ರಾಯಚೂರು: ಜನಸಾಮಾನ್ಯರಿಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡುವ ನ್ಯಾಯಬೆಲೆ ಅಂಗಡಿಯವರನ್ನು ಪ್ರಕರಣ ದಾಖಲಿಸಿ ಜೈಲಿಗೆ ಅಟ್ಟುವ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದರು.ತಾಲ್ಲೂಕಿನ ಉಪ್ರಾಳ, ಜಾಗೀರ ವೆಂಕಟಾಪೂರ ಮತ್ತು ಲಿಂಗಸುಗೂರು ತಾಲ್ಲೂಕಿನ ಕಾಳಾಪೂರ ಗ್ರಾಮಗಳಲ್ಲಿ ನೆರೆ ಸಂತ್ರಸ್ತರ ಪುನರ್ವಸತಿಗಾಗಿ ನಿರ್ಮಿಸಿದ 303 ಮನೆಗಳ ಹಸ್ತಾಂತರ ಕಾರ್ಯಕ್ರಮವನ್ನು ಉಪ್ರಾಳ ಗ್ರಾಮದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಜನತೆಗೆ ಅನ್ಯಾಯವಾಗಬಾರದು. ನ್ಯಾಯಬೆಲೆ ಅಂಗಡಿಯವರ ವಿರುದ್ಧ ಒಂದು ದೂರು ಬಂದರೂ ಗಂಭೀರವಾಗಿ ಪರಿಗಣಿಸಿ ಲೈಸನ್ಸ್ ರದ್ದುಪಡಿಸಲಾಗುವುದು. ಈ ದಿಶೆಯಲ್ಲಿ ನಿಷ್ಠುರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.ಇನ್ನು ಮುಂದೆ ನ್ಯಾಯಬೆಲೆ ಅಂಗಡಿಯವರೇ ಆಹಾರ ಇಲಾಖೆ ಗೋದಾಮಿಗೆ ತೆರಳಿ ಅಲ್ಲಿಂದ ಪಡಿತರ ಎತ್ತುವಳಿ ಮಾಡಿಕೊಂಡು ಬರಬೇಕು. ಸರ್ಕಾರದಿಂದ ಈ ಪಡಿತರ ಸಾಗಾಟಕ್ಕೆ ವಾಹನ ವ್ಯವಸ್ಥೆ ಮಾಡುವುದಿಲ್ಲ. ಇದೆಲ್ಲ ಖರ್ಚುವೆಚ್ಚ ಆತನದ್ದೇ. ಸಾರಿಗೆ ಹೆಸರಿನಲ್ಲಿ ದುಡ್ಡು ಹೊಡೆಯುವ, ರಾತ್ರೋ ರಾತ್ರಿ ಲಾರಿಗಳು ಹಳ್ಳಿಗೆ ಬಂದು ಸಿಕ್ಕಷ್ಟು ಪಡಿತರ ಚೀಲ ಇಳಿಸಿ ಮಾಯವಾಗುವಂಥ ಅಕ್ರಮ ಚಟುವಟಿಕೆಗೆ ಕಡಿವಾಣ ಬೀಳುತ್ತದೆ. ಸರ್ಕಾರದ ದುಡ್ಡು ಲೂಟಿ ಹೊಡೆಯುವವರ ಹುನ್ನಾರ ತಪ್ಪುತ್ತದೆ ಎಂದು ತಿಳಿಸಿದರು.
ರೈತರಿಗಾಗಿ ಸರ್ಕಾರ ನೀಡುವ ಸಬ್ಸಿಡಿ ಸಾಲ ಯೋಜನೆಯ ಮೊತ್ತವನ್ನು ಇನ್ನು ಮುಂದೆ ನೇರವಾಗಿ ರೈತನಿಗೆ ವಿತರಿಸಲಾಗುವುದು. ಅಧಿಕಾರಿಗಳ ಮೂಲಕ ಹಂಚಿಕೆ ಮಾಡುವ ಈ ಮೊದಲಿನ ವ್ಯವಸ್ಥೆ ತೆಗೆದು ಹಾಕಲಾಗುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗುವುದು. ನೇರವಾಗಿ ರೈತರ ಖಾತೆಗೆ ಹಣ ಜಮಾ ಆದರೆ ಆತ ತನಗಿಷ್ಟವಾದ ಕೃಷಿ ಉಪಕರಣ, ತೋಟಗಾರಿಕೆ ಉಪಕರಣ ಹೀಗೆ ಏನೆಲ್ಲ ಖರೀದಿ ಮಾಡಿ ಏಳ್ಗೆ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕೃಷಿ ಬಜೆಟ್ ಎಂಬುದು ನನ್ನ ಹೊಸ ಚಿಂತನೆ. ಶೇ. 1ರ ಬಡ್ಡಿ ದರದಲ್ಲಿ ಸಾಲಸೌಲಭ್ಯ ಕಲ್ಪಿಸುವುದು, ರೈತರಿಗೆ ಕಿರುಕುಳ ಇಲ್ಲದೇ ಸಾಲ ಒದಗಿಸುವ ಮೂಲಕ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳಲು ಅಗತ್ಯ ನೆರವು ನೀಡಲಾಗುವುದು ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.