ಸೋಮವಾರ, ಜನವರಿ 27, 2020
26 °C

ಪಡಿತರ ಆನ್‌ಲೈನ್: ಗಡಿ ಭಾಗದಲ್ಲಿ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡುಬಿದ್ರಿ: ಹೊಸ ಪಡಿತರ ಚೀಟಿ ನೀಡುವ ವ್ಯವಸ್ಥೆಯನ್ನು ಸಂಪೂರ್ಣ ಗಣಕೀಕರಣ ಮಾಡಲು ಸರ್ಕಾರ ಮುಂದಾಗಿರುವುದು ಜಿಲ್ಲೆಯ ಗಡಿಭಾಗದ ಜನತೆಯ ಗೊಂದಲಕ್ಕೆ ಕಾರಣವಾಗಿದೆ. ಅಡುಗೆ ಅನಿಲ ಸಂಪರ್ಕ ವಿರುವ ಗಡಿ ಪ್ರದೇಶದ ಜನತೆ ಈ ಆನ್‌ಲೈನ್ ವ್ಯವಸ್ಥೆಯಿಂದಾಗಿ ಅನೇಕ ತೊಂದರೆ ಅನುಭವಿಸುವಂತಾಗಿದೆ.ಗ್ರಾಮೀಣ ಪ್ರದೇಶಗಳಲ್ಲಿ ಗ್ರಾ.ಪಂ ಕಚೇರಿಗಳ ಪಡಿತರ ಚೀಟಿಗಳ ಗಣಕೀಕರಣ ಕಾರ್ಯವನ್ನು ಸರ್ಕಾರ  ಆರಂಭಿಸಿತ್ತು. ಹೊಸದಾಗಿ ಪಡಿತರ ಚೀಟಿ ಪಡೆಯುವವರಿಗೆ ಗಣಕೀಕೃತ ಪಡಿತರ ಚೀಟಿ ನೀಡಲು, ಹಳೆ (ಪುಸ್ತಕ ಮಾದರಿ) ಪಡಿತರ ಚೀಟಿಯನ್ನು ಗಣಕೀಕೃತ ಪಡಿತರ ಚೀಟಿಯನ್ನಾಗಿ ಮಾರ್ಪಡಿಸಲು ಹಾಗೂ ಅವಿಭಕ್ತ ಕುಟುಂಬಗಳ ಸದಸ್ಯರು ಪ್ರತ್ಯೇಕ ಮನೆ ಮಾಡಿದ್ದಲ್ಲಿ, ಮೂಲ ಪಡಿತರ ಚೀಟಿಯಿಂದ ಅವರ ಹೆಸರು ಪ್ರತ್ಯೇಕ ಪಡಿಸಿ ಹೊಸ ಕಾರ್ಡ್ ನೀಡಲು  ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಾಗಿದೆ. ನವಂಬರ್‌ನಿಂದಲೇ ಈ ಗಣಕೀಕರಣ ಪ್ರಕ್ರಿಯೆ ಉಡುಪಿ ಜಿಲ್ಲೆಯಲ್ಲಿ ಆರಂಭಗೊಂಡಿದೆ. ಆದರೆ, ಕೆಲವೊಂದು ತಾಂತ್ರಿಕ ಸಮಸ್ಯೆ ಗಣಕೀಕರಣ ಪ್ರಕ್ರಿಯೆಗೆ ತೊಡಕಾಗಿ ಪರಿಣಮಿಸಿದ್ದು, ಯೋಜನೆ ಜಾರಿಗೊಳಿಸಲು ಇನ್ನೂ ಸಾಧ್ಯವಾಗುತ್ತಿಲ್ಲ.ಗಣಕೀಕೃತ ಪಡಿತರ ಚೀಟಿ ನೀಡಲು ಗ್ರಾಪಂಗಳಲ್ಲಿ ಪ್ರತ್ಯೇಕ `ಪಂಚತಂತ್ರ~ ತಂತ್ರಾಂಶವನ್ನು ಬಳಸಿಕೊಳ್ಳಲಾಗುತ್ತಿದೆ. ಪಡಿತರ ಚೀಟಿದಾರರ ವಿವರವನ್ನು ಕಂಪ್ಯೂಟರ್‌ಗೆ ಫೀಡ್ ಮಾಡುವ ಸಂದರ್ಭ  ಕುಟುಂಬದ ಅಡುಗೆ ಅನಿಲ ಸಂಪರ್ಕಕ್ಕೆ ವಿದ್ಯುತ್ ಸಂಪರ್ಕದ ಆರ್.ಆರ್. ನಂಬ್ರ ನಮೂದಿಸಬೇಕು.ಉಡುಪಿ ಜಿಲ್ಲಾ ಗಡಿಭಾಗದ ಹೆಜಮಾಡಿ, ಪಡುಬಿದ್ರಿ ಸಹಿತ ಕೆಲವೊಂದು ಗ್ರಾಮಗಳಲ್ಲಿ ಅಡುಗೆ ಅನಿಲ ವಿತರಕರು ಇಲ್ಲದ ಕಾರಣ ಹೆಚ್ಚಿನ ಕುಟುಂಬಗಳು ದ.ಕ.ಜಿಲ್ಲೆಯ ಮಂಗಳೂರು ತಾಲ್ಲೂಕಿನ ಮೂಲ್ಕಿ ಅಥವಾ ಸುರತ್ಕಲ್‌ನ ಅಡುಗೆ ಅನಿಲ ಸಂಪರ್ಕ ಹೊಂದಿದ್ದಾರೆ. ಸುರತ್ಕಲ್‌ನ ಎಚ್.ಪಿ (ಹಿಂದೂಸ್ತಾನ ಪೆಟ್ರೋಲಿಯಂ) ಹಾಗೂ ಮೂಲ್ಕಿಯ ಇಂಡೇನ್ ಗ್ಯಾಸ್ ಏಜೆನ್ಸಿಗಳು ಉಡುಪಿ ಜಿಲ್ಲಾ ಗಡಿಭಾಗದಲ್ಲಿ  500ಕ್ಕೂ ಅಧಿಕ ಸಂಪರ್ಕ ಹೊಂದಿವೆ.

 

ಪಡಿತರ ಚೀಟಿಗಾಗಿ ಸ್ಥಳೀಯಾಡಳಿತವು ಗಣಕಯಂತ್ರದಲ್ಲಿ ಈ ಬಗ್ಗೆ ಮಾಹಿತಿ ನೀಡುವಾಗ ಉಡುಪಿ ಜಿಲ್ಲೆಯನ್ನು ಹೊರತು ಪಡಿಸಿದ ಗ್ಯಾಸ್ ಏಜೆನ್ಸಿಗಳ ಹೆಸರು ನಮೂದಾಗುತ್ತಿಲ್ಲ.  ಹಾಗಾಗಿ ಪಡಿತರ ಚೀಟಿ ಅರ್ಜಿ ಮುಂದುವರಿಸಲು ಅಸಾಧ್ಯವಾಗಿದ್ದು, ಬಳಕೆದಾರರು ಗೊಂದಲಕ್ಕೀಡಾಗಿದ್ದಾರೆ. ಹೆಜಮಾಡಿ, ಪಡುಬಿದ್ರಿ ಗ್ರಾ.ಪಂ.ಗಳಲ್ಲಿ ಈಗಾಗಲೇ ನೂತನ ಪಡಿತರ ಚೀಟಿಗಾಗಿ ತಲಾ 90 ರಷ್ಟು ಅರ್ಜಿಗಳನ್ನು ಕಂಪ್ಯೂಟರ್ ಪಡೆದುಕೊಂಡಿದೆ. ಆದರೆ ದ.ಕ.ಜಿಲ್ಲೆಯಿಂದ  ಗ್ಯಾಸ್  ಸಂಪರ್ಕ ಹೊಂದಿದ ಕುಟುಂಬಗಳ ಅರ್ಜಿಯನ್ನು ಕಂಪ್ಯೂಟರ್ ತಿರಸ್ಕರಿಸುತ್ತಿದೆ.ದ್ವೀಪ ವಾಸಿಗಳ ಅಳಲು: ಹೆಜಮಾಡಿ ಗ್ರಾಮದ ಕೊಕ್ರಾಣಿ ದ್ವೀಪ ವಾಸಿಗಳದ್ದು ಬೇರೆಯೇ ಸಮಸ್ಯೆ. ಉಡುಪಿ ಜಿಲ್ಲೆಯಿಂದ ಕೊಕ್ರಾಣಿ ದ್ವೀಪದ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ಇದರಿಂದ ಅಲ್ಲಿನವರು ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದಾಗ ದ.ಕ ಜಿಲ್ಲೆಯ ಮೆಸ್ಕಾಂ ಆರ್‌ಆರ್ ನಂಬರ್ ದಾಖಲಿಸಬೇಕಾಗಿದೆ. ಇದನ್ನು ಕಂಪ್ಯೂಟರ್ ಅರ್ಜಿ ಸ್ವೀಕರಿಸುತ್ತಿಲ್ಲ. ಇದರಿಂದ ಜನರು ಅಸಹಾಯಕರಾಗಿ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಬಗ್ಗೆ ಸ್ಥಳೀಯಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.`ಈ ಸಮಸ್ಯೆಯನ್ನು ನಮ್ಮ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಎನ್‌ಐಸಿಗೆ ಮಾಹಿತಿ ನೀಡಲಾಗಿದೆ. ಶೀಘ್ರ ಸಮಸ್ಯೆ ಬಗೆಹರಿಯಲಿದ್ದು ಜನರು ಗಾಬರಿಗೊಳ್ಳುವ ಅಗತ್ಯವಿಲ್ಲ~ ಎಂದು ಉಡುಪಿ ಜಿಲ್ಲಾ ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕ ಅರುಣ್‌ಕುಮಾರ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)