ಪಡಿತರ ಅವ್ಯವಹಾರ ತಡೆಗೆ ಇ-ಆಡಳಿತದ ಮೊರೆ!

7

ಪಡಿತರ ಅವ್ಯವಹಾರ ತಡೆಗೆ ಇ-ಆಡಳಿತದ ಮೊರೆ!

Published:
Updated:
ಪಡಿತರ ಅವ್ಯವಹಾರ ತಡೆಗೆ ಇ-ಆಡಳಿತದ ಮೊರೆ!

ಬೆಂಗಳೂರು: ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಸೇರಬೇಕಾದ ಅಗತ್ಯ ವಸ್ತುಗಳು ಅನರ್ಹರ ಪಾಲಾಗುವುದನ್ನು ತಪ್ಪಿಸಲು ಮುಂದಡಿ ಇಟ್ಟಿರುವ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬಯೊ ಮೆಟ್ರಿಕ್ ಆಧಾರಿತ ಪಡಿತರ ವಿತರಣಾ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಸಲುವಾಗಿ ಗ್ರಾಹಕರ ಬಯೊ ಮೆಟ್ರಿಕ್ ದಾಖಲೆ ಆಧರಿಸಿ ಕೆಲಸ ಮಾಡುವ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಅಳವಡಿಸಲಿದೆ.ನ್ಯಾಯಬೆಲೆ ಅಂಗಡಿಗಳಿಗೆ ಬರುವ ವಿವಿಧ ಪಡಿತರ ಸಾಮಗ್ರಿಗಳ ಪ್ರಮಾಣ, ಪಡಿತರ ಚೀಟಿ ಹೊಂದಿರುವ ಗ್ರಾಹಕ ಆ ಅಂಗಡಿಯಿಂದ ಖರೀದಿಸುವ ವಸ್ತುಗಳ ಪ್ರಮಾಣ ಎಷ್ಟು ಎಂಬ ವಿವರ ಏಕೀಕೃತ ಸರ್ವರ್‌ನಲ್ಲಿ ದಾಖಲಾಗುವ ವ್ಯವಸ್ಥೆಯನ್ನೂ ಇಲಾಖೆ ರೂಪಿಸಿದೆ.ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಸೇರಬೇಕಾದ ಅಗತ್ಯ ವಸ್ತುಗಳು ಅಕ್ರಮವಾಗಿ ಬೇರೆಯವರ ಪಾಲಾಗುವುದನ್ನು ತಪ್ಪಿಸಲು ಇಲಾಖೆ ಕಾಲಕಾಲಕ್ಕೆ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಆದರೆ, ಪಡಿತರ ಸಾಮಗ್ರಿ ಅನರ್ಹರ ಪಾಲಾಗುವುದು ಸಂಪೂರ್ಣವಾಗಿ ನಿಂತಿಲ್ಲ ಎಂಬುದನ್ನು ಇಲಾಖೆಯ ಅಧಿಕಾರಿಗಳೂ ಒಪ್ಪುತ್ತಾರೆ. ಎಲೆಕ್ಟ್ರಾನಿಕ್ ಯಂತ್ರ ಹಾಗೂ ಇ-ಆಡಳಿತದ ನೆರವು ಪಡೆದು ನ್ಯಾಯಬೆಲೆ ಅಂಗಡಿಗಳ ಮೇಲೆ ನಿಗಾ ಇಟ್ಟು, ಅವ್ಯವಹಾರಕ್ಕೆ ಅಂಕುಶ ಹಾಕಲು ಇಲಾಖೆ ಸಿದ್ಧತೆ ನಡೆಸಿದೆ.ಏನಿದು ವ್ಯವಸ್ಥೆ?: ರಾಜ್ಯದಲ್ಲಿ ಇರುವ ನ್ಯಾಯಬೆಲೆ ಅಂಗಡಿಗಳ ಒಟ್ಟು ಸಂಖ್ಯೆ 20,450. ಇಷ್ಟು ದೊಡ್ಡ ಸಂಖ್ಯೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜಾಗುವ ಪಡಿತರ ಸಾಮಗ್ರಿ ವಿವರ, ಗ್ರಾಹಕರು ಅಲ್ಲಿಂದ ಖರೀದಿ ಮಾಡುವ ಅಗತ್ಯ ವಸ್ತುಗಳ ಪ್ರಮಾಣದ ವಿವರ, ಅಲ್ಲಿನ ರಸೀದಿಗಳು ಮತ್ತು ಇತರ ದಾಖಲೆಗಳನ್ನು ಇಲಾಖೆಯ ಆಹಾರ ಇನ್‌ಸ್ಪೆಕ್ಟರ್‌ಗಳು ಖುದ್ದಾಗಿ ಪರಿಶೀಲನೆ ನಡೆಸುವುದು ಇದುವರೆಗೆ ನಡೆದುಕೊಂಡು ಬಂದಿರುವ ವ್ಯವಸ್ಥೆ. ಅವ್ಯವಹಾರದಲ್ಲಿ ತೊಡಗಿರುವ ನ್ಯಾಯಬೆಲೆ ಅಂಗಡಿಯ ಮಾಲೀಕನ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಅಥವಾ ಬಿಡುವುದು ಇನ್‌ಸ್ಪೆಕ್ಟರ್‌ಗಳ ದಕ್ಷತೆಯನ್ನು ಅವಲಂಬಿಸಿರುತ್ತದೆ.ಆದರೆ, ಎಲೆಕ್ಟ್ರಾನಿಕ್ ತೂಕದ ಯಂತ್ರಗಳನ್ನು ಅಳವಡಿಸುವ ಮೂಲಕ, ಈ ಕಾರ್ಯವನ್ನು ಆನ್‌ಲೈನ್ ಮೂಲಕವೇ ನಡೆಸಲು ಸಾಧ್ಯ.ಈ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೆ ಬಂದ ನಂತರ ರಾಜ್ಯದ ಪ್ರತಿಯೊಂದು ನ್ಯಾಯಬೆಲೆ ಅಂಗಡಿಯ ವ್ಯವಹಾರವನ್ನೂ ಇಲಾಖೆ ಕಚೇರಿಯಿಂದಲೇ ಗಮನಿಸಬಹುದು.ರಿಯಾಯಿತಿ ದರದಲ್ಲಿ ನೀಡಲಾಗುವ ಪಡಿತರ ಸಾಮಗ್ರಿ ವಿತರಣೆಯಲ್ಲಿ ಅವ್ಯವಹಾರಕ್ಕೆ ಆಸ್ಪದ ಇಲ್ಲದಂತೆ ನಿಗಾ ವಹಿಸಬಹುದು ಎಂದು ಇಲಾಖೆಯ ಕಾರ್ಯದರ್ಶಿ ಬಿ.ಎ. ಹರೀಶ್ ಗೌಡ `ಪ್ರಜಾವಾಣಿ~ ಗೆ ತಿಳಿಸಿದರು.`ಈ ವ್ಯವಸ್ಥೆಯಡಿ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಏನೇ ಖರೀದಿ ಮಾಡಿದರೂ, ಅದಕ್ಕೆ ಸಂಬಂಧಿಸಿದಂತೆ ಕಂಪ್ಯೂಟರೀಕೃತ ರಸೀದಿಯನ್ನೇ ನೀಡಬೇಕು. ಪಡಿತರ ಚೀಟಿ ಇರುವ ಗ್ರಾಹಕರು ಅಗತ್ಯ ವಸ್ತುಗಳನ್ನು ಖರೀದಿಸಿದ ನಂತರ ತಮ್ಮ ಎಡಗೈ ಹೆಬ್ಬೆರಳನ್ನು ಎಲೆಕ್ಟ್ರಾನಿಕ್ ಯಂತ್ರದಲ್ಲಿರುವ ಬೆರಳಚ್ಚು ಗುರುತಿಸುವ ಸಾಧನದ ಮೇಲಿಡಬೇಕು. ಆಗ, ಆ ವ್ಯಕ್ತಿಯ ಖಾತೆ ತೆರೆದುಕೊಳ್ಳುತ್ತದೆ. ಅವರು ಖರೀದಿಸಿರುವ ಪಡಿತರ ವಸ್ತುಗಳ ಬಿಲ್ಲಿಂಗ್ ಕಾರ್ಯವನ್ನು ಯಂತ್ರದ ಮೂಲಕವೇ ಮಾಡಲಾಗುತ್ತದೆ. ಯಾವುದಕ್ಕೆ ಎಷ್ಟು ಬೆಲೆ ಎಂಬ ಮಾಹಿತಿಯನ್ನು ಯಂತ್ರ ಗ್ರಾಹಕನಿಗೆ ತೋರಿಸುತ್ತದೆ, ಧ್ವನಿ ರೂಪದಲ್ಲೂ ಹೇಳುತ್ತದೆ~ ಎಂದು ಅವರು ತಿಳಿಸಿದರು.ಪ್ರತಿಯೊಬ್ಬ ಗ್ರಾಹಕ ಯಾವಾಗ, ಏನನ್ನು, ಎಷ್ಟು ಪ್ರಮಾಣದಲ್ಲಿ ಖರೀದಿ ಮಾಡಿದ್ದಾನೆ ಎಂಬುದು ಏಕೀಕೃತ ಸರ್ವರ್‌ನಲ್ಲಿ ದಾಖಲಾಗುತ್ತದೆ. ಹಾಗೆಯೇ, ಮಾರಾಟದ ನಂತರ ನ್ಯಾಯಬೆಲೆ ಅಂಗಡಿಯಲ್ಲಿ ಉಳಿದಿರುವ ಸರಕು ಎಷ್ಟು ಎಂಬುದನ್ನೂ ಸರ್ವರ್ ದಾಖಲಿಸುತ್ತದೆ. ಈ ಎಲ್ಲ ಮಾಹಿತಿಯನ್ನು ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದು. ಇಂಥ ವ್ಯವಸ್ಥೆ ಜಾರಿಗೆ ಬರುತ್ತಿರುವುದು ದೇಶದಲ್ಲೇ ಮೊದಲು ಎಂದು ಹರೀಶ್ ಗೌಡ ವಿವರಿಸಿದರು.ಉದಾಹರಣೆಗೆ, ನ್ಯಾಯಬೆಲೆ ಅಂಗಡಿಯೊಂದಕ್ಕೆ ಹತ್ತು ಕ್ವಿಂಟಲ್ ಅಕ್ಕಿ ಪೂರೈಕೆಯಾಗುತ್ತದೆ. ಅಂಗಡಿಯ ಮಾಲೀಕ ಅಷ್ಟೂ ಅಕ್ಕಿಯನ್ನು ಪಡಿತರ ಚೀಟಿ ಹೊಂದಿದವರಿಗೇ ಮಾರಾಟ ಮಾಡಬೇಕು. ಪಡಿತರ ಚೀಟಿ ಇಲ್ಲದವರಿಗೆ ಕೇವಲ ಹತ್ತು ಕೆ.ಜಿ. ನೀಡಿದರೂ ಸಿಕ್ಕಿಬೀಳುತ್ತಾನೆ. ಪಡಿತರ ಚೀಟಿ ಇಲ್ಲದವರಿಗೆ ಈ ಅಕ್ಕಿ ಮಾರಾಟ ಮಾಡಲು ಯತ್ನಿಸಿದರೆ, ಎಲೆಕ್ಟ್ರಾನಿಕ್ ಯಂತ್ರದ ಮೂಲಕ ರಸೀದಿ ನೀಡಲು ಆಗುವುದಿಲ್ಲ.ಕೈಬರಹದ ರಸೀದಿ ನೀಡಿದರೆ, ಹತ್ತು ಕೆ.ಜಿ. ಅಕ್ಕಿ ಎಲ್ಲಿಗೆ ಹೋಯಿತು ಎಂಬ ಲೆಕ್ಕ ತಾಳೆಯಾಗುವುದಿಲ್ಲ. ಅಕ್ರಮ ಎಸಗಿದವರು ಸಿಕ್ಕಿಬೀಳುವುದೇ ಅಲ್ಲಿ ಎಂದು ಹೇಳಿದರು.ಬೆಂಗಳೂರಿನ ಮೂರು ನ್ಯಾಯಬೆಲೆ ಅಂಗಡಿಗಳಲ್ಲಿ ಈ ಯಂತ್ರಗಳ ಪ್ರಾಯೋಗಿಕ ಬಳಕೆ ಈಗಾಗಲೇ ಆರಂಭವಾಗಿದೆ. ಇದನ್ನು ಮುಂದಿನ ದಿನಗಳಲ್ಲಿ ಒಂದು ಸಾವಿರ ನ್ಯಾಯಬೆಲೆ ಅಂಗಡಿಗಳಿಗೆ ವಿಸ್ತರಿಸಲಾಗುವುದು.ಆದರೆ, ಪಡಿತರ ಚೀಟಿಗಳ ವಿತರಣೆ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯೊಂದು ಸಂಗ್ರಹಿಸಿರುವ ಬಯೋಮೆಟ್ರಿಕ್ ಮಾಹಿತಿ ಕ್ರಮಬದ್ಧವಾಗಿ ಇಲ್ಲ. ಅದನ್ನು ಸರಿಪಡಿಸುವ ಕಾರ್ಯ ಇಲಾಖೆಯಲ್ಲಿ ನಡೆದಿದೆ.ಈ ಕಾರ್ಯ ಪೂರ್ಣಗೊಂಡ ತಕ್ಷಣ ಎಲೆಕ್ಟ್ರಾನಿಕ್ ಯಂತ್ರಗಳನ್ನು ಅಳವಡಿಸಲಾಗುವುದು. ಹಂತ ಹಂತವಾಗಿ ಇದನ್ನು ಎಲ್ಲ ನ್ಯಾಯಬೆಲೆ ಅಂಗಡಿಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.ತಾಲ್ಲೂಕು ಮಟ್ಟದ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಸಂಗ್ರಹ ಎಷ್ಟಿದೆ, ಯಾವ ದಿನ ಅಲ್ಲಿಂದ ಎಷ್ಟು ಆಹಾರ ಧಾನ್ಯವನ್ನು ಯಾವ ಅಂಗಡಿಗೆ ಕೊಂಡೊಯ್ಯಲಾಗಿದೆ ಎಂಬುದನ್ನು ಇದೇ ತಂತ್ರಜ್ಞಾನ ಆಧರಿಸಿ ಪರಿಶೀಲಿಸಬಹುದು. ಈ ಸೌಲಭ್ಯ ಈಗಾಗಲೇ ಬಳಕೆಯಲ್ಲಿದೆ. ಇದನ್ನೇ ನ್ಯಾಯಬೆಲೆ ಅಂಗಡಿಗಳಿಗೂ ವಿಸ್ತರಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry