ಪಡಿತರ ಚೀಟಿ: ತಿಂಗಳಲ್ಲಿ ಗಣಕೀಕರಣ

ಮಂಗಳವಾರ, ಜೂಲೈ 16, 2019
24 °C

ಪಡಿತರ ಚೀಟಿ: ತಿಂಗಳಲ್ಲಿ ಗಣಕೀಕರಣ

Published:
Updated:

ಬೆಂಗಳೂರು: `ರಾಜ್ಯದಲ್ಲಿ ಪಡಿತರ ಚೀಟಿ ಫಲಾನುಭವಿ ಕುಟುಂಬಗಳ ಮಾಹಿತಿ ಗಣಕೀಕರಣಗೊಳಿಸುವ ಕಾರ್ಯ ಇನ್ನು ಒಂದರಿಂದ ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಆನಂತರ ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿ ರದ್ದುಪಡಿಸಿದ ಕೂಡಲೇ ಹೊಸ ಪಡಿತರ ಚೀಟಿಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು~ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವೆ ಶೋಭಾ ಕರಂದ್ಲಾಜೆ ಸೋಮವಾರ ವಿಧಾನ ಪರಿಷತ್ತಿಗೆ ತಿಳಿಸಿದರು.ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, `ನಗರ ಪ್ರದೇಶಗಳಲ್ಲಿ ಪಡಿತರ ಚೀಟಿ ಗಣಕೀಕರಣಗೊಳಿಸುವ ಪ್ರಕ್ರಿಯೆ ಶೇ 98ರಿಂದ 99ರಷ್ಟು ಪೂರ್ಣಗೊಂಡಿದ್ದು, ಇನ್ನೊಂದು ವಾರದಲ್ಲಿ ನಿಖರವಾದ ಮಾಹಿತಿಯನ್ನು ಪ್ರಕಟಿಸಲಾಗುವುದು~ ಎಂದರು.`ನಗರ ಹಾಗೂ ಪಟ್ಟಣ ಪ್ರದೇಶಗಳ ಪಡಿತರ ಚೀಟಿಗಳನ್ನು ಫಲಾನುಭವಿಗಳು ವಾಸಿಸುವ ಮನೆ ಸಂಖ್ಯೆ, ಅನಿಲ ಸಂಪರ್ಕ, ವಿದ್ಯುತ್ ಮೀಟರ್ ಸಂಖ್ಯೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮನೆ ಸಂಖ್ಯೆ ಹಾಗೂ ಆಸ್ತಿ ತೆರಿಗೆ ಸಂಖ್ಯೆಗಳೊಂದಿಗೆ ಹೊಂದಾಣಿಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ `ಪಂಚತಂತ್ರ~ ನೆರವಿನೊಂದಿಗೆ ಗಣಕೀಕರಣಗೊಳಿಸಲಾಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಮಾಹಿತಿ ದಾಖಲಿಸುವ ಪ್ರಕ್ರಿಯೆ ಮುಗಿಯಲಿದೆ~ ಎಂದರು.1.75 ಕೋಟಿ ಪಡಿತರ ಚೀಟಿ ವಿತರಣೆ: ಎನ್‌ಐಸಿಯ ಪರಿಷ್ಕತ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 1,75,80,411 ಪಡಿತರ ಚೀಟಿಗಳನ್ನು ವಿತರಿಸಲಾಗಿದೆ. ಈ ಪೈಕಿ ಎಪಿಎಲ್ 70,92,608, ಬಿಪಿಎಲ್ 92,88,103 ಹಾಗೂ ಅಂತ್ಯೋದಯ 11,99,700 ಪಡಿತರ ಚೀಟಿಗಳು ಸೇರಿವೆ ಎಂದು ಸಚಿವೆ ಮಾಹಿತಿ ನೀಡಿದರು.`2011ರ ಜನಗಣತಿ ಪ್ರಕಾರ, ರಾಜ್ಯದಲ್ಲಿ 1.17 ಲಕ್ಷ ಕುಟುಂಬಗಳಿವೆ. ಆದರೆ, ಕೊಮ್ಯಾಟ್ ಸಂಸ್ಥೆ ಬಯೋ ಮೆಟ್ರಿಕ್ ಪದ್ಧತಿಯನ್ವಯ ಹೆಬ್ಬೆಟ್ಟಿನ ಗುರುತು ಪರಿಶೀಲಿಸದೆ ಅರ್ಜಿ ಹಾಕಿದವರಿಗೆಲ್ಲಾ ಪಡಿತರ ಚೀಟಿ ವಿತರಿಸಿದೆ. ಇದರಿಂದ ಅನೇಕ ಕುಟುಂಬಗಳು ಅಕ್ರಮವಾಗಿ ಪಡಿತರ ಚೀಟಿ ಪಡೆದುಕೊಂಡಿವೆ~ ಎಂದರು.`ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿನ    (ಬಿಪಿಎಲ್) ಕುಟುಂಬಗಳ ಸಂಖ್ಯೆ 32 ಲಕ್ಷ ಮೀರದಂತೆ ಕೇಂದ್ರ ಸರ್ಕಾರ ಗುರಿ ನಿಗದಿಪಡಿಸಿದೆ. ಆದರೆ, ಈ ಸಂಖ್ಯೆ ಪ್ರಸ್ತುತ 92,88,103ರಷ್ಟಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮಾಸಿಕ 80ರಿಂದ 100 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಹೊರೆ ಬೀಳುತ್ತಿದೆ~ ಎಂದರು.ಪಡಿತರ ಸಾಗಣೆ ವ್ಯವಸ್ಥೆಯಲ್ಲೂ ಸುಧಾರಣೆ: `ಪಡಿತರ ವಿತರಣೆಯಲ್ಲಿನ ಅಕ್ರಮಗಳನ್ನು ತಡೆಯಲು ಸಾಗಾಣಿಕೆ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ತರಲಾಗುತ್ತಿದೆ. ಆಹಾರ ನಿಗಮದ ಗೋದಾಮುಗಳನ್ನು ಕೂಡ ಕಂಪ್ಯೂಟರೀಕರಣಗೊಳಿಸಲಾಗುತ್ತಿದ್ದು, ಸಾಗಣೆ ಲಾಬಿಗೂ ಕಡಿವಾಣ ಹಾಕಲು ಪ್ರಯತ್ನಿಸಲಾಗುತ್ತಿದೆ~ ಎಂದರು.ಬಿಜೆಪಿ ಸದಸ್ಯೆ ಎಸ್.ಆರ್. ಲೀಲಾ ಮಾತನಾಡಿ, `ಪಡಿತರ ವ್ಯವಸ್ಥೆಯಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಅನರ್ಹರು  2-3 ಬಿಪಿಎಲ್ ಕಾರ್ಡ್‌ಗಳನ್ನು ಪಡೆದಿರುವುದರಿಂದ ಬಡವರಿಗೆ ಅನ್ಯಾಯವಾಗುತ್ತಿದೆ. ಇಂತಹ ಅವ್ಯವಸ್ಥೆಗೆ ಕಾರಣವಾದ ಖಾಸಗಿ ಕಂಪೆನಿಯ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು~ ಎಂದು ಒತ್ತಾಯಿಸಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವೆ ಶೋಭಾ ಕರಂದ್ಲಾಜೆ, `ಮೊದಲು ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಸಿಗಲಿ. ಆನಂತರ ತನಿಖೆ ನಡೆಸುವ ಕುರಿತು ಸರ್ಕಾರ ಚಿಂತಿಸಲಿದೆ~ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry