ಪಡಿತರ: ಕೇಂದ್ರ-ರಾಜ್ಯ ತಕರಾರು

7

ಪಡಿತರ: ಕೇಂದ್ರ-ರಾಜ್ಯ ತಕರಾರು

Published:
Updated:

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ವ್ಯಾಪ್ತಿಯಲ್ಲಿ ರಿಯಾಯಿತಿ ದರದ ಪಡಿತರ ಪಡೆಯಲು ಅರ್ಹತೆ ಹೊಂದಿರುವ ಕುಟುಂಬಗಳ ಸಂಖ್ಯೆಗೆ ಸಂಬಂಧಿಸಿದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ ಶೋಭಾ ಕರಂದ್ಲಾಜೆ ಅವರು ಗುರುವಾರ ವಿಧಾನಸಭೆಗೆ ತಿಳಿಸಿದರು.ಪ್ರಶ್ನೋತ್ತರ ಕಲಾಪದ ವೇಳೆ ಜೆಡಿಎಸ್ ಸದಸ್ಯ ಕೆ.ಎಂ.ಶಿವಲಿಂಗೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, `ಕೇಂದ್ರ ಸರ್ಕಾರ 31.29 ಲಕ್ಷ ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಪಡಿತರ ಒದಗಿಸುತ್ತಿದೆ. ಆದರೆ, ರಾಜ್ಯದಲ್ಲಿ 84.07 ಲಕ್ಷ ಕುಟುಂಬಗಳು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು, ಕೇಂದ್ರ ಸರ್ಕಾರ ನಿಗದಿ ಮಾಡಿರುವುದಕ್ಕಿಂತ 52.78 ಲಕ್ಷ ಹೆಚ್ಚು ಕುಟುಂಬಗಳಿಗೆ ರಿಯಾಯಿತಿ ದರದಲ್ಲಿ ಪಡಿತರ ಒದಗಿಸಲಾಗುತ್ತಿದೆ. ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯದ ನಡುವೆ ವಿವಾದವಿದೆ~ ಎಂದರು.ಕೇಂದ್ರ ಸರ್ಕಾರ 31.29 ಲಕ್ಷ ಕುಟುಂಬಗಳಿಗೆ ತಿಂಗಳಿಗೆ ತಲಾ 35 ಕೆಜಿ ಆಹಾರ ಧಾನ್ಯ ಒದಗಿಸುತ್ತಿದೆ. ಆದರೆ, ರಾಜ್ಯದಲ್ಲಿ ಹೆಚ್ಚಿನ ಕುಟುಂಬಗಳಿಗೆ ಪಡಿತರ ಒದಗಿಸುತ್ತಿರುವುದರಿಂದ ಘಟಕ ವ್ಯವ್ಯಸ್ಥೆ ಜಾರಿ ಮಾಡಲಾಗಿದೆ. 2006ರಿಂದಲೇ ಈ ವ್ಯವಸ್ಥೆ ಜಾರಿಯಲ್ಲಿದೆ. ಘಟಕ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಆಗಲೇ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದೆ ಎಂದು ತಿಳಿಸಿದರು.ತೀವ್ರ ವಾಗ್ವಾದ: ಸಚಿವರು ಉತ್ತರ ನೀಡುತ್ತಿದ್ದಂತೆಯೇ ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಶಿವಲಿಂಗೇಗೌಡ, `ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಬಿಪಿಎಲ್ ಕುಟುಂಬಗಳಿಗೆ 35 ಕೆ.ಜಿ. ಆಹಾರ ಧಾನ್ಯವನ್ನು ಕಡ್ಡಾಯವಾಗಿ ನೀಡಬೇಕು. 31.29 ಲಕ್ಷ ಕುಟುಂಬಗಳಿಗೆ ಕೇಂದ್ರ ನೀಡಿದ ಪಡಿತರವನ್ನು ನೀವು 84 ಲಕ್ಷ ಕುಟುಂಬಗಳಿಗೆ ಹಂಚಿಕೆ ಮಾಡಲು ಅನುಮತಿ ಪಡೆದಿದ್ದೀರಾ? `ಯಾರದೋ ದುಡ್ಡಿನಲ್ಲಿ ಎಲ್ಲಮ್ಮನ ಜಾತ್ರೆ~ ಮಾಡಲು ಸರ್ಕಾರಕ್ಕೆ ಅಧಿಕಾರ ಕೊಟ್ಟವರು ಯಾರು~ ಎಂದು ಪ್ರಶ್ನಿಸಿದರು.ತಕ್ಷಣ ಪ್ರತಿಕ್ರಿಯಿಸಿದ ಶೋಭಾ ಅವರು, `ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ 35 ಕೆ.ಜಿ. ಆಹಾರ ಧಾನ್ಯ ಒದಗಿಸಲಾಗುತ್ತಿದೆ. ಆದರೆ, ಬಿಪಿಎಲ್ ಪಡಿತರ ಚೀಟಿಗಳ ಸಂಖ್ಯೆ ಹೆಚ್ಚಿರುವುದರಿಂದ ಘಟಕ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕೇಂದ್ರ ಸರ್ಕಾರ ನೀಡುವ ಆಹಾರ ಧಾನ್ಯವಷ್ಟೇ ಇದಕ್ಕೆ ಬಳಕೆ ಆಗುತ್ತಿಲ್ಲ. ರಾಜ್ಯ ಸರ್ಕಾರ ಹೆಚ್ಚಿನ ದರಕ್ಕೆ ಖರೀದಿಸಿ, ಪೂರೈಸುತ್ತಿದೆ. 2006ಲ್ಲಿ ಕೊಮ್ಯಾಟ್ ಎಂಬ ಸಂಸ್ಥೆಗೆ ಪಡಿತರ ಚೀಟಿ ವಿತರಣೆಯ ಗುತ್ತಿಗೆ ನೀಡಿದ್ದೇ ಸಮಸ್ಯೆಗೆ ಮೂಲ ಕಾರಣ~ ಎಂದರು.ಕಾಂಗ್ರೆಸ್‌ನ ವಿ.ಶ್ರೀನಿವಾಸ ಪ್ರಸಾದ್ ಮಾತನಾಡಿ, `ನಾನು ಕೇಂದ್ರದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ರಾಜ್ಯ ಸಚಿವನಾಗಿದ್ದ ಅವಧಿಯಲ್ಲೇ ಪ್ರೊ.ಲಖ್ಡಾವಾಲಾ ಸಮಿತಿಯಿಂದ ಬಿಪಿಎಲ್ ಕುಟುಂಬಗಳ ಸಮೀಕ್ಷೆ ನಡೆದಿತ್ತು. ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ 31.29 ಲಕ್ಷ ಕುಟುಂಬಗಳು ಮಾತ್ರ ಬಿಪಿಎಲ್ ಪಡಿತರ ಪಡೆಯಲು ಅರ್ಹರು ಎಂದು ಸಮಿತಿ ಶಿಫಾರಸು ಮಾಡಿತ್ತು. ಆದರೆ, ರಾಜ್ಯದಲ್ಲಿ ಅಧಿಕಾರ ನಡೆಸುವವರು ರಾಜಕೀಯ ಲಾಭಕ್ಕಾಗಿ ಬೇಕಾಬಿಟ್ಟಿ ಪಡಿತರ ಚೀಟಿಗಳನ್ನು ವಿತರಿಸಿದ ಪರಿಣಾಮ ಸಮಸ್ಯೆ ಗಂಭೀರವಾಗಿದೆ~ ಎಂದು ಹೇಳಿದರು. ಈ ವಿಷಯವಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ವಾಗ್ವಾದ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry