ಪತನದ ಹಾದಿಯಲ್ಲಿ ಸಾಗರ ಸಾಮ್ರಾಜ್ಯ

7

ಪತನದ ಹಾದಿಯಲ್ಲಿ ಸಾಗರ ಸಾಮ್ರಾಜ್ಯ

Published:
Updated:

`ಸಾಗರ~, ಅಗಾಧತೆಗೆ, ಅನಂತತೆಗೆ, ಶಾಶ್ವತತೆಗೆ ಪ್ರಥ್ವಿಯಲ್ಲಿನ ಏಕೈಕ ಪ್ರತ್ಯಕ್ಷ ಪ್ರತಿಮಾ ಸ್ವರೂಪೀ ಸೃಷ್ಟಿ ಅದು. ಐದು ನೂರು ಕೋಟಿ ವರ್ಷ ವಯಸ್ಸಿನ ಧರೆಯಲ್ಲಿ ಈಗ್ಗೆ ಎರಡುನೂರು ಕೋಟಿ ವರ್ಷ ಹಿಂದೆ ಮೈದಳೆದ ಸಾಗರಾವಾರವೇ ಇಳೆಯಲ್ಲಿ ಜೀವಾವತರಣದ ಮೊದಲ ನೆಲೆ, ಮೂಲನೆಲೆ.ಇಂದಿಗೂ ಇದೇ ಪಾರಾವಾರವೇ ಧರೆಯ ಅತ್ಯಂತ ವಿಸ್ತಾರ, ಅತ್ಯಂತ ಪ್ರಶಸ್ತ ಜೀವಾವಾರ. ಭೂ ಮೇಲ್ಮೈನ ಶೇಕಡ 71 ರಷ್ಟು ಪ್ರದೇಶವನ್ನು ಆವರಿಸಿ, ಧರೆಯ ಒಟ್ಟೂ ಜಲರಾಶಿಯ ಶೇಕಡ 97 ರಷ್ಟು ನೀರನ್ನು ಧರಿಸಿ, ಐದು ಲಕ್ಷ ನಾಲ್ಕು ಸಾವಿರ ಕಿ.ಮೀ. ಉದ್ದ ಕರಾವಳಿಯನ್ನು ರೂಪಿಸಿರುವ ಕಡಲಿನಾವಾರ (ಚಿತ್ರ-2)....

 

ಹಾಗಾದ್ದರಿಂದಲೇ ಇಡೀ ಭೂಗ್ರಹದ ಯಾವುದೇ ಉಪಗ್ರಹ ಚಿತ್ರದಲ್ಲೂ ಎದ್ದು ಕಾಣುವ ಭಾಗ ಸಾಗರದ್ದೇ (ಚಿತ್ರ-1). ಭೂಮಿಯ ಜೀವಿಧಾರಕ, ಜೀವಿಪೋಷಕ ಸಾಮರ್ಥ್ಯದ ಮೂಲಶಕ್ತಿ ಆಗಿರುವ ಇದೇ ಜಲಧಿಯೇ ಧರೆಯ ಸಕಲ ಶುದ್ಧ ಜಲಾವಾರಗಳ ಎಂದರೆ ನದಿ, ಸರೋವರಗಳ ಮೂಲಸೆಲೆ ಕೂಡ. ಇತ್ತೀಚಿನ ಸಾಗರ ಜೀವಿ ಗಣತಿಯಲ್ಲಿ ಗುರುತಿಸಿರುವಂತೆ ಎರಡೂವರೆ ಲಕ್ಷ ಪ್ರಾಣಿ-ಸಸ್ಯ ಪ್ರಭೇದಗಳು ಕಡಲಿನಲ್ಲಿವೆ. ಕನಿಷ್ಟ ಇದರ ನಾಲ್ಕರಷ್ಟು ಸಂಖ್ಯೆಯ ಪ್ರಭೇದಗಳು ಅಜ್ಞಾತವಾಗಿ ಉಳಿದಿವೆ.

ಅಲ್ಲದೆ ಏನಿಲ್ಲೆಂದರೂ ಸೂಕ್ಷ್ಮಾಣು ಜೀವಿಗಳ ಸುಮಾರು ಒಂದು ಶತಕೋಟಿ ಪ್ರಭೇದಗಳು ಸಾಗರಗಳಲ್ಲಿ ನೆಲೆಸಿವೆ. ಇವೆಲ್ಲಕ್ಕೂ ಮಿಗಿಲಾಗಿ ಭೂ ಉಷ್ಣತೆಯ, ಭೂ ಹವೆಯ, ಬುವಿಯ ಜಲಚಕ್ರದ-ದೃಷ್ಟಿಚಕ್ರದ ಒಟ್ಟಾರೆ ಇಡೀ ಪೃಥ್ವಿಯ ಸ್ವಾಸ್ಥ್ಯದ ಸಂರಕ್ಷಕ-ನಿಯಂತ್ರಕ ಆಗಿರುವ ಕಡಲುಗಳೇ ಮಾನವರ ಪಾಲಿಗಂತೂ ಅಪಾರ ಆಹಾರದ, ಅಸೀಮ ನಿಧಿಗಳ ಆಕರವೂ ಆಗಿವೆ.ಆದರೆ, ವಿಪರ್ಯಾಸ ಏನೆಂದರೆ, ಅದೇ ಮಾನವರಿಂದಲೇ ಜಗದ ಎಲ್ಲೆಡೆ ಕಡಲುಗಳು ಶೋಷಣೆಗೆ ದುರ್ಬಳಕೆಗೆ ಒಳಗಾಗಿದೆ. ನಾನಾ ವಿಧಗಳ ಅಂತಹ ಮಾನವ ಅಕೃತ್ಯಗಳ ಪರಿಣಾಮವಾಗಿ ಇಡೀ ಸಾಗರ ಸಾಮ್ರಾಜ್ಯವೇ ಅಧ್ವಾನಗೊಂಡು ಪತನದ ಹಾದಿ ಹಿಡಿದಿದೆ. ಸಾಗರ ಸಾಮ್ರಾಜ್ಯದ ಈ ದುಸ್ಥಿತಿಯ ಪ್ರಧಾನ ಕಾರಣ-ಪರಿಣಾಮಗಳ ಸಂಕ್ಷಿಪ್ತ ಪರಿಚಯ ಇಲ್ಲಿದೆ.ಮಾಲಿನ್ಯ ಮಹಾಪೂರ: ಪ್ರಸ್ತುತ ಜಗತ್ತಿನ ಇಡೀ ಜನಸಂಖ್ಯೆಯ ಅರ್ಧಭಾಗ ಕಡಲ ತೀರದಿಂದ ಒಂದು ನೂರು ಕಿ.ಮೀ. ವ್ಯಾಪ್ತಿಯೊಳಗೇ ನೆಲೆಗೊಂಡಿದೆ. ಕಡಲ ತೀರದ ಎಲ್ಲ ಜನವಸತಿಗಳೂ-ಹಳ್ಳಿಗಳಿಂದ ಮಹಾನಗರಗಳವರೆಗೆ- ಹೊಲಸಿನ ನಿರಂತರ ಪ್ರವಾಹವನ್ನೇ ನೇರವಾಗಿ ಕಡಲಿಗೆ ಹರಿಸುತ್ತಿವೆ (ಚಿತ್ರ-5): “ಕಸಕಡ್ಡಿ, ಪ್ಲಾಸ್ಟಿಕ್ ರಾಶಿ (ಚಿತ್ರ-8), ಒಳಚರಂಡಿ ಕೊಳಚೆ, ಡಬ್ಬ-ಬಾಟಲಿ, ಮೃತ ಪ್ರಾಣಿಗಳು, ಕಸಾಯಿ ಶೇಷಗಳು, ವಿಷಕರ ಕಲ್ಮಶಗಳು ಇತ್ಯಾದಿ”. ಕಡಲ ತೀರದ ವಿಹಾರಧಾಮಗಳಿಂದಲೇ (ಚಿತ್ರ-10) ಪ್ರತಿದಿನ ಕನಿಷ್ಠ ಐದು ಕೋಟಿ ಟನ್ ಕೊಳಕುಗಳು ಕಡಲಿಗೆ ಬೀಳುತ್ತಿವೆ.ಜೊತೆ ಜೊತೆಗೇ ದೂರ ದೂರದ ಕೃಷಿ ಭೂಮಿಗಳಿಂದ ನದಿಗಳ ಮತ್ತು ಮಳೆ ನೀರಿನ ಪ್ರವಾಹಗಳ ಮೂಲಕ ಕೀಟನಾಶಕಗಳ ಮತ್ತು ರಸಗೊಬ್ಬರಗಳ ಅಂಶಗಳು ಸಾಗರಕ್ಕೆ ಬೆರೆಯುತ್ತಿವೆ (ಚಿತ್ರ-6) ಇಂಥವೆಲ್ಲ ಮಾಲಿನ್ಯಗಳು ಕಡಲಲ್ಲಿ ದಾರುಣ ಪರಿಣಾಮಗಳನ್ನು ತರುತ್ತಿವೆ. ಅವುಗಳಲ್ಲಿನ ನೈಟ್ರೇಟ್ ಮತ್ತು ಪಾಸ್ಫೇಟ್ ಅಂಶಗಳಿಂದ ಕಡಲ ಮೇಲ್ಮೈನಲ್ಲಿ ಶೈವಲಗಳ ವಿಪರೀತ ಹೆಚ್ಚಳಕ್ಕೆ ಕಾರಣವಾಗುತ್ತವೆ.ಒಂದೊಂದು ಕಡೆಯಲ್ಲೂ ಹತ್ತಾರು, ನೂರಾರು ಚದರ ಕಿ.ಮೀ. ವಿಸ್ತಾರಕ್ಕೆ ವ್ಯಾಪಿಸಿ ನಿಲ್ಲುವ ಇಂಥ ದಟ್ಟ ಶೈವಲ ಪದರಗಳು (ಚಿತ್ರ-7 ರಲ್ಲಿ ಗಮನಿಸಿ) ಅವುಗಳು ಮುಚ್ಚಿನಿಂತ ಪ್ರದೇಶಗಳ ಕೆಳಗಿನ ಎಲ್ಲ ಕಡಲ ಜೀವಿಗಳ ಉಸಿರುಗಟ್ಟಿಸುತ್ತವೆ.ಕಡಲ ನೀರಲ್ಲಿ ತೇಲುತ್ತ ಹರಡುವ ಪ್ಲಾಸ್ಟಿಕ್ ಹಾಳೆ-ಕೈಚೀಲಗಳನ್ನು ಜೆಲ್ಲಿ ಮೀನುಗಳೆಂದು ಭಾವಿಸಿ ತಿಮಿಂಗಿಲಗಳು ಕಡಲಾಮೆಗಳು ಅವನ್ನು ನುಂಗಿ ಪ್ರಾಣಬಿಡುತ್ತಿವೆ; ಬಿಸಾಕಿದ ಹರಿದ ಪ್ಲಾಸ್ಟಿಕ್ ಬಲೆಗಳಲ್ಲಿ ಸಿಲುಕಿ ಬಿಡಿಸಿಕೊಳ್ಳಲಾಗದೆ ಸೀಲ್, ಡಾಲ್ಫಿನ್‌ಗಳಂಥ ಪ್ರಾಣಿಗಳು (ಚಿತ್ರ-9) ಸತ್ತು ಕಡಲ ತಳ ಸೇರುತ್ತಿವೆ. ಕಡಲಲ್ಲಿನ ತೈಲ ಭಾವಿಗಳಿಂದ (ಚಿತ್ರ-11) ಮತ್ತು ಭಗ್ನವಾಗುವ ತೈಲ ಟ್ಯಾಂಕರ್‌ಗಳಿಂದ ಸೋರುವ, ಸುರಿದುಹೋಗುವ ಕಚ್ಚಾ ತೈಲ ನೀರಿನ ಮೇಲೆ ತೇಲಿ ಹರಡಿ ಹೇರಳ ಸಾಗರ ಜೀವಿಗಳ ಸಾವಿಗೆ ಕಾರಣವಾಗುತ್ತಿದೆ.ಹುಳಿ ಹೆಚ್ಚಳ: ವಿಧ ವಿಧ ಕೈಗಾರಿಕೆಗಳ ವಿಪರೀತ ವರ್ಧನೆಯಿಂದ ಸಾಗರ ನೀರಿನ ರಾಸಾಯನಿಕ ಗುಣ. ಸಂಯೋಜನೆ ವೇಗವಾಗಿ ಬದಲಾಗುತ್ತಿದೆ; ಅಪಾಯಕಾರಿಯಾಗುವಂತೆ ಮಾರ್ಪಡುತ್ತಿದೆ. ಕೈಗಾರಿಕೆಗಳಿಂದ (ಚಿತ್ರ-4) ಮತ್ತು ಅಸಂಖ್ಯ ವಾಹನಗಳಿಂದ ಹೊಮ್ಮುವ ಇಂಗಾಲದ ಡೈ ಆಕ್ಸೈಡ್‌ನ ಸುಮಾರು ಶೇಕಡ ಇಪ್ಪತ್ತೈದು ಭಾಗವನ್ನು ಕಡಲಿನಾವಾರ ಹೀರುತ್ತಿದೆ.ಹೀಗೆ ಕಡಲಲ್ಲಿ ಬೆರೆವ ಇಂ. ಡೈನಿಂದ ರೂಪುಗೊಳ್ಳುವ ಕಾರ್ಬಾನಿಕ್ ಆಮ್ಲ ಸಾಗರ ನೀರಿನ ಆಮ್ಲೀಯತೆಯನ್ನು ಕ್ರಮೇಣ ಹೆಚ್ಚಿಸುತ್ತಿದೆ. ಎಷ್ಟೆಂದರೆ ಕಳೆದ ಒಂದು ಶತಮಾನದಲ್ಲಿ ಸಾಗರ ಜಲದ ಆಮ್ಲೀಯತೆ ಶೇಕಡ 30 ರಷ್ಟು ಹೆಚ್ಚಿದೆ.ಆಮ್ಲೀಯತಾ ಹೆಚ್ಚಳ ಎಲ್ಲ ಸಾಗರ ಜೀವಿಗಳಿಗೂ ಬಹಳ ಮಾರಕ. ಪರಿಣಾಮವೇನೆಂದರೆ ಮತ್ಸ್ಯಗಳು ಮೃತವಾಗಿ ಮೃದ್ವಂಗಿಗಳ ಚಿಪ್ಪುಗಳು ಕರಗುತ್ತವೆ; ವಾಯುಮಂಡಲಕ್ಕೆ ಭಾರೀ ಪ್ರಮಾಣದಲ್ಲಿ ಆಮ್ಲಜನಕವನ್ನು ತುಂಬುತ್ತಿರುವ ಕಡಲ ಪ್ಲಾಂಕ್ಟನ್ ಸಸ್ಯಗಳು ನಾಶವಾಗುತ್ತವೆ.ಮತ್ಸ್ಯಭಂಡಾರದ ಲೂಟಿ: ಆಹಾರಕ್ಕಾಗಿ ಕಡಲಿನ ಮತ್ಸ್ಯ ಭಂಡಾರವನ್ನೂ ಮತ್ತಿತರ ಪ್ರಾಣಿಗಳನ್ನೂ ಲೆಕ್ಕವಿಲ್ಲದೆ ಲೂಟಿ ಮಾಡುತ್ತಿರುವುದೂ ಸಾಗರ ಸಾಮ್ರಾಜ್ಯದ ಪತನವನ್ನು ಕ್ಷಿಪ್ರಗೊಳಿಸುತ್ತಿದೆ. 1950ರ ದಶಕದಲ್ಲಿ ಕಡಲುಗಳಿಂದ ತೆಗೆಯುತ್ತಿದ್ದ ಮತ್ಸ್ಯ ಪ್ರಮಾಣ ವರ್ಷಕ್ಕೆ ಇಪ್ಪತ್ತು ದಶಲಕ್ಷ ಟನ್ ಆಗಿತ್ತು (ಚಿತ್ರ-3) ಈಗ ಈ ಪ್ರಮಾಣ ಒಂದು ನೂರ ಇಪ್ಪತ್ತು ದಶಲಕ್ಷ ಟನ್ ಮುಟ್ಟಿದೆ.ಜೊತೆಗೆ ಮುವ್ವತ್ತು ದಶಲಕ್ಷ ಟನ್‌ಗಳಷ್ಟು ಇತರ ಪ್ರಾಣಿಗಳನ್ನೂ (ಕಡಲಾಮೆ, ಸೀಗಡಿ, ಮೃದ್ವಂಗಿಗಳು ಇತ್ಯಾದಿ) ಹೊರತೆಗೆಯಲಾಗುತ್ತಿದೆ. ದುರಂತ ಏನೆಂದರೆ ರಾಕ್ಷಸ ವಿಸ್ತಾರದ `ಡ್ರಿಫ್ಟ್‌ನೆಟ್~ಗಳನ್ನು ಬಳಸಿ ಆಹಾರ ಪ್ರಾಣಿಗಳನ್ನು ಹೀಗೆ ಸಂಗ್ರಹಿಸುವಾಗ ಆಹಾರವಾಗಿ ಬಳಸದ ಪ್ರಾಣಿಗಳೂ ಭಾರೀ ಪ್ರಮಾಣದಲ್ಲಿ ಬಲೆಗೆ ಸಿಲುಕಿ ಸಾಯುತ್ತವೆ.ಅವನ್ನೆಲ್ಲ ಕಡಲಿಗೆ ಬಿಸಾಕಲಾಗುತ್ತದೆ. ಹೀಗೆ `ಕಸ~ವಾಗುವ ಪ್ರಾಣಿಗಳ ಪ್ರಮಾಣ ವಾರ್ಷಿಕ ಸರಾಸರಿ 7.5 ದಶಲಕ್ಷ ಟನ್! ಚೇತರಿಸಿಕೊಳ್ಳಲಾಗದ ಇಂಥ ಲೂಟಿ ಸಾವಿರಾರು ಸಾಗರ ಪ್ರಭೇಧಗಳನ್ನು ನಿರ್ನಾಮಗೊಳಿಸಿದೆ. ಇದೇ ಪ್ರಳಯ ಮುನ್ನಡೆದೇ ಇದೆ.ಭೂ ತಾಪ ಏರಿಕೆ: ಆಧುನಿಕ ಮಾನವನ ಕೈಗಾರಿಕಾ ಚಟುವಟಿಕೆಗಳೇ ಭೂತಾಪ ದಿನೇ ದಿನೇ ಹೆಚ್ಚಲೂ ಕಾರಣವಾಗಿರುವುದು ಎಲ್ಲರಿಗೂ ತಿಳಿದದ್ದೇ. ಭೂ ತಾಪದ ಹೆಚ್ಚಳದ ಪರಿಣಾಮಗಳು ಕಡಲಲ್ಲಿ ಇಬ್ಬಗೆಗಳಲ್ಲಾಗುತ್ತಿದೆ. ಮೊದಲಿಗೆ ಧ್ರುವ ಪ್ರದೇಶಗಳ ಹಿಮರಾಶಿ ಕರಗುತ್ತ ಸಾಗರಗಳ ನೀರಿನ ಮಟ್ಟ ನಿಧಾನವಾಗಿ ಏರುತ್ತಿದೆ. ಎರಡನೆಯದಾಗಿ ಕಡಲ ಜಲದ ಉಷ್ಣತೆಯೂ ಹೆಚ್ಚುತ್ತಿದೆ.ಈ ಎರಡೂ ಪರಿಣಾಮಗಳು ಕಡಲಿನ ಹವಳ ಸಾಮ್ರಾಜ್ಯವನ್ನು ಕ್ಷಿಪ್ರವಾಗಿ ನಾಶಗೊಳಿಸುತ್ತಿವೆ. ಸಾಗರ ಮಟ್ಟದ ಹೆಚ್ಚಳದಿಂದ ಹವಳ ಲೋಕಗಳನ್ನು ತಲುಪುವ ಸೂರ್ಯರಶ್ಮಿ ಕಡಿವೆುಯಾಗುತ್ತದೆ. ಸಾಗರ ಜಲದ ತಾಪದ ಏರಿಕೆಯಿಂದ ಹವಳ ಲೋಕಗಳಲ್ಲಿನ ಮೈಕ್ರೋಬ್‌ಗಳ ದಟ್ಟಣೆ ಹೆಚ್ಚುತ್ತದೆ.

 

ಈ ಎರಡೂ ಕಾರಣಗಳಿಂದ ಹವಳಗಳನ್ನು ಆವರಿಸಿ, ದ್ಯುತಿ ಸಂಶ್ಲೇಷಣೆ ನಡೆಸಿ, ಇಡೀ ಹವಳ ಸಾಮ್ರಾಜ್ಯಕ್ಕೆ ಆಹಾರ ಒದಗಿಸುತ್ತಿರುವ ವಿಶಿಷ್ಟ ಶೈವಲಗಳು ಸಾಯತೊಡಗುತ್ತವೆ. ಹವಳ ರಾಶಿಗಳೆಲ್ಲ ವರ್ಣರಹಿತವಾಗಿ, ಹವಳದ ಜೀವಿಗಳೆಲ್ಲ ಸಾಯುತ್ತವೆ (ಚಿತ್ರ-12).

 

ಕಡಲ ನೀರಿನ ಆಮ್ಲೀಯತೆಯ ಆಧಿಕ್ಯವೂ ಇದೇ ಪರಿಣಾಮ ತರುತ್ತದೆ. `ಕಡಲಿನ ಒಡಲಿನ ವೃಷ್ಟಿವನ~ ಎಂದೇ ಕರೆವಷ್ಟು ನಿಬಿಡ ವೈವಿಧ್ಯಮಯ ಜೀವಾವಾರವಾಗಿರುವ ಹವಳ ಲೋಕಗಳ ನಾಶ ಇಡೀ ಸಾಗರ ಜೀವಜಾಲಕ್ಕೇ ಅಪಾಯ ತರುತ್ತದೆ.`ಕಾರಲ್ ಬ್ಲೀಚಿಂಗ್~ ಎಂಬ ಈ ಮಾನವ ಮೂಲ ಹಾನಿಕಾರಕ ವಿದ್ಯಮಾನಕ್ಕೆ ಕಳೆದ ಇಪ್ಪತ್ತೇ ವರ್ಷಗಳಲ್ಲಿ ಒಟ್ಟೂ ಹವಳ ಸಾಮ್ರಾಜ್ಯದ ಶೇಕಡ ಮುವ್ವತ್ತು ಭಾಗ ಬಲಿಯಾಗಿದೆ!

ಈ ಎಲ್ಲ ಹಾವಳಿಗಳ ಒಟ್ಟೂ ಪರಿಣಾಮ ಸಾಗರ ಸಾಮ್ರಾಜ್ಯದ ಪತನ! ಎಂಥ ದುಸ್ಥಿತಿ! ಅಲ್ಲವೇ? 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry