ಶನಿವಾರ, ಏಪ್ರಿಲ್ 17, 2021
30 °C

ಪಡಿತರದಲ್ಲಿ ಕಿರುಧಾನ್ಯ ವಿತರಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡಿತರದಲ್ಲಿ ಕಿರುಧಾನ್ಯ ವಿತರಿಸಲು ಆಗ್ರಹ

ಗುಲ್ಬರ್ಗ: ಹಸಿರುಕ್ರಾಂತಿಯ ತರುವಾಯ ಉತ್ಪಾದನೆ ಹೆಚ್ಚಳವಾದ ಧಾನ್ಯಗಳನ್ನು ಮಾತ್ರ ಪಡಿತರ ವ್ಯವಸ್ಥೆಯಲ್ಲಿ ವಿತರಿಸಲಾಗುತ್ತಿದೆ. ಇವುಗಳ ಜತೆಗೆ ಜೋಳ, ತೊಗರಿಬೇಳೆ ಇತರ ಕಿರುಧಾನ್ಯಗಳನ್ನು ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ ಆಗ್ರಹಿಸಿದರು.“ಪೌಷ್ಟಿಕಾಂಶಗಳಿಂದ ಸಂಪದ್ಭರಿತವಾದ ಕಿರುಧಾನ್ಯಗಳು ಆಹಾರ ಭದ್ರತೆ ಒದಗಿಸಬಲ್ಲವು. ಕೇವಲ ಅಕ್ಕಿ, ಗೋಧಿ ವಿತರಿಸುವುದನ್ನು ಬಿಟ್ಟು ಸಾಂಪ್ರದಾಯಿಕ ಧಾನ್ಯಗಳನ್ನೂ ಪಡಿತರ ವ್ಯವಸ್ಥೆಯಲ್ಲಿ ವಿತರಿಸಬೇಕು” ಎಂದು ಅವರು ಒತ್ತಾಯಿಸಿದರು.ಗುಲ್ಬರ್ಗ ದೂರದರ್ಶನ ಕೇಂದ್ರವು ಶುಕ್ರವಾರ ಇಲ್ಲಿ ಆಯೋಜಿಸಿದ್ದ ಕೃಷಿ ವಿಚಾರಸಂಕಿರಣ ಹಾಗೂ ಸಂವಾದವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಸಾಯನಿಕ ಬಳಸುವುದರಿಂದ ನೆಲದ ಫಲವತ್ತತೆ ಹಾಳಾಗುತ್ತದೆ ಎಂಬ ಬಗ್ಗೆ ಹಸಿರುಕ್ರಾಂತಿಯ ಪಿತಾಮಹ ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್ ಅವರೇ ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕೈಮೀರುವ ಮುನ್ನ ರೈತರು ಎಚ್ಚೆತ್ತುಕೊಂಡು ರಾಸಾಯನಿಕ ತ್ಯಜಿಸಬೇಕು ಎಂದು ಅವರು ಸಲಹೆ ಮಾಡಿದರು.ರೈತರು ಕೃಷಿಯನ್ನು ದೂರ ಮಾಡುತ್ತಿರುವುದಕ್ಕೆ ಇಂದಿನ ಶಿಕ್ಷಣ ಪದ್ಧತಿಯೇ ಕಾರಣ. ನೌಕರಿ ಪಡೆಯುವುದೇ ಶಿಕ್ಷಣದ ಉದ್ದೇಶ ಎಂಬಂತಾಗಿದೆ. ಕೃಷಿ ಬಗ್ಗೆ ಯುವಪೀಳಿಗೆಯಲ್ಲಿ ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದು ಇಂಗಿನ ಅಭಿಪ್ರಾಯಪಟ್ಟರು.ಕೃಷಿ ಮಾರುಕಟ್ಟೆಯಲ್ಲಿ ಮಾಹಿತಿ ಮತ್ತು ತಂತ್ರಜ್ಞಾನದ ಉಪಯೋಗದ ಬಗ್ಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಪ್ರಧಾನ ವ್ಯವಸ್ಥಾಪಕ ಎಸ್.ಎಸ್.ಶಂಕರಮೂರ್ತಿ ಹಾಗೂ ತೊಗರಿಯಲ್ಲಿ ವಿದ್ಯುನ್ಮಾನ ವ್ಯಾಪಾರದ ಕುರಿತು ಎನ್‌ಸಿಡಿಎಕ್ಸ್‌ನ ಉಪಾಧ್ಯಕ್ಷ ರಮೇಶಚಂದ ಮಾಹಿತಿ ನೀಡಿದರು.ದೂರದರ್ಶನ ಕೇಂದ್ರದ ಸಹಾಯಕ ನಿರ್ದೇಶಕ ಎಂ.ಬಿ.ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ಅಧಿಕಾರಿ ಮೋಹನಕುಮಾರ ಸ್ವಾಗತಿಸಿದರು. ಜಿಲ್ಲೆಯ ವಿವಿಧೆಡೆಯಿಂದ ರೈತರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನಂತರ ಸಂವಾದ ನಡೆಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.