ ಕಾಲೇಜಿನಲ್ಲಿ ಸೋಮವಾರ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್‌ನಿಂದ ಹಮ್ಮಿಕೊಂಡಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.ಸಹಕಾರ ಕ್ಷೇತ್ರದ ಬೆಳವಣಿಗೆಯಿಂದ ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಲಿದೆ. ಸಹಕಾರ ಸಂಘಗಳಲ್ಲಿ ಪ್ರಾಮಾಣಿಕತೆ, ಸೇವಾ ಮನೋಭಾವ ಇದ್ದರೆ ಸಂಘ ಪ್ರಗತಿ ಹೊಂದಲಿದೆ. ಆದರೆ, ಕೆಲವು ಸಂಘಗಳಲ್ಲಿ ನಡೆಯುವ ಭ್ರಷ್ಟಾಚಾರ, ಹಣದ ದುರುಪಯೋಗ ಪ್ರಕರಣಗಳು ಆಡಳಿತ ಮಂಡಳಿಯ ನಿರ್ಲಕ್ಷ್ಯ, ತಿಳಿವಳಿಕೆಯ ಕೊರತೆಗೆ ಸಾಕ್ಷಿಯಾಗಿವೆ ಎಂದು ವಿಷಾದಿಸಿದರು.ಗ್ರಾಮಗಳಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಮತ್ತು ಕೃಷಿಪತ್ತಿನ ಸಹಕಾರ ಸಂಘಗಳು ಆ ಭಾಗದ ರೈತರ ಆಶೋತ್ತರಗಳಿಗೆ ಸ್ಪಂದಿಸುತ್ತ ಪ್ರಗತಿ ಕಾಣುತ್ತಿವೆ. ಹಲವು ಸಹಕಾರ ಬ್ಯಾಂಕ್‌ಗಳು ವಹಿವಾಟು ಹೆಚ್ಚಿಸಿಕೊಂಡು ರೈತರಿಗೆ ಎಲ್ಲ ರೀತಿಯ ಸೌಲಭ್ಯ  ಕಲ್ಪಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ರಚನೆಯಾಗಿರುವ ಮಹಿಳಾ ಸ್ವಸಹಾಯ ಸಂಘಗಳ ಕಾರ್ಯವೈಖರಿ ಸಹಕಾರ ಕ್ಷೇತ್ರದ ಮಹತ್ವವನ್ನು ಸಾರುತ್ತದೆ ಎಂದರು.ವಿದ್ಯಾರ್ಥಿ ಜೀವನದಲ್ಲಿ ಸಹಕಾರ ಕ್ಷೇತ್ರದ ಬಗ್ಗೆ ಒಲವು ಮೂಡಿಸಲು ಇಂತಹ ಪ್ರಬಂಧ, ಚರ್ಚಾ ಸ್ಪರ್ಧೆಗಳು ಹೆಚ್ಚು ಸಹಕಾರಿಯಾಗಿವೆ. ವಿದ್ಯಾರ್ಥಿಗಳು ಸಹಕಾರ ಕ್ಷೇತ್ರದ ಸಾಧಕ, ಬಾಧಕದ ಬಗ್ಗೆ ತಿಳಿದುಕೊಳ್ಳಬೇಕು ಎಂಬುದು ನಮ್ಮ ಉದ್ದೇಶ. ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಿ ಕೊಡಲಾಗುವುದು ಎಂದು ತಿಳಿಸಿದರು.ಚರ್ಚಾ ಸ್ಪರ್ಧೆಯಲ್ಲಿ ತೆರಕಣಾಂಬಿ ಪದವಿಪೂರ್ವ ಕಾಲೇಜಿನ ಕೆ.ಎಸ್. ಮಂಜುನಾಥ(ಪ್ರಥಮ), ಮರಿಯಾಲದ ಶ್ರೀಮುರುಘರಾಜೇಂದ್ರ ಪದವಿಪೂರ್ವ ಕಾಲೇಜಿನ ಮನು(ದ್ವಿತೀಯ), ಕೊಳ್ಳೇಗಾಲ ಎಸ್‌ವಿಕೆ ಕಾಲೇಜಿನ ಜ್ಯೋತಿ(ತೃತೀಯ) ಅವರಿಗೆ ಬಹುಮಾನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಗುರುಸ್ವಾಮಿ, ಉಪ ಪ್ರಾಂಶುಪಾಲ ರಾಚಯ್ಯ, ತೀರ್ಪುಗಾರರಾದ ಬಿ. ಸಿದ್ದೇಗೌಡ, ಕೆ.ಬಿ. ವೆಂಕಟೇಶ್, ಮಾದಪ್ಪ, ಯೂನಿಯನ್‌ನ ಕಾರ್ಯ ನಿರ್ವಹಣಾಧಿಕಾರಿ ಶಿವಾನಂದ, ಮ್ಯಾನೇಜರ್ ಮಲ್ಲಿಕಾರ್ಜುನ್‌ ಹಾಜರಿದ್ದರು.

ಪ್ರತಿಕ್ರಿಯಿಸಿ (+)