ಪಠ್ಯದೊಂದಿಗೆ ಪರಿಸರ ಪಾಠವೂ ಇರಲಿ

7
'ಪರಿಸರ ಮಿತ್ರ ಶಾಲೆ' ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಇಕ್ಕೇರಿ ಸಲಹೆ

ಪಠ್ಯದೊಂದಿಗೆ ಪರಿಸರ ಪಾಠವೂ ಇರಲಿ

Published:
Updated:

ಚಿತ್ರದುರ್ಗ: 'ಬಳಸಿ ಬಿಸಾಡುವ ವಸ್ತುಗಳನ್ನು ಕೆಲವು ದೇಶಗಳಲ್ಲಿ ತಂತ್ರಜ್ಞಾನಗಳನ್ನು ಬಳಸಿ ಮರುಬಳಕೆ ಮಾಡುತ್ತಾರೆ. ಅಂಥ ರಾಷ್ಟ್ರಗಳು ನಮಗೆ ಮಾದರಿಯಾಗಬೇಕು. ಆ ತಂತ್ರಜ್ಞಾನಗಳನ್ನು ನಾವು ಅಳವಡಿಸಿಕೊಂಡು, ರಾಶಿ ಯಾಗುತ್ತಿರುವ ತ್ಯಾಜ್ಯದ ಪ್ರಮಾಣವನ್ನು ಕಡಿತಗೊಳಿಸಬೇಕು' ಎಂದು ಜಿಲ್ಲಾಧಿಕಾರಿ ವಿ.ಪಿ.ಇಕ್ಕೇರಿ ಸಲಹೆ ನೀಡಿದರು.ನಗರದ ತರಾಸು ರಂಗಮಂದಿರದಲ್ಲಿ ಚಿತ್ರದುರ್ಗ ವಿಜ್ಞಾನ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಆಯ್ದ ಶಾಲಾ ಶಿಕ್ಷಕರಿಗಾಗಿ ಗುರುವಾರ ಆಯೋಜಿಸಿದ್ದ 'ಪರಿಸರ ಮಿತ್ರ ಶಾಲಾ ಕಾರ್ಯಕ್ರಮ- 2013–14' ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮಕ್ಕಳಿಗೆ ಶಾಲಾ ಹಂತದಲ್ಲೇ ಸ್ವಚ್ಛತೆ ಕಲಿಸಬೇಕು. ಸ್ಚಚ್ಛತೆ ಕುರಿತು ಶಿಕ್ಷಣ ನೀಡಬೇಕು. ಪಠ್ಯದ ಜೊತೆಗೆ ಪರಿಸರ ಶಿಕ್ಷಣವನ್ನೂ ಕಲಿಸಬೇಕು.  ಪರಿಸರ ದಿನಾಚರಣೆ ನಿತ್ಯ ನೂತನವಾಗಬೇಕು' ಎಂದು ಸಲಹೆ ನೀಡಿದರು.'ವಸ್ತುಗಳನ್ನು ಬಳಸಿದ ಮೇಲೆ ಅದು ಹೇಗೆ ವಿಲೇವಾರಿಯಾಗುತ್ತದೆ ಎಂದು ನಮಗೆ ಗೊತ್ತಿರಬೇಕು. ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ವಿಲೇವಾರಿ ಮಾಡುವ ವಿಷಯದಲ್ಲಿ ಬಹುದೊಡ್ಡ ತಲೆನೋವಾಗುತ್ತಿದೆ. ಇಂಥ ತ್ಯಾಜ್ಯಗಳನ್ನು ಹೇಗೆ ಬೇರ್ಪಡಿಸಿ, ಮರುಬಳಕೆ ಮಾಡುತ್ತಾರೆ ಎಂಬುದನ್ನು ಕಲಿಯಬೇಕು’ ಎಂದು ಅಭಿಪ್ರಾಯಪಟ್ಟರು.ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಾತನಾಡಿ, 'ನಿಮ್ಮ ಶಾಲಾ ಅಂಗಳದಲ್ಲಿರುವ ಜೀವವೈವಿಧ್ಯವನ್ನು ಮೊದಲು ಮಕ್ಕಳಿಗೆ ಪರಿಚಯಿಸಿ. ಶಾಲೆಯ ಅಂಗಳದಿಂದಲೇ ಪರಿಸರ ಜಾಗೃತಿ ಆರಂಭವಾಗಲಿ' ಎಂದು ಹೇಳಿದರು.'ಪರಿಸರ ಪಾಠ ಶಿಕ್ಷಣ ಹಾಗೂ ಬೋಧನೆಯ ಭಾಗವಾಗಬೇಕು. ಪರಿಸರ ಅಧಿಕಾರಿಗಳು ಪ್ರತಿ ಶಾಲೆಯ ಶಿಕ್ಷಕರೊಂದಿಗೆ ನಿರಂತರ ಒಡನಾಟವಿಟ್ಟುಕೊಳ್ಳಬೇಕು. ರಸಪ್ರಶ್ನೆ, ಪ್ರಬಂಧಸ್ಪರ್ಧೆಯಂತಹ ಕಾರ್ಯಕ್ರಮ ಆಯೋಜಿಸಬೇಕು. ಪ್ರಾಣಿ, ಪಕ್ಷಿಗಳು, ಕಾಡಿನ ಚಿತ್ರದೊಂದಿಗೆ ಪುಸ್ತಕ ತಯಾರಿಸಿ, ಮಕ್ಕಳಿಗೆ ವಿತರಿಸಬೇಕು. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗೆ ಮಾಹಿತಿ ನೀಡಿದ್ದೇನೆ' ಎಂದು ಅವರು ವಿವರಿಸಿದರು.'ವ್ಯವಸ್ಥೆ ಎನ್ನುವುದು ಪರಿಸರದ ಒಂದು ಭಾಗ. ವ್ಯವಸ್ಥೆ ಸರಿಯಾಗಿದ್ದರೆ, ಪರಿಸರ ಸುಂದರವಾಗಿರುತ್ತದೆ. ಶಿಕ್ಷಕರು ಇಂಥ ಪರಿಸರ ಜಾಗೃತಿಯ ಮಾಹಿತಿ ಪಡೆದು ನಂತರ ಮಕ್ಕಳಿಗೆ ತಿಳಿಸಬೇಕು' ಎಂದು ಸಲಹೆ ನೀಡಿದರು.ಪ್ರಾಸ್ತಾವಿಕ ಮಾತನಾಡಿದ, ಚಿತ್ರದುರ್ಗ ವಿಜ್ಞಾನ ಕೇಂದ್ರದ ದಾಸೇಗೌಡ, 'ಶಾಲಾ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವುದು, ಶಾಲಾ ಆವರಣದಲ್ಲಿ ಉತ್ತಮ ವಾತಾವರಣ ನಿರ್ಮಿಸುವುದಕ್ಕಾಗಿ 2007–-08ರಿಂದ ಪರಿಸರ ಮಿತ್ರ ಶಾಲೆ ಕಾರ್ಯಕ್ರಮವನ್ನು ಆಯೋಜಿಸಿ ಕೊಂಡು ಬರಲಾಗುತ್ತಿದೆ.2011-12ರಲ್ಲಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಹಮ್ಮಿಕೊಂಡು ಯಶಸ್ವಿಯಾಗಿತ್ತು. 2012–-13ನೇ ಸಾಲಿನಲ್ಲಿ 26 ಜಿಲ್ಲೆಗಳಿಗೂ ಇದನ್ನು ವಿಸ್ತರಿಸಲಾಯಿತು. ಒಟ್ಟು 20,431 ಶಾಲೆಗಳು ಈ ಕಾರ್ಯಕ್ರಮ ಅನುಷ್ಠಾನಕ್ಕೆ ಆಸಕ್ತಿ ತೋರಿವೆ. ಕಳೆದ ವರ್ಷದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಆರಂಭವಾಗಿದೆ' ಎಂದು ವಿವರಿಸಿದರು. ಪರಿಸರ ಮಿತ್ರ- ಶಾಲಾ ಪ್ರಶಸ್ತಿಗೆ ಶಾಲಾ ಆವರಣವನ್ನು ಹೇಗೆ ಸಜ್ಜುಗೊಳಿಸಬೇಕು ಎಂಬುದನ್ನು ತಿಳಿಸಲು ಆಸಕ್ತ ಶಿಕ್ಷಕರಿಗೆ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಸತೀಶ್, ಚಿತ್ರದುರ್ಗ ವಿಜ್ಞಾನ ಕೇಂದ್ರದ ಶಂಕರಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry