ಶನಿವಾರ, ಅಕ್ಟೋಬರ್ 19, 2019
28 °C

ಪಡುಬಿದ್ರಿ ಚತುಷ್ಪಥ ಕಾಮಗಾರಿ: ಚುರುಕುಗೊಳಿಸಲು ಆಗ್ರಹ

Published:
Updated:

ಉಡುಪಿ: ಕುಂದಾಪುರ -ಸುರತ್ಕಲ್ ಚತುಷ್ಪಥ ಕಾಮಗಾರಿ ಭರದಿಂದ ಸಾಗುತ್ತಿದ್ದರೂ ಪಡುಬಿದ್ರಿಯಲ್ಲಿ ಮಾತ್ರ ಇದರ ವೇಗ ಕುಂಠಿತಗೊಂಡಿದೆ.  ಬೈಪಾಸ್ ನಿರ್ಮಿಸಬೇಕು ಎನ್ನುವ ಬಂಡವಾಳ ಶಾಹಿಗಳ ಒತ್ತಡದ ಹಿನ್ನಲೆಯಲ್ಲಿ ಕಾಮಗಾರಿ ಹಿನ್ನಡೆ ಅನುಭವಿಸಿದೆ. 45 ಮೀ.ಮಾತ್ರ ಭೂ ಸ್ವಾಧೀನ ಮಾಡಿ ಚತುಷ್ಪಥ ಕಾಮಗಾರಿ ಶೀಘ್ರ ನಡೆಸಬೇಕು `ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ, `ಬೈಪಾಸ್ ನಿರ್ಮಿಸಬೇಕು ಎನ್ನುವುದು ಪಡುಬಿದ್ರಿಯಲ್ಲಿ ಬಂಡವಾಳ ಶಾಹಿಗಳ ಒತ್ತಡವಾಗಿದೆ. ಇದರಿಂದಾಗಿ ಆ ಭಾಗದಲ್ಲಿ  ಕಾಮಗಾರಿ ಹಿನ್ನಡೆ ಅನುಭವಿಸಿದೆ. ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿಯದೆ ಸರ್ಕಾರ ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಬೇಕು~ ಎಂದು ಆಗ್ರಹಿಸಿದರು.ವಕೀಲ ರಾಮದಾಸ್ ನಾಯಕ್ ಮಾತನಾಡಿ, `1986ರಲ್ಲಿ ಹೆದ್ದಾರಿ ಇಲಾಖೆ ಆದೇಶ ಹೊರಡಿಸಿ ರಾ.ಹೆ. ಮಧ್ಯ ಭಾಗದಿಂದ 40ಮೀ. ಬಿಟ್ಟು ಕಟ್ಟಡ ನಿರ್ಮಿಸಲು ಸೂಚಿಸಿತ್ತು. 2000 ಇಸವಿಯಲ್ಲಿಯೂ ರಸ್ತೆ ಮಧ್ಯಭಾಗದಿಂದ ಎರಡೂ ಬದಿಯಲ್ಲಿ 40ಮೀ. ಸ್ಥಳವನ್ನು ಹೆದ್ದಾರಿ ಇಲಾಖೆಗೆ ಸೇರಿದ್ದು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ ಈ ನಿಯಮಗಳನ್ನು ಉಲ್ಲಂಘಿಸಿ ಕೆಲವು ಕಟ್ಟಡಗಳನ್ನು ನಿರ್ಮಿಸಲಾಗಿದೆ~ ಎಂದು ಆರೋಪಿಸಿದರು.`2011ರ ಆಗಸ್ಟ್ 31ರಂದು ಉಡುಪಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಪಡುಬಿದ್ರಿಯಲ್ಲಿ ಹೆದ್ದಾರಿ ವಿಸ್ತರಣೆಯೇ ಸೂಕ್ತ ಎಂಬ ನಿರ್ಣಯಕ್ಕೆ ಬರಲಾಗಿತ್ತು. ಜಿಲ್ಲಾಧಿಕಾರಿ ಎಂ.ಟಿ.ರೇಜು ಅವರು ವರದಿಯಲ್ಲಿ ಬೈಪಾಸ್ ಬದಲು ಹೆದ್ದಾರಿ ವಿಸ್ತರಣೆಗೆ ಶಿಫಾರಸು ಮಾಡಿದ್ದರು.

 

ಆದರೆ ಉಸ್ತುವಾರಿ ಸಚಿವ ಡಾ.ವಿ.ಎಸ್. ಆಚಾರ್ಯ ಹಾಗೂ ಶಾಸಕ ಲಾಲಾಜಿ ಮೆಂಡನ್ ಈ ಬಗ್ಗೆ ಮೌನ ವಹಿಸಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್‌ಪಡುಬಿದ್ರಿಯಲ್ಲಿ ಬೈಪಾಸ್ ನಿರ್ಮಿಸಬೇಕು ಎಂದು ವ್ಯಾಪ್ತಿ ಮೀರಿ ಪಟ್ಟುಹಿಡಿದಿದ್ದಾರೆ. ಅವರು ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ~ ಎಂದರು.ಪತ್ರಿಕಾಗೋಷ್ಠಿಯಲ್ಲಿ ನವೀನ್ ಚಂದ್ರ ಶೆಟ್ಟಿ , ಪಡುಬಿದ್ರಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮಿಥುನ್ ಹೆಗ್ಡೆ , ಹೋರಾಟ ಸಮಿತಿಯ ದಿವಾಕರ್ ಭಟ್, ನವೀನ್ ಶೆಟ್ಟಿ ಇದ್ದರು.

Post Comments (+)