ಪಡಿತರ ವಿತರಣೆಯಲ್ಲಿ ಲೋಪ: ಆರೋಪ

ಗುರುವಾರ , ಜೂಲೈ 18, 2019
22 °C

ಪಡಿತರ ವಿತರಣೆಯಲ್ಲಿ ಲೋಪ: ಆರೋಪ

Published:
Updated:

ಚನ್ನರಾಯಪಟ್ಟಣ: ಶ್ರವಣಬೆಳಗೊಳ ಹೋಬಳಿ ಕುಂಭೇನಹಳ್ಳಿಯ ಹಾಲು ಉತ್ಪಾದಕ ಸಹಕಾರ ಸಂಘದ ವತಿಯಿಂದ ಸೀಮೆಎಣ್ಣೆ ವಿತರಿಸುವಲ್ಲಿ ಲೋಪವಾಗುತ್ತಿದೆ ಎಂದು ದೂರಿದ ಗ್ರಾಮಸ್ಥರು, ರೈತ ಸಂಘದ ಸದಸ್ಯರೊಂದಿಗೆ ಶುಕ್ರವಾರ ಮಿನಿ ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಿದರು.ಗ್ರಾಮದಲ್ಲಿ ಪಡಿತರ ವಿತರಣೆಯನ್ನು ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಅವಕಾಶ ನೀಡಲಾಗಿದೆ. ಜೂನ್  21 ರಂದು 1839 ಲೀಟರ್ ಸೀಮೆಎಣ್ಣೆಯನ್ನು ಎತ್ತುವಳಿ ಮಾಡಲಾಗಿದೆ. ಆದರೆ ಗ್ರಾಮಸ್ಥರಿಗೆ ವಿತರಿಸಲು ಮುಂದಾಗಲಿಲ್ಲ. ಈ ಬಗ್ಗೆ ಜುಲೈ 11 ರಂದು ನ್ಯಾಯ ಕೇಳಲು ಗ್ರಾಮಸ್ಥರು ಮಿನಿವಿಧಾನ ಸೌಧಕ್ಕೆ ಆಗಮಿಸಿ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಇದನ್ನು ಅರಿತು ಉತ್ಪಾದಕರ ಸಂಘದ ಕಾರ್ಯದರ್ಶಿ ಸೀಮೆಎಣ್ಣೆಯನ್ನು ವಿತರಿಸಲು ಪ್ರಾರಂಭಿಸಿದರು. ಆದರೆ, ಜೂನ್ 26 ರಂದು ವಿತರಿಸಲಾಗಿದೆ ಎಂದು ಪಡಿತರ ಚೀಟಿಯಲ್ಲಿ ನಮೂದಿಸಲಾಗಿದೆ. ಯಾರೊ ಬ್ಬರಿಗೂ ಬಿಲ್ ನೀಡುತ್ತಿಲ್ಲ. ಕೇಳಿದರೆ ಉಡಾಫೆ ಯಿಂದ ವರ್ತಿಸುತ್ತಾರೆ ಎಂದು ಕಾರ್ಯದರ್ಶಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಜೂನ್ 21ರಂದು ಒಂಬತ್ತು ನ್ಯಾಯಬೆಲೆ ಅಂಗಡಿಯವರು ಸೀಮೆಎಣ್ಣೆ ಎತ್ತುವಳಿ ಮಾಡಿದ್ದಾರೆ. ಎಂಟು ಅಂಗಡಿಯವರು ಸಕಾಲಕ್ಕೆ ಸೀಮೆಎಣ್ಣೆ ವಿತರಿಸಿದ್ದಾರೆ. ಕುಂಭೇನಹಳ್ಳಿ ಹಾಲು ಉತ್ಪಾದಕ ಸಹಕಾರ ಸಂಘ ಸೀಮೆಎಣ್ಣೆ ವಿತರಿಸಲು ಏಕೆ ವಿಳಂಬ ಎಂಬುದಕ್ಕೆಉತ್ತರಿಸಬೇಕು. ಕಳೆದ ತಿಂಗಳು ನೀಡಬೇಕಾದ ಸೀಮೆಎಣ್ಣೆಯನ್ನು ಜುಲೈನಲ್ಲಿ ವಿತರಿಸಿ ಹಿಂದಿನ ತಿಂಗಳ ದಿನಾಂಕವನ್ನು ಪಡಿತರ ಚೀಟಿಯಲ್ಲಿ ನಮೂದಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು. ಆಹಾರ ಇಲಾಖೆ ಅಧಿಕಾರಿಗಳು, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ದೂರಿದರು.ಸ್ಥಳಕ್ಕೆ ತಹಶೀಲ್ದಾರ್ ಪಿ.ಜಿ. ನಟರಾಜ್ ಭೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದಿಂದ ಮೂರು ತಿಂಗಳಿಂದ ವಿತರಿಸಿರುವ ಪಡಿತರದ ಬಗ್ಗೆ ಮಾಹಿತಿ ಪಡೆಯಲಾಗುವುದು. ಪಡಿತರ ಸಮರ್ಪಕ ವಿತರಣೆಯಾಗುತ್ತಿರುವ ಬಗ್ಗೆ ಪರಿಶೀಲಿಸಲು ಸ್ಥಳೀಯ ಮಟ್ಟದಲ್ಲಿ `ಜಾಗೃತಿ ಸಮಿತಿ' ನೇಮಿಸಲಾಗಿದೆ. ಪ್ರತಿ ತಿಂಗಳು ಪರಿಶೀಲಿಸಬೇಕು ಎಂದು ಹೇಳಿದರು. ಮಧ್ಯಾಹ್ನ 1 ಗಂಟೆಗೆ ಸಂಘದ ಕಾರ್ಯದರ್ಶಿ, ಆಹಾರ ಇಲಾಖಾಧಿಕಾರಿಗಳ ಸಭೆಯ ಕರೆಯಲಾಗುವುದು ಎಂದು ಭರವಸೆ ನೀಡಿದರು. ಆದರೆ ಮಧ್ಯಾಹ್ನ ಮೂರು ಗಂಟೆಯಾದರೂ ಸಭೆ ಕರೆಯದಿದ್ದನ್ನು ಕಂಡು ನೊಂದ ಗ್ರಾಮಸ್ಥರು, ತಹಶೀಲ್ದಾರ್ ವಾಹನವನ್ನು ಅಡ್ಡಗಟ್ಟಿ ಪ್ರತಿಭಟಿಸಿದರು. ತಹಶೀಲ್ದಾರ್ ಸಂಜೆ 5 ಗಂಟೆಗೆ  ಅಥವಾ ಶನಿವಾರ(ಜುಲೈ 13) ಬೆಳಿಗ್ಗೆ ಸಭೆ ಕರೆದು ಇತ್ಯರ್ಥಪಡಿಸಲಾಗುವುದು ಎಂದು ಹೇಳಿದರು.  ಪ್ರತಿಭಟನಾಕಾರರು ಸಂಜೆವರೆಗೆ ಮಿನಿವಿಧಾನ ಸೌಧದ ಮುಂದೆ ಜಮಾಯಿಸಿದ್ದರು.ದೊಡ್ಡೇರಿ ಶ್ರೀಕಂಠು, ಮಂಜೇಗೌಡ, ಎಂ.ಎಲ್ ಹರೀಶ್, ಸತ್ತಿಗೌಡ, ರಘು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry