ಬುಧವಾರ, ಜೂಲೈ 8, 2020
28 °C

ಪಡಿತರ ಚೀಟಿಯೊಂದಿಗೆ ವಿದ್ಯುತ್ ಮೀಟರ್ ಸಂಖ್ಯೆ ಹೊಂದಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಕಲಿ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸಲು ಸುಮಾರು ರೂ150 ಕೋಟಿ ವೆಚ್ಚವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದಲೇ ಎಪಿಎಲ್ ಪಡಿತರ ಚೀಟಿಯೊಂದಿಗೆ ವಿದ್ಯುತ್ ಮೀಟರ್ ಸಂಖ್ಯೆಯನ್ನು ಹೊಂದಿಕೆ ಮಾಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.ಪಡಿತರ ಚೀಟಿಯ ಛಾಯಾ ಪ್ರತಿಯೊಂದಿಗೆ ಮನೆಯ ವಿದ್ಯುತ್ ಮೀಟರ್ ಸಂಖ್ಯೆ ಮತ್ತು ಬಿಲ್ ಅನ್ನು ಅಡುಗೆ ಅನಿಲ ಪೂರೈಸುವ ಏಜೆನ್ಸಿಗಳಿಗೆ ಇದೇ 29ರ ಒಳಗೆ ನೀಡಬೇಕು ಎಂದು ಸೂಚಿಸಲಾಗಿತ್ತು. ಕೊನೆಯ ದಿನಾಂಕವನ್ನು ಇನ್ನೂ 10 ದಿನ ವಿಸ್ತರಿಸಲಾಗುವುದು ಎಂದು ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.ರಾಜ್ಯದಲ್ಲಿ 1.25 ಕೋಟಿ ಕುಟುಂಬಗಳಿವೆ. ಆದರೆ ಈಗಾಗಲೇ 1.5 ಕೋಟಿ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಅಲ್ಲದೆ ಕಾರ್ಡ್ ಇಲ್ಲದವರ ಸಂಖ್ಯೆ ಸುಮಾರು 20 ಲಕ್ಷ ಇದೆ. 35ರಿಂದ 40 ಲಕ್ಷ ಕಾರ್ಡ್‌ಗಳು ಯಾರ ಬಳಿ ಇವೆ ಎಂಬುದು ಪ್ರಶ್ನಾರ್ಥಕವಾಗಿದೆ. ಇದನ್ನು ಪತ್ತೆ ಹಚ್ಚಬೇಕು ಎಂಬ ದೃಷ್ಟಿಯಿಂದಲೇ ಮೀಟರ್ ಸಂಖ್ಯೆಯನ್ನು ಸಂಗ್ರಹ ಮಾಡಲಾಗುತ್ತಿದೆ ಎಂದರು.ಪಡಿತರ ಚೀಟಿ ಇಲ್ಲದೆ ಇರುವ ಗ್ರಾಹಕರು ಅಡುಗೆ ಅನಿಲದ ಸಂಪರ್ಕ ಸಂಖ್ಯೆ ಮತ್ತು ವಿದ್ಯುತ್ ಮೀಟರ್‌ನ ಸಂಖ್ಯೆಯನ್ನು ನೀಡಬೇಕು. ಗ್ರಾಮೀಣ ಪ್ರದೇಶದಲ್ಲಿ ಪಂಚತಂತ್ರ ಸಾಫ್ಟ್‌ವೇರ್ ತಂತ್ರಜ್ಞಾನವನ್ನು ಬಳಸಿಕೊಂಡು ಆಸ್ತಿ ತೆರಿಗೆ ಪಾವತಿಸಿದ ಮನೆ ನಂಬರ್‌ನೊಂದಿಗೆ ಹಾಗೂ ನಗರ ಪ್ರದೇಶಗಳಲ್ಲಿ ವಿದ್ಯುತ್ ಮೀಟರ್ ಸಂಖ್ಯೆಯೊಂದಿಗೆ ಹೊಂದಿಕೆ ಮಾಡಲಾಗುವುದು ಎಂದು ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.