ಭಾನುವಾರ, ಜುಲೈ 25, 2021
21 °C

ಪಡಿತರ ಚೀಟಿ: ಕಾರ್ಯ ಆರಂಭಿಸದ ಗ್ರಾ ಪಂ

ನಾಗರಾಜ ಚಿನಗುಂಡಿ/ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಪಡಿತರ ಚೀಟಿ ನವೀಕರಣ ಹಾಗೂ ಹೊಸ ಅರ್ಜಿ ಪಡೆಯುವ ಕೆಲಸ ವಹಿಸಿಕೊಂಡಿರುವ ಗ್ರಾಮ ಪಂಚಾಯಿತಿಗಳು ಚುರುಕಾಗಿ ಕಾರ್ಯಾರಂಭ ಮಾಡದಿರುವುದರಿಂದ ಪಡಿತರ ಧಾನ್ಯವನ್ನು ನಂಬಿಕೊಂಡಿರುವ ಕಡುಬಡವರು ಕೂಲಿ ಕೆಲಸ ಬಿಟ್ಟು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ.ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗಳಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದ ಕೆಲಸಗಳು ಚುರುಕಾಗಿ ನಡೆಯದೇ ಇರುವುದರಿಂದ ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಕಚೇರಿಗೆ ಜನರು ಮುಗಿಬಿದ್ದು ದೂರು ನೀಡುತ್ತಿದ್ದಾರೆ. ಸ್ಥಳೀಯ ಸಂಸ್ಥೆಗಳೇ ಹೊಸ ಅರ್ಜಿದಾರರ ಸ್ಥಳ, ವಿಳಾಸ ಪರಿಶೀಲನೆ ಮಾಡಿ ತಾಲ್ಲೂಕುಗಳಲ್ಲಿರುವ ಆಹಾರ ನಿರೀಕ್ಷಕರಿಗೆ ಕಳುಹಿಸಬೇಕು. ಎಲ್ಲವೂ ಇಂಟರ್‌ನೆಟ್ ಮೂಲಕ ನಡೆಯುವ ಪ್ರಕ್ರಿಯೆ.ಬಡಜನತೆ ಜಿಲ್ಲಾ ಕೇಂದ್ರಕ್ಕೆ ಹೋದರೆ ತಮ್ಮ ಕೆಲಸ ಬೇಗವಾಗಿ ಆಗುತ್ತದೆ ಎಂಬ ಆಸೆಯಿಂದ ಗೊಂದಲದಲ್ಲಿರುವ ಬಡವರು ಅನಗತ್ಯ ಖರ್ಚು ಮಾಡಿ ಜಿಲ್ಲಾ ಕೇಂದ್ರಕ್ಕೆ ಧಾವಿಸಿ ಬರುತ್ತಿದ್ದಾರೆ. ಕಾರ್ಯಾರಂಭ ಮಾಡಿರುವ ಹಾಗೂ ಕಾರ್ಯಾರಂಭಿಸದ ಗ್ರಾಮ ಪಂಚಾಯಿತಿಗಳ ಬಗ್ಗೆ ತಾಲ್ಲೂಕು ತಹಸೀಲ್ದಾರರಿಂದ ವಿವರ ಪಡೆದಿರುವ ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ಈ ಬಗ್ಗೆ ಗುಲ್ಬರ್ಗ ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದಾರೆ.ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದ ಕೆಲಸ ಚುರುಕುಗೊಳಿಸಲು ಪಿಡಿಒಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸೂಚನೆ ನೀಡಬೇಕಿದೆ. ಸಿಇಒ ಅವರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಬೇಕಿದೆ. ಈ ಮಧ್ಯೆ ಸಮರ್ಪಕ ಮಾಹಿತಿ ಇಲ್ಲದೆ ಬಹುತೇಕ ಗ್ರಾಮಸ್ಥರು ಮಧ್ಯವರ್ತಿಗಳಿಗೆ ಹಣ ನೀಡಿ ಸಹಾಯ ಯಾಚಿಸುವ ಅಸಹಾಯಕತೆಯನ್ನು ಉನ್ನತ ಹುದ್ದೆಯಲ್ಲಿರುವ ಸರ್ಕಾರಿ ಅಧಿಕಾರಿಗಳು ತಪ್ಪಿಸುವ ಕೆಲಸ ಮಾಡುತ್ತಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.