ಪಡಿತರ ಚೀಟಿ ವಿತರಣೆ ಲೋಪ: ಮಾತಿನ ಚಕಮಕಿ
ಬೆಂಗಳೂರು: ಪಡಿತರ ಚೀಟಿ ವಿತರಣೆಯಲ್ಲಿ ಆಗಿರುವ ಲೋಪಗಳಿಗೆ ಹಿಂದಿನ ಸರ್ಕಾರಗಳೇ ಹೊಣೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ಶುಕ್ರವಾರ ವಿಧಾನ ಸಭೆಯಲ್ಲಿ ನೀಡಿದ ಹೇಳಿಕೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ವಾಗ್ವಾದ, ಮಾತಿನ ಚಕಮಕಿಗೆ ಎಡೆ ಮಾಡಿಕೊಟ್ಟಿತು.
ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಮಾತನಾಡುವಾಗ ಪಡಿತರ ಚೀಟಿಗಳ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, 30 ಲಕ್ಷ ಪಡಿತರ ಚೀಟಿಗಳನ್ನು ರದ್ದು ಮಾಡಿರುವುದು ಹಾಗೂ ಬಿಪಿಎಲ್ ಕಾರ್ಡ್ಗಳ ವಿತರಣೆಗೆ ಆದಾಯ ಪ್ರಮಾಣ ಪತ್ರ ಕಡ್ಡಾಯ ಮಾಡಿರುವುದು ಸರಿಯಲ್ಲ. ಕೂಡಲೇ ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಡಿ.ಎನ್.ಜೀವರಾಜ್, `ಹಳೆಯ ಕಾರ್ಡ್ಗಳನ್ನು ಹೊಂದಿರುವವರು ಆದಾಯ ಪ್ರಮಾಣ ಪತ್ರ ನೀಡಬೇಕಾಗಿಲ್ಲ. ಹಿಂದೆ ತಾತ್ಕಾಲಿಕ ಪಡಿತರ ಚೀಟಿಗಳನ್ನು ಪಡೆದಿರುವ ಫಲಾನುಭವಿಗಳಿಂದ ಮಾತ್ರ ಆದಾಯ ಪ್ರಮಾಣ ಪತ್ರ ಪಡೆಯಲಾಗುತ್ತಿದೆ. ಅದು ಇಲ್ಲದಿದ್ದರೆ ಬಿಪಿಎಲ್ ಕಾರ್ಡ್ ವಿತರಣೆಗೆ ಮಾನದಂಡ ಏನು? ಇದಕ್ಕೆ ನೀವೇ ಪರಿಹಾರ ಸೂಚಿಸಿ~ ಎಂದರು.
`ಹಳೆಯ ಕಾರ್ಡ್ಗಳಿಗೆ ಅಕ್ಕಿ ನೀಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಅಲ್ಲದೆ ಇದೇ 30ರ ಒಳಗೆ ಆದಾಯ ಪ್ರಮಾಣ ಪತ್ರ ನೀಡಬೇಕು ಎಂಬ ಗಡುವು ವಿಧಿಸಿಲ್ಲ~ ಎಂದು ಜೀವರಾಜ್ ಸ್ಪಷ್ಟಪಡಿಸಿದರು.
ಆಗ ಮಧ್ಯಪ್ರವೇಶಿಸಿದ ಶೋಭಾ, `ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗುವವರೆಗೂ ಈ ಖಾತೆಯನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಮನೆಯ ವಿದ್ಯುತ್ ಮೀಟರ್ನ ಆರ್.ಆರ್.ಸಂಖ್ಯೆಯೊಂದಿಗೆ ಪಡಿತರ ಚೀಟಿ ಸಂಖ್ಯೆಯನ್ನು ಹೊಂದಾಣಿಕೆ ಮಾಡಿ ವಾರಸುದಾರರು ಇಲ್ಲದ 30 ಲಕ್ಷ ಕಾರ್ಡ್ಗಳನ್ನು ರದ್ದು ಮಾಡಲಾಗಿದೆ~ ಎಂದರು.
ರಾಜ್ಯದಲ್ಲಿ 1.10 ಕೋಟಿ ಕುಟುಂಬಗಳಿದ್ದರೆ, ಕಾರ್ಡ್ಗಳ ಸಂಖ್ಯೆ 1.78 ಕೋಟಿ ಇತ್ತು. 2006ರಲ್ಲಿ ಕೊಮ್ಯಾಟ್ ಸಂಸ್ಥಗೆ ಪಡಿತರ ಚೀಟಿಗಳನ್ನು ವಿತರಿಸುವ ಜವಾಬ್ದಾರಿ ವಹಿಸಲಾಗಿತ್ತು. ಆ ಸಂಸ್ಥೆ ಫಲಾನುಭವಿಗಳ ಬೆರಳಚ್ಚು ಪಡೆಯದೆ ಮನಬಂದಂತೆ ಕಾರ್ಡ್ಗಳನ್ನು ವಿತರಿಸಿದ್ದರಿಂದ ಅನರ್ಹರಿಗೆ ಕಾರ್ಡ್ಗಳು ತಲುಪಿವೆ. ಇದಕ್ಕೆ ಆಗ ಸಚಿವರಾಗಿದ್ದ ಎಚ್.ಎಸ್.ಮಹದೇವ ಪ್ರಸಾದ್ ಅವರೇ ಹೊಣೆ ಎಂದರು.
ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಮಹದೇವ ಪ್ರಸಾದ್, 2009ರ ಲೋಕಸಭಾ ಚುನಾವಣೆಗೂ ಮುನ್ನ ನೆಮ್ಮದಿ ಕೇಂದ್ರಗಳ ಮೂಲಕ 27 ಲಕ್ಷ ತಾತ್ಕಾಲಿಕ ಪಡಿತರ ಚೀಟಿಗಳನ್ನು ವಿತರಿಸಲಾಯಿತು. ಸ್ವಯಂ ಘೋಷಿತ ಪ್ರಮಾಣ ಪತ್ರದ ಆಧಾರ ಮೇಲೆ ಕಾರ್ಡ್ಗಳನ್ನು ನೀಡಲಾಯಿತು.
ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಮಾಣ ಪತ್ರ ನೀಡಿದ ಎಲ್ಲರಿಗೂ ಕಾರ್ಡ್ಗಳನ್ನು ನೀಡಿದ್ದರಿಂದ ಅನರ್ಹಗಳಿಗೆ ಪಡಿತರ ಚೀಟಿಗಳು ವಿತರಣೆಯಾಗಿವೆ. ಇದಕ್ಕೆ ಬಿಜೆಪಿ ಸರ್ಕಾರ ಕಾರಣ ಎಂದು ಪ್ರತ್ಯಾರೋಪ ಮಾಡಿದರು.
`2006ರಿಂದ ಬಿಜೆಪಿಯವರೇ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾಗಿದ್ದಾರೆ. ನಮ್ಮ ಕಾಲದಲ್ಲಿ ಲೋಪ ಆಗಿದ್ದರೆ, ಬಿಜೆಪಿಯವರು ಸರಿಪಡಿಸಬಹುದಾಗಿತ್ತು. ಪಡಿತರ ಚೀಟಿ ವಿತರಣೆಯ ಗುತ್ತಿಗೆ ಪಡೆದಿದ್ದ ಕೊಮ್ಯಾಟ್ ಸಂಸ್ಥೆಯನ್ನು ನಿಯಂತ್ರಿಸಲು ಆಗದ ಸರ್ಕಾರ, ಯಾವ ರೀತಿಯ ಆಡಳಿತ ನಡೆಸಬಹುದು~ ಎಂದು ವ್ಯಂಗ್ಯವಾಡಿದರು.
ಮಹದೇವ ಪ್ರಸಾದ್ ಮಾತಿಗೆ, ಶೋಭಾ ಅಡ್ಡಿಪಡಿಸಿದ್ದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಸ್ವಲ್ಪ ಹೊತ್ತು ಮಾತಿನ ಚಕಮಕಿ, ಆರೋಪ- ಪ್ರತ್ಯಾರೋಪ ನಡೆಯಿತು.ಅರ್ಹರಿಗೆ ಪಡಿತರ ಚೀಟಿಗಳು ಸಿಕ್ಕಿಲ್ಲ, ಅನರ್ಹರಿಗೆ ಎಲ್ಲ ಸೌಲಭ್ಯಗಳು ದೊರೆಯುತ್ತಿವೆ. ಈ ಲೋಪಗಳನ್ನು ಸರಿಪಡಿಸಲು ಎಷ್ಟು ವರ್ಷ ಬೇಕು ಎಂದು ಜೆಡಿಎಸ್ನ ಕೆ.ಎಂ.ಶಿವಲಿಂಗೇಗೌಡ ಪ್ರಶ್ನಿಸಿದರು. ಎಲ್ಲರಿಗೂ ಕಾರ್ಡ್ಗಳನ್ನು ನೀಡಿ ಎಂದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸೂಚನೆ ನೀಡಿದ್ದೆ ಇದಕ್ಕೆಲ್ಲ ಕಾರಣ ಎಂದು ಕಾಂಗ್ರೆಸ್ನ ಟಿ.ಬಿ.ಜಯಚಂದ್ರ ದೂರಿದರು.
ಸಣ್ಣ ನೀರಾವರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, `ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯನ್ನು ನಾನೇ ನೋಡಿಕೊಳ್ಳುತ್ತಿದ್ದೆ. ಈ ರೀತಿ ಪರಸ್ಪರ ಆರೋಪ ಮಾಡುವುದರಿಂದ ಪ್ರಯೋಜನವಿಲ್ಲ. ಆಡಳಿತ ಮತ್ತು ಪ್ರತಿಪಕ್ಷದವರು ಸೇರಿ ತಪ್ಪುಗಳನ್ನು ಸರಿಪಡಿಸೋಣ~ ಎನ್ನುವ ಮೂಲಕ ವಿವಾದಕ್ಕೆ ತೆರೆ ಎಳೆದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.