ಪಡಿತರ ಚೀಟಿ; ದಾವಣಗೆರೆಯಲ್ಲಿ ಸಾರ್ವಜನಿಕರ ಜೇಬಿಗೆ ಕತ್ತರಿ

7

ಪಡಿತರ ಚೀಟಿ; ದಾವಣಗೆರೆಯಲ್ಲಿ ಸಾರ್ವಜನಿಕರ ಜೇಬಿಗೆ ಕತ್ತರಿ

Published:
Updated:
ಪಡಿತರ ಚೀಟಿ; ದಾವಣಗೆರೆಯಲ್ಲಿ ಸಾರ್ವಜನಿಕರ ಜೇಬಿಗೆ ಕತ್ತರಿ

ದಾವಣಗೆರೆ: ಪಡಿತರ ಚೀಟಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ನೂತನ ವ್ಯವಸ್ಥೆ ಜಾರಿಗೊಳಿಸಿರುವ ರಾಜ್ಯ ಸರ್ಕಾರ, ಅಕ್ರಮ ಪಡಿತರ ಚೀಟಿಗಳಿಗೆ ಕತ್ತರಿ ಹಾಕುವ ಉದ್ದೇಶ ಹೊಂದಿದೆ. ಆದರೆ, ಜಿಲ್ಲೆಯಲ್ಲಿ ಈ ವ್ಯವಸ್ಥೆಯಿಂದ ಸಾರ್ವಜನಿಕರ ಜೇಬಿಗೆ `ಕತ್ತರಿ~ ಬೀಳುತ್ತಿದೆ! ಗ್ರಾಮ ಪಂಚಾಯ್ತಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಚೇರಿಗಳಲ್ಲಿ ಮೂಲಸೌಕರ್ಯಗಳು ಇಲ್ಲದಿರುವುದೇ ಇದಕ್ಕೆ ಕಾರಣ.ರಾಜ್ಯದಲ್ಲಿ ಕುಟುಂಬಗಳ ಸಂಖ್ಯೆಗಿಂತಲೂ ಹೆಚ್ಚಾಗಿ ಪಡಿತರ ಚೀಟಿ ವಿತರಿಸಲಾಗಿತ್ತು. ಈ `ಲೋಪ~ಗಳ ಪತ್ತೆಗಾಗಿಯೇ, ಒಂದು ವರ್ಷದಿಂದ ನೂತನವಾಗಿ ಪಡಿತರ ಚೀಟಿ ಕೊಟ್ಟಿರಲಿಲ್ಲ. ಈಗ ಅರ್ಜಿ ಸ್ವೀಕಾರ ಪುನರಾರಂಭ ಆಗಿದ್ದರಿಂದ ಆಕಾಂಕ್ಷಿಗಳು ಸಹಜವಾಗಿಯೇ ಮುಗಿಬೀಳುತ್ತಿದ್ದಾರೆ.`ನಗರ, ಪಟ್ಟಣ ಪ್ರದೇಶದವರು ತಮ್ಮ ಕಂಪ್ಯೂಟರ್ ಮೂಲಕವೇ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಗ್ರಾಮೀಣರು ಗ್ರಾ.ಪಂ. ಕಚೇರಿಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಇದಕ್ಕೆ ರೂ 10 ನೀಡಬೇಕು. ಪಂಚಾಯ್ತಿಯಲ್ಲಿ ಸಾಧ್ಯವಾಗದಿದ್ದರೆ, ತಾಲ್ಲೂಕಿನ ತಹಶೀಲ್ದಾರ್, ಆಹಾರ ಇಲಾಖೆ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರ ಕಚೇರಿಯಲ್ಲಿ ವೆಬ್‌ಸೈಟ್‌ಗೆ ಮಾಹಿತಿ ದಾಖಲಿಸಬಹುದು~ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದರು.ಆದರೆ, ದಾವಣಗೆರೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ವಾಸ್ತವ ಚಿತ್ರಣವೇ ಬೇರೆಯಾಗಿದೆ. ಅಗತ್ಯ ಸೌಲಭ್ಯ, ಪರಿಣಿತ ಸಿಬ್ಬಂದಿಯೂ ಇಲ್ಲ. ಹೀಗಾಗಿ, ಖಾಸಗಿ ಅಂತರ್ಜಾಲ ಕೇಂದ್ರಗಳಿಗೆ `ಲಾಭ~ವಾಗುತ್ತಿದೆ. ಜನರಿಗೆ, ರೂ 10ರ ಬದಲಿಗೆ 30, 40 ಖರ್ಚಾಗುತ್ತಿದೆ. ತಾಲ್ಲೂಕು, ಜಿಲ್ಲಾ ಕೇಂದ್ರಕ್ಕೆ ಅಲೆಯುವುದರಿಂದ ಜೇಬಿಗೆ ಕತ್ತರಿ ಬೀಳುತ್ತಿದೆ.ಇಂಟರ್‌ನೆಟ್ ಕೇಂದ್ರಗಳತ್ತ...

ಜಿಲ್ಲೆಯೊಂದರಲ್ಲಿಯೇ 230 ಗ್ರಾ.ಪಂ.ಗಳಿವೆ. ಈ ಪೈಕಿ, ಬಹುತೇಕ ಕಡೆ ಕಂಪ್ಯೂಟರ್ ಇಲ್ಲ. ಕಂಪ್ಯೂಟರ್ ಇದ್ದರೆ, ಅಂತರ್ಜಾಲ ಸಂಪರ್ಕವಿಲ್ಲ. ಎರಡೂ ಇದ್ದರೆ, ಸಿಬ್ಬಂದಿ ಕೊರತೆ; ವಿವಿಧೆಡೆ ವಿದ್ಯುತ್ ಅಭಾವ! ಹೀಗಾಗಿ, ಅರ್ಜಿದಾರರು ಇಂಟರ್‌ನೆಟ್ ಕೇಂದ್ರಗಳ ಮೊರೆ ಹೋಗುತ್ತಿದ್ದಾರೆ. ಬಡವರು, ಕೂಲಿ ಕಾರ್ಮಿಕರಿಗೆ ರೂ 30 ಕಡಿಮೆ ಸಂಗತಿಯೇನಲ್ಲ. ಸರ್ಕಾರದಿಂದಲೇ ಎಲ್ಲ ವ್ಯವಸ್ಥೆ ಮಾಡಬೇಕಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.ಅರ್ಜಿ ಸಲ್ಲಿಸಲು ಬರುವವರನ್ನು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಿಬ್ಬಂದಿಯೇ ಇಂಟರ್‌ನೆಟ್ ಕೇಂದ್ರಗಳಿಗೆ ಕಳುಹಿಸುತ್ತಿದ್ದಾರೆ. ಪ್ರಶ್ನಿಸಿದರೆ, ಸಿಬ್ಬಂದಿ ಇಲ್ಲ ಎನ್ನುತ್ತಾರೆ ಎಂಬುದು ಸಾರ್ವಜನಿಕರ ದೂರು.ವ್ಯವಸ್ಥೆ ಮಾಡಬೇಕಿತ್ತು: `ಗ್ರಾಹಕರನ್ನು ವಾಪಸ್ ಕಳುಹಿಸಲು ಆಗುವುದಿಲ್ಲ. ಮಾಹಿತಿ ಕೊರತೆಯಿಂದ ಅರ್ಜಿ ಭರ್ತಿಗೆ 3-4 ಬಾರಿ ಬರುತ್ತಾರೆ. ಹೀಗಾಗಿ ರೂ 30 ಪಡೆಯಬೇಕಾಗಿದೆ~ ಎನ್ನುತ್ತಾರೆ ಇಲ್ಲಿನ ಇಂಟರ್‌ನೆಟ್ ಕೇಂದ್ರ ಒಂದರ ಮಾಲೀಕರು.`ಎಲ್ಲಾ ಗ್ರಾ.ಪಂ., ಆಹಾರ ಪೂರೈಕೆ ಇಲಾಖೆ ಸಹಾಯಕ ನಿರ್ದೇಶಕರು, ತಹಶೀಲ್ದಾರ್ ಕಚೇರಿಯಲ್ಲಿ ಅಂತರ್ಜಾಲ ಸಂಪರ್ಕ, ಕಂಪ್ಯೂಟರ್‌ಗಳ ವ್ಯವಸ್ಥೆ ಇಲ್ಲ. ಜನರು ಇಂಟರ್‌ನೆಟ್ ಸೆಂಟರ್‌ಗಳಿಗೆ ಹೋಗುತ್ತಿದ್ದಾರೆ~ ಎಂದು ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ಶೀಘ್ರವೇ ಕಂಪ್ಯೂಟರ್, ಇಂಟರ್‌ನೆಟ್ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಬಿಎಸ್‌ಎನ್‌ಎಲ್ ಅಧಿಕಾರಿ ಜತೆ ಚರ್ಚಿಸಲಾಗಿದೆ~ ಎಂದು ಜಿ.ಪಂ. ಸಿಇಒ ಗುತ್ತಿ ಜಂಬುನಾಥ್ ಅವರು ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry