ಭಾನುವಾರ, ಮೇ 16, 2021
21 °C

`ಪಡಿತರ ಚೀಟಿ ಹೆಸರಲ್ಲಿ ಜನರಿಗೆ ಕಿರುಕುಳ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: `ಸರ್ಕಾರ ಮಾಡಿದ ತಪ್ಪಿಗಾಗಿ ಜನ ಸಾಮಾನ್ಯರು 50 ರೂಪಾಯಿ ದಂಡ ಕಟ್ಟಿ ಪಡಿತರ ಚೀಟಿ ಪಡೆಯುವ ಸ್ಥಿತಿ ನಿರ್ಮಾಣವಾಗಿದ್ದು, ಬಡ ಜನರಿಗೆ ಕಿರುಕುಳ ನೀಡಿದಂತಾಗಿದೆ' ಎಂದು ಕರವೇ ತಾಲ್ಲೂಕು ಅಧ್ಯಕ್ಷ ಹೇಮಂತ್‌ಕುಮಾರ್ ಮಂಗಳವಾರ ಬೇಸರ ವ್ಯಕ್ತಪಡಿಸಿದ್ದಾರೆ.ಪ್ರಜಾವಾಣಿಯೊಂದಿಗೆ ಮಾತನಾಡಿದ ಅವರು, `ತಂತ್ರಜ್ಞಾನದ ಹೆಸರಲ್ಲಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಭಾವಚಿತ್ರ ತೆಗೆಸಲು ಬಂದರೆ ಅಧಿಕಾರಿಗಳೇ ನಾಪತ್ತೆಯಾಗುತ್ತಾರೆ' ಎಂದು ಕಿಡಿಕಾರಿದರು.2010ರ ಡಿಸೆಂಬರ್‌ಗೆ ಮುಂಚೆ ವಿತರಣೆಯಾದ ಪಡಿತರ ಚೀಟಿಗಳ ಮಾಹಿತಿ ಕಳೆದು ಹೋಗಿರುವುದರಿಂದ ಅಂಥ ಚೀಟಿ ಹೊಂದಿರುವ ವ್ಯಕ್ತಿಗಳು ಮತ್ತೊಮ್ಮೆ 50 ರೂಪಾಯಿ ಶುಲ್ಕ ಪಾವತಿಸಿ ಬೆರಳಚ್ಚು ನೀಡತಕ್ಕದ್ದು ಎಂದು ರಾಜ್ಯ ಸರ್ಕಾರ ಎರಡು ತಿಂಗಳ ಹಿಂದೆ ಆದೇಶ ನೀಡಿತ್ತು.ಆದರೆ, ಈಗಾಗಲೇ 60 ರೂಪಾಯಿ ಶುಲ್ಕ ನೀಡಿ ಅಸಂಖ್ಯಾತ ಜನರು ತಮ್ಮ ಪಡಿತರ ಚೀಟಿ ಪಡೆದಿದ್ದಾರೆ.

ಈಗ ಮತ್ತೊಮ್ಮೆ ಶುಲ್ಕ ಪಾವತಿಸುವುದಲ್ಲದೇ ತಮ್ಮ ಬಯೋಮೆಟ್ರಿಕ್ ಮಾಹಿತಿಯನ್ನು  ಪುಃನ ಸಲ್ಲಿಸಲು ಹೋದವರು ಸಮಸ್ಯೆಗಳ ಸರಮಾಲೆಯನ್ನೇ ಅನುಭವಿಸುವಂತಾಗಿದೆ.ಬಯೋಮೆಟ್ರಿಕ್ ಮಾಹಿತಿಯನ್ನು ಪುನಃ ಪಡೆಯಲು ಕುಟುಂಬದ ಎಲ್ಲ ಸದಸ್ಯರನ್ನು ಕರೆದೊಯ್ಯಬೇಕು. ಕ್ರಮಬದ್ಧವಾದ ಪಡಿತರ ಚೀಟಿಯುಳ್ಳ ವ್ಯಕ್ತಿಯೊಬ್ಬನನ್ನು ಸಾಕ್ಷಿಯಾಗಿ ಕರೆದುಕೊಂಡು ಹೋಗಬೇಕು. ಅವರ ಕುರಿತಾದ ಮಾಹಿತಿ ಗಣಕ ಯಂತ್ರದಲ್ಲಿ ತಾಳೆಯಾಗದಿದ್ದರೆ ಬೇರೊಬ್ಬ ಸಾಕ್ಷಿ ಹುಡಕಬೇಕು. ಹೀಗೆ ಹತ್ತಾರು ಸಮಸ್ಯೆಗಳನ್ನು ಜನತೆ ಎದುರಿಸುವಂತಾಗಿದೆ. ಈ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಹಾಗೂ ಪಟ್ಟಣದ ಆಹಾರ ಇಲಾಖೆಯಲ್ಲಿ ನಿತ್ಯ ಕಾಯುವುದೇ ಆಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಬಯೋಮೆಟ್ರಿಕ್ ಮಾಹಿತಿಯನ್ನು ಪುನಃ ಸಲ್ಲಿಸಲು ಮಾ.31ರವರೆಗೆ ವಿಸ್ತರಿಸಿದ್ದ ಗಡುವನ್ನು ವಿಧಾನಸಭಾ ಚುನಾವಣೆಯಿಂದಾಗಿ ವಿಸ್ತರಿಸಿದ್ದರೂ ಹೊಸ ಗಡುವು ಎನು ಎಂಬುದು ಸ್ಪಷ್ಟವಿಲ್ಲ. ಇದರಿಂದಾಗಿ ಪಡಿತರ ಚೀಟಿ ನವೀಕರಿಸಬೆಕಾದ ಜನರು ತೀವ್ರ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.