ಭಾನುವಾರ, ಡಿಸೆಂಬರ್ 8, 2019
25 °C

ಪಡಿತರ ವಿತರಣೆಯಲ್ಲಿ ಮೋಸ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಡಿತರ ವಿತರಣೆಯಲ್ಲಿ ಮೋಸ: ಪ್ರತಿಭಟನೆ

ಸಕಲೇಶಪುರ: ಇಲ್ಲಿಯ ಕುಶಾಲನಗರ ಬಡಾವಣೆಯ­ಲ್ಲಿರುವ ತಾರುಣ್ಯ ಮಹಿಳಾ ಸಮಾಜದ ರಾಜಮ್ಮ ಅವರ ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ವಂಚನೆ ನಡೆಯುತ್ತಿದೆ. ಜನರ ಪಡಿತರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಫಲಾನುಭವಿ­ಗಳು ಭಾನುವಾರ ಪ್ರತಿಭಟನೆ ನಡೆಸಿದರು.ಭಾನುವಾರ ಬೆಳಿಗ್ಗೆ ಮಾರಾಟ ಮಾಡಿದ್ದ 27 ಕೆಜಿ ಅಕ್ಕಿಯಲ್ಲಿ ತೂಕ ಕಡಿಮೆ ಇದೆ ಎಂದು ಹಲವರು ಪುರಸಭಾ ಸದಸ್ಯ ಮುಫೀಜ್‌ ಅವರಿಗೆ ದೂರು ನೀಡಿದ್ದರು. ಪುರಸಭಾ ಸದಸ್ಯರು ಹಾಗೂ ಇತರರು ನ್ಯಾಯಬೆಲೆ ಅಂಗಡಿಗೆ ತೆರಳಿ ತೂಕ ಪರಿಶೀಲನೆ ನಡೆಸಿದಾಗ 2 ಕೆಜಿ ಕಡಿಮೆ ಇರುವುದು ಪತ್ತೆಯಾ­ಯಿತು. 20ಕ್ಕೂ ಹೆಚ್ಚು ಮಂದಿ ಖರೀದಿ ಮಾಡಿದ್ದು, ಎಲ್ಲರಲ್ಲೂ ಕಡಿಮೆ ಇರುವುದು ಕಂಡುಬಂತು.ಇದರಿಂದ ಜನ ಅಂಗಡಿ ಮಾಲಿಕರಾದ ರಾಜಮ್ಮ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಅಂಗಡಿ ಮುಂದಿನ ರಸ್ತೆಯಲ್ಲಿ ಧರಣಿ ಕುಳಿತರು.

‘ರಾಜಮ್ಮ ಹಲವು ವರ್ಷಗಳಿಂದಲೂ ನಿರಂತರ­ವಾಗಿ ಬಡವರನ್ನು ವಂಚಿಸುತ್ತಿದ್ದಾರೆ. ಒಂದು ಕೆಜಿ ಸಕ್ಕರೆ ಖರೀದಿ ಮಾಡಿದರೆ 800 ಗ್ರಾಂ  ನೀಡುತ್ತಾರೆ. ಕಾರ್ಡುದಾರರಿಗೆ ಸೀಮೆಎಣ್ಣೆ ನೀಡದೆ ಕಾಳಸಂತೆಯಲ್ಲಿ ಮಾರಾಟ ಮಾಡಿ ವಂಚಿಸುತ್ತಿದ್ದಾರೆ. ಮನಸ್ಸಿಗೆ ಬಂದಾಗ ಅಂಗಡಿ ಬಾಗಿಲು ತೆಗೆಯುತ್ತಾರೆ. ನಕಲಿ ಕಾರ್ಡುಗಳನ್ನು ಇಟ್ಟುಕೊಂಡು ಪಡಿತರ ದುರುಪ­ಯೋಗ ಮಾಡುತ್ತಿದ್ದಾರೆ’ ಎಂದು ಮಹಿಳೆಯರು ದೂರಿದರು.ಪಿಎಸ್‌ಐ ದಿನೇಶ್‌ ಪಾಟೀಲ್‌ ಹಾಗೂ ಸಿಬ್ಬಂದಿ ಧಾವಿಸಿದರು. ನಂತರ ಉಪವಿಭಾಗಾಧಿಕಾರಿ ಶ್ರೀವಿದ್ಯಾ  ಹಾಗೂ ತಹಶೀಲ್ದಾರ್‌ ಪಾವರ್ತಮ್ಮ ಸ್ಥಳಕ್ಕೆ ಆಗಮಿಸಿ­ದಾಗ ರಾಜಮ್ಮ ವಿರುದ್ಧ ಬಡಾವಣೆ ನಿವಾಸಿಗಳು ಆರೋಪಗಳ ಸುರಿಮಳೆಗರೆದರು.‘ರಾಜಮ್ಮ ಅವರಿಗೆ ನೀಡಿರುವ ನ್ಯಾಯಬೆಲೆ ಅಂಗಡಿ ಪರವಾನಗಿಯನ್ನು ತಕ್ಷಣವೇ ರದ್ದುಗೊಳಿಸ­ಬೇಕು. ಬಡವರಿಗೆ ವಂಚನೆ ಮಾಡುತ್ತಿರುವ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲು ಮಾಡಿ, ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.ಉಪವಿಭಾಗಾಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ತೂಕದ ಬಟ್ಟುಗಳಲ್ಲಿ ಸಾಕಷ್ಟು ವ್ಯತ್ಯಾಸ ಇರುವುದು, ದಾಸ್ತಾನು ಸಂಗ್ರಹ ಲೆಕ್ಕಪತ್ರಗಳು ಸರಿ ಇಲ್ಲದೆ ಇರುವುದು ಕಂಡುಬಂತು. ಇದರಿಂದ ನ್ಯಾಯಬೆಲೆ ಅಂಗಡಿಗೆ ಬೀಗ ಹಾಕಿ ಕ್ರಮಕ್ಕಾಗಿ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ಸೂಚಿಸಿದರು.

ಪ್ರತಿಕ್ರಿಯಿಸಿ (+)