ಸೋಮವಾರ, ಮೇ 23, 2022
30 °C

ಪಡಿತರ ಆಹಾರ ಧಾನ್ಯ ಪೂರೈಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರದ ನೀತಿ ನಿಯಮಗಳಂತೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಆಹಾರ ಧಾನ್ಯ ವಿತರಣೆ ಆಗುತ್ತಿಲ್ಲ. ಅಸಮರ್ಪಕ ಪೂರೈಕೆಯಿಂದ ಜನತೆ ಪರದಾಡುವಂತಾಗಿದೆ. ಕಾರಣ ನಿಯಮಾನುಸಾರ ಆಹಾರ ಧಾನ್ಯ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಜ್ಯೋತಿ ಮಹಿಳಾ ಒಕ್ಕೂಟದ ಕಾರ್ಯಕರ್ತೆಯರು ಸೋಮವಾರ ತಹಸೀಲ್ದಾರ ಜಿ. ಮುನಿರಾಜಪ್ಪ ಅವರಿಗೆ ಮನವಿ ಸಲ್ಲಿಸಿದರು.ಪಡಿತರ ಕಾರ್ಡ್ ವಿತರಣೆಯಲ್ಲಿ ಭಾರಿ ಪ್ರಮಾಣದ ಅನ್ಯಾಯಗಳು ನಡೆದಿವೆ. ಪಡಿತರ ಕಾರ್ಡ್ ಹೊಂದಿರುವ ಬಹುತೇಕ ಜನತೆಗೆ ಆಹಾರ ಧಾನ್ಯ ವಿತರಿಸದೆ ವಂಚನೆ ಮಾಡಲಾಗುತ್ತಿದೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಆಹಾರ ಧಾನ್ಯ ಮತ್ತು ಅದಕ್ಕೆ ಸಂಬಂಧಿಸಿದ ದರಪಟ್ಟಿ ಹಾಕುತ್ತಿಲ್ಲ. ಹೆಚ್ಚುವರಿ ದರಕ್ಕೆ ಪಡಿತರ ಆಹಾರ ಧಾನ್ಯ ಮತ್ತು ಸೀಮೆ ಎಣ್ಣೆ ಮಾರಾಟ ಮಾಡಿಕೊಳ್ಳುತ್ತಿದ್ದು ರಸೀದಿ ಕೇಳಿದರೆ ಪಡಿತರ ಖಾಲಿಯಾಗಿದೆ ಎಂದು ಪಡಿತರದಾರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ರದ್ದುಪಡಿಸಿ ಸಂಚಾರಿ ನ್ಯಾಯಬೆಲೆಗೆ ಜೋಡಣೆ ಮಾಡಿರುವುದರಿಂದ ಭಾರಿ ತೊಂದರೆಗಳನ್ನು ಎದುರಿಸುವಂತಾಗಿದೆ. ಸಂಚಾರಿ ನಾಯಬೆಲೆ ಅಂಗಡಿ ವ್ಯವಸ್ಥೆಗಳನ್ನು ರದ್ದುಪಡಿಸಿ ಸ್ಥಳೀಯವಾಗಿಯೆ ನ್ಯಾಯಬೆಲೆ ಅಂಗಡಿ ಮಂಜೂರ ಮಾಡಬೇಕು. ಪಡಿತರದಾರರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಜ್ಯೋತಿ ಮಹಿಳಾ ಒಕ್ಕೂಟದ ತಾಲ್ಲೂಕು ಅಧ್ಯಕ್ಷೆ ಹೂವಮ್ಮ. ಪದಾಧಿಕಾರಿಗಳಾದ ಶಶಿಕಲಾ, ಶರಣಬಸಮ್ಮ, ಶಂಕ್ರಮ್ಮ, ಶಿವಮ್ಮ, ಅಂಬಮ್ಮ, ಅಮೃತ, ಶಾಂತಪ್ಪ, ರಾಘವೇಂದ್ರ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.