ಶುಕ್ರವಾರ, ಫೆಬ್ರವರಿ 26, 2021
22 °C

ಪಠ್ಯಪುಸ್ತಕ ಮೂಟೆ ರದ್ದಿ ಅಂಗಡಿಗೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಠ್ಯಪುಸ್ತಕ ಮೂಟೆ ರದ್ದಿ ಅಂಗಡಿಗೆ!

ಕುಷ್ಟಗಿ:  ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಿತರಿಸಲು ಸರ್ಕಾರ ಸರಬರಾಜು ಮಾಡಿದ್ದ 8 ಮತ್ತು 10ನೇ ತರಗತಿಗೆ ಸೇರಿದ ಪಠ್ಯಪುಸ್ತಕಗಳ ಮೂಟೆಗಳು ಪಟ್ಟಣದ ರದ್ದಿ ಅಂಗಡಿಯಲ್ಲಿ ಬುಧವಾರ ಪತ್ತೆಯಾಗಿವೆ.2011ನೇ ವರ್ಷಕ್ಕೆ ಸೇರಿದ ಈ ಪಠ್ಯಪುಸ್ತಕಗಳ ಮೇಲೆ `ಕರ್ನಾಟಕ ಸರ್ಕಾರ, ಮಾರಾಟಕ್ಕಲ್ಲ~ ಎಂದು ಮುದ್ರಿಸಲಾಗಿದ್ದು, 8ನೇ ತರಗತಿಯ ವಿಜ್ಞಾನ, ಇಂಗ್ಲಿಷ್ ರೀಡರ್ ಮತ್ತು ಹಿಂದಿ ಪುಸ್ತಕಗಳಿದ್ದವು. 10ನೇ ತರಗತಿಯ ಗಣಿತ ಪುಸ್ತಕಗಳು ಇದ್ದವು. ಇವು ಸ್ಥಳೀಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಗೆ ಸೇರಿದವು ಎಂದು ಮೂಲಗಳು ತಿಳಿಸಿವೆ.ಐದಾರು ಗೋಣಿ ಚೀಲಗಳಲ್ಲಿದ್ದ ನೂರಾರು ಪುಸ್ತಕಗಳು ರದ್ದಿ ಅಂಗಡಿಯಲ್ಲಿರುವುದಾಗಿ ಸಾರ್ವಜನಿಕರು ಮಾಹಿತಿ ನೀಡಿದರು.ಸದರಿ ಪುಸ್ತಕಗಳ ಬಗ್ಗೆ ವಿಚಾರಿಸಿದಾಗ ಸ್ಥಳೀಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಆರ್.ಹುನುಗುಂದ ಎಂಬುವವರು ತಮಗೆ ಮಾರಾಟ ಮಾಡಿದ್ದಾರೆ ಎಂದು ಅಂಗಡಿಯ ಮಾಲೀಕರು ತಿಳಿಸಿದರು.8ನೇ ತರಗತಿಯ ಪಠ್ಯ ಬದಲಾವಣೆಯಾಗಿದ್ದರೆ 10ನೇ ತರಗತಿಯ ಗಣಿತ ಪಠ್ಯ ಬದಲಾಗಿಲ್ಲ. ಸದ್ಯ ಅದನ್ನೇ ಶಾಲೆಗಳಲ್ಲಿ ಬೋಧಿಸಲಾಗುತ್ತಿದೆ ಎಂಬುದು ತಿಳಿಯಿತು. ಬದಲಾಗಲಿ ಬಿಡಲಿ ಸರ್ಕಾರದ ಪಠ್ಯಗಳನ್ನು ಈ ರೀತಿ ರದ್ದಿ ಅಂಗಡಿಗೆ ಮಾರಾಟ ಮಾಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

ಮುಂದಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಯಾ ಶಾಲೆಯವರು ಪುಸ್ತಕಗಳ ಬೇಡಿಕೆ ಪಟ್ಟಿಯನ್ನು ಮುಂಚಿತವಾಗಿ ಸಲ್ಲಿಸಿರುತ್ತಾರೆ. ಅದರಂತೆ ಇಲಾಖೆ ಪುಸ್ತಕಗಳನ್ನು ಸರಬರಾಜು ಮಾಡುತ್ತದೆ. ನಿಯಮಗಳ ಪ್ರಕಾರ ಹಂಚಿಕೆಯಾಗದ ಪುಸ್ತಕಗಳನ್ನು ತಕ್ಷಣ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹಿಂತಿರುಗಿಸಬೇಕು. ಅಂದರೆ ಕೊರತೆಯಾದ ಶಾಲೆಗಳಿಗೆ ಆ ಪುಸ್ತಕಗಳನ್ನು ನೀಡಲು ಸಾಧ್ಯವಾಗುತ್ತದೆ ಎಂಬುದು ಇಲಾಖೆ ಉದ್ದೆೀಶ. ಹೀಗಿದ್ದೂ ಮೂಟೆಗಟ್ಟಲೇ ಪುಸ್ತಕಗಳು ರದ್ದಿ ಅಂಗಡಿ ಪಾಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಶಾಲೆಯ ಮುಖ್ಯಸ್ಥರು ಪಠ್ಯಪುಸ್ತಕ ಬೇಡಿಕೆ ಸಲ್ಲಿಸುವಾಗ ಅನಗತ್ಯವಾಗಿ ಹೆಚ್ಚಿನ ಬೇಡಿಕೆ ಸಲ್ಲಿಸುವುದೇ ಮೂಟೆಗಟ್ಟಲೆ ಪುಸ್ತಕಗಳು ಉಳಿಯಲು ಕಾರಣ.ಉಳಿಕೆ ಬಗ್ಗೆ ತಿಳಿಸಿದರೆ ಮೇಲಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಶಾಲೆಯವರು ಉಳಿಕೆ ಪುಸ್ತಕಗಳ ಬಗ್ಗೆ ಮಾಹಿತಿ ನೀಡುವ ಗೋಜಿಗೆ ಹೋಗುವುದಿಲ್ಲ ಎನ್ನಲಾಗಿದೆ. ಪುಸ್ತಕಗಳ ಬೇಡಿಕೆ ವಿಷಯದಲ್ಲಿ ಶಿಕ್ಷಕರು ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಅವರ ವಿರುದ್ಧ ಇಲಾಖೆ ಕ್ರಮ ಜರುಗಿಸಬೇಕಿದೆ ಎಂದು ಪರಶುರಾಮ ಪಾಟೀಲ, ಕೆ.ನಾಗರಾಜ    ಒತ್ತಾಯಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.