ಪಠ್ಯಪುಸ್ತಕ ಕೇಸರೀಕರಣ ವಿರೋಧಿಸಿ ಪ್ರತಿಭಟನೆ

7

ಪಠ್ಯಪುಸ್ತಕ ಕೇಸರೀಕರಣ ವಿರೋಧಿಸಿ ಪ್ರತಿಭಟನೆ

Published:
Updated:

ಶಿವಮೊಗ್ಗ: ರಾಜ್ಯ ಸರ್ಕಾರ ಪಠ್ಯಪುಸ್ತಕ ಕೇಸರೀಕರಣಗೊಳಿಸುತ್ತಿದೆ ಎಂದು ಆರೋಪಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದವು.ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಐದು ಮತ್ತು ಎಂಟನೇ ತರಗತಿ ಪಠ್ಯಪುಸ್ತಕಗಳಲ್ಲಿ ರಾಜ್ಯ ಸರ್ಕಾರ ತಮ್ಮ ಕೋಮುವಾದಿ ಮತ್ತು ಹಿಂದುತ್ವವಾದಿ ಅಜೆಂಡವನ್ನು ಎಳೆಯ ಮಕ್ಕಳ ಮನಸ್ಸಿನಲ್ಲಿ ಬೆರೆಸಲು ಮುಂದಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗಳ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ಬ್ರಾಹ್ಮಣ್ಯವನ್ನು ವೈಭವೀಕರಿಸುತ್ತಾ ದುಡಿವ ಸಂಸ್ಕತಿಯನ್ನು ಕಡೆಗಣಿಸಲಾಗಿದೆ. ವೈಜ್ಞಾನಿಕ, ವೈಜ್ಞಾನಿಕ ವಿಚಾರಗಳ ಬದಲಾಗಿ ಜಾತಿ ಬೇಧ-ಪಂಕ್ತಿಬೇಧವನ್ನು ಈಗಲೂ ಅನುಸರಿಸುತ್ತಿರುವ ಕೆಲಮಠಗಳನ್ನು ದಾರಿದೀಪಗಳೆಂದು ಬಣ್ಣಿಸಲಾಗಿದೆ. ರಾಜ್ಯದಲ್ಲಿ ಸ್ವಾತಂತ್ರ್ಯ ಹೋರಾಟ ಸ್ಥಳಗಳು, ಪ್ರಭುತ್ವ ಮತ್ತು ವೈದಿಕತೆ ವಿರುದ್ಧ ನಡೆದ ವಚನ, ಶರಣ, ದಾಸಸಾಹಿತ್ಯ, ತಳಸಮುದಾಯದ ಹೋರಾಟಗಳನ್ನು ಕಡೆಗಣಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಸಕ್ತ ವರ್ಷದ ಪಠ್ಯಪುಸ್ತಕಗಳು ಹೊರೆಯಾಗುತ್ತಿವೆ, ಇವುಗಳನ್ನು ಸರಳೀಕರಿಸಿ ಎಂದು ನಿರ್ದೇಶನ ನೀಡಿದ್ದನ್ನು ಕಡೆಗಣಿಸಿ ಹೊರೆಯಾದ ಮತ್ತು ಅನಗತ್ಯ ವಿಷಯ ಪಠ್ಯಗಳ ರಚನೆಗೆ ಮುಂದಾಗಿದೆ ಎಂದು ಆರೋಪಿಸಿದರು.ಆರ್ಯರು ಭಾರತಕ್ಕೆ ವಲಸೆ ಬಂದವರು ಎಂಬುದನ್ನು ತಿರುಚಿ ಅವರು ಇಲ್ಲೇ ನೆಲೆಸಿದ್ದರು ಎಂದು ಹೇಳಲಾಗಿದೆ. ಅಲ್ಲದೇ ಆರ್ಯರು ಪೂಜ್ಯರು ಎಂಬುದನ್ನು ಪಠ್ಯದೆಲ್ಲೆಡೆ ವೈಭವೀಕರಿಸಿ ಅಮಾನವೀಯ ಜಾತಿ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುವಂತೆ ಸೂಚಿಸಲಾಗುತ್ತಿದೆ. ಇಂತಹ ಆನೇಕ ಅಪಾಯಕಾರಿ ಅಂಶಗಳನ್ನು ಸಂಸ್ಕೃತಿ, ಧರ್ಮ, ಆಚರಣೆ, ಸಾಮ್ರಾಜ್ಯ, ಆಡಳಿತ ಇನ್ನಿತರ ವಿಷಯಗಳ ಜತೆ ಈ ಪಠ್ಯಗಳಲ್ಲಿ ತುರುಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ಎಲ್ಲಾ ಕಾರಣಗಳಿಂದ ಪಠ್ಯಪುಸ್ತಕಗಳನ್ನು ತಕ್ಷಣ ರದ್ದುಗೊಳಿಸಿ ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಶಿಕ್ಷಣ ತಜ್ಞರು ಹಾಗೂ ವಿಚಾರವಂತರನ್ನೊಳಗೊಂಡ ಸಮಿತಿ ರಚಿಸಿ ಹೊಸ ಪಠ್ಯಕ್ರಮ ರೂಪಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಮೊಹಮ್ಮದ್ ಮುದಸ್ಸರ್, ಶಾಹಿದ್‌ಖಾನ್, ತಬ್ರೇಜ್ ಖಾನ್, ಇಮ್ತಿಯಾಜ್ ಅಹಮದ್, ಸಲೀಂಖಾನ್, ಅಬ್ದುಲ್ ಮುಜೀಜ್, ಅಪ್ಸರ್‌ಪಾಷ ಮತ್ತಿತರರು ನೇತೃತ್ವ ವಹಿಸಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry