ಪತಿ ಪರಮೇಶ್ವರ ಆಗಿ ಉಳಿದಿಲ್ಲ

7

ಪತಿ ಪರಮೇಶ್ವರ ಆಗಿ ಉಳಿದಿಲ್ಲ

Published:
Updated:

ತನ್ನ ಶಕ್ತಿ ಮತ್ತು ಹಕ್ಕುಗಳ ಬಗ್ಗೆ ಅರಿತುಕೊಂಡಿರುವ ಆಧುನಿಕ ಮಹಿಳೆ ಸಾಕಷ್ಟು ಬದಲಾಗಿದ್ದಾಳೆ. ಈ ಬದಲಾವಣೆ ನಗರ ಪ್ರದೇಶಕ್ಕೆ ಹೆಚ್ಚು ಅನ್ವಯಿಸುತ್ತದೆ. ಗ್ರಾಮೀಣ ಭಾಗದ ಮಹಿಳೆ ಇನ್ನೂ ಬದಲಾಗಬೇಕಿದೆ. ಇಂತಹ ಬೆಳವಣಿಗೆಗೆ ಕಿಡಿ ಹಚ್ಚುವುದು ಆರ್ಥಿಕ ಸ್ವಾವಲಂಬನೆ. ಆರ್ಥಿಕ ಸ್ವಾವಲಂಬಿ ಮಹಿಳೆಗೆ ‘ಪತಿ ಪರಮೇಶ್ವರ ಆಗಿ ಉಳಿದಿಲ್ಲ’ .ಮಹಿಳೆಯರಲ್ಲಿ ಮೂಡಿರುವ ಅರಿವನ್ನು ಗಮನಿಸಿದರೆ ಆಕೆ ಯಾವ ಪ್ರಮಾಣದಲ್ಲಿ ಬದಲಾವಣೆ ಆಗಿದ್ದಾಳೆ ಎಂದು ತಿಳಿದುಕೊಳ್ಳಬಹುದು. ಹಕ್ಕು- ಗೌರವಕ್ಕೆ ಚ್ಯುತಿ ಬಂದರೂ ಸಹಿಸಿಕೊಂಡು ಮನೆಯ ಮೂಲೆ ಸೇರುತ್ತಿದ್ದ ಕಾಲ ಈಗ ಬದಲಾಗಿದೆ. ಸಂವಿಧಾನದ ಪ್ರಕಾರ ಪುರುಷನಷ್ಟೇ ಸಮಾನ ಎಂದು ಅರಿತಿದ್ದಾಳೆ.ಅದಕ್ಕೆ ಧಕ್ಕೆ ಆದಾಗ ಆಕೆ ಕಾನೂನು ರೀತಿ ಹೋರಾಟ ನಡೆಸುತ್ತಾಳೆ. ‘ನಾನು ಚಿತ್ರದುರ್ಗ, ದಾವಣಗೆರೆಯಲ್ಲಿ ಎಸ್ಟಿಯಾಗಿದ್ದಾಗ ಇಂತಹ ಹಲವು ಘಟನೆಗಳು ನಡೆದಿವೆ. ಒಂಟಿಯಾಗಿ ಹೋರಾಟ ಮಾಡಲು ಇನ್ನೂ ಅಂಜುವ ಮಹಿಳೆ ಸಂಘಟನೆಯ ಮೂಲಕ ನ್ಯಾಯಕ್ಕಾಗಿ ಹೋರಾಟ ಮಾಡಿದ್ದನ್ನು ಕಂಡಿದ್ದೇನೆ. ಮಹಿಳೆಯರಲ್ಲಿನ ಜಾಗೃತಿಯ ಅರಿವು ಮತ್ತು ಹೋರಾಟ ಮನೋಭಾವದ ಅರಿವು ಆಗಿದ್ದು ಆಗಲೇ’ ಎಂದು ಅಲೋಕ್ ಕುಮಾರ್ ಹೇಳಿದರು.ನಗರ ಪ್ರದೇಶದಲ್ಲಿ ಮಹಿಳಾ ಆರ್ಥಿಕ ಸ್ವಾವಲಂಬನೆಯ ಪ್ರಮಾಣ ಅಧಿಕವಿದೆ. ಆದರೆ ಗ್ರಾಮೀಣ ಭಾಗದಲ್ಲಿ ಇದು ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ ಎನಿಸುತ್ತದೆ. ಸ್ವಸಹಾಯ ಗುಂಪುಗಳು, ಸ್ತ್ರೀ ಶಕ್ತಿ ಗುಂಪುಗಳ ರಚನೆಯ ಹೊರತಾಗಿಯೂ ಆರ್ಥಿಕ ಸ್ವಾವಲಂಬನೆ ಹೆಚ್ಚಿನ ಪ್ರಮಾಣದಲ್ಲಿ ಆಗಿಲ್ಲ. ಕಾನೂನು ಸಹ ಮಹಿಳೆಯರಿಗೆ ಪೂರಕವಾಗಿರುವುದನ್ನು ಗಮನಿಸಬಹುದು. ಕೆಲಸ ಮಾಡುವ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಅಧಿಕವಾಗುತ್ತಿತ್ತು, ಇದಕ್ಕೆ ಕಡಿವಾಣ ಹಾಕಲೆಂದೇ ಲೈಂಗಿಕ ದೌರ್ಜನ್ಯದ ವ್ಯಾಖ್ಯೆಯನ್ನೇ ಬದಲಾಯಿಸಲಾಗಿದೆ. ಕಾನೂನಿನ ತಿದ್ದುಪಡಿಯನ್ನೂ ಮಾಡಲಾಗಿದೆ. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಮೂಲಕ ಕುಟುಂಬದ ಒಳಗೂ ಆಕೆಗೆ ರಕ್ಷಣೆ ನೀಡಲು ಯತ್ನಿಸಲಾಗಿದೆ. ರಾಷ್ಟ್ರೀಯ ಮತ್ತು ರಾಜ್ಯ ಮಹಿಳಾ ಆಯೋಗಗಳು ಮಹಿಳೆಯರ ನೆರವಿಗೆ ನಿಂತಿರುವುದು ಅನುಕೂಲಕರವಾಗಿದೆ.ಬದಲಾದ ಸನ್ನಿವೇಶದಲ್ಲಿ ಮಹಿಳೆ ಮತ್ತು ಪುರುಷನ ಸಂಬಂಧದಲ್ಲಿಯೂ ಪೂರಕ ಬದಲಾವಣೆ ಆಗಿದೆ. ಇಂತಹ ಬೆಳವಣಿಗೆಯನ್ನು ಪುರುಷ ಸಕಾರಾತ್ಮವಾಗಿ ಸ್ವೀಕರಿಸಿದ್ದಾನೆ ಎಂದೇ ಹೇಳಬಹುದು. ಮೊದಲು ಪತ್ನಿ ಕೆಲಸಕ್ಕೆ ಹೋಗಲಿಚ್ಛಿಸಿದರೂ ಕಳುಹಿಸಲು ಹಿಂದೇಟು ಹಾಕುವ ಸನ್ನಿವೇಶವಿತ್ತು. ಈಗ ವಿದ್ಯಾವಂತ ಮಹಿಳೆ ಉದ್ಯೋಗ ಮಾಡುವುದಾದರೆ ಪೋಷಕರು ಅಥವಾ ಪತಿಯಿಂದ ಬೆಂಬಲ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ವೈಯಕ್ತಿಕ ಸಂಬಂಧದಲ್ಲಿ ಕೆಲ ನಕಾರಾತ್ಮಕ ಬದಲಾವಣೆ ಆಗಿರುವುದನ್ನು ಅಲ್ಲಗಳೆಯುವಂತಿಲ್ಲ. ಬದಲಾದ ಮಹಿಳೆಯನ್ನು ಸಶಕ್ತ ಸ್ತ್ರೀ ಎಂದು ಹೇಳಬಹುದು. ಎಲ್ಲ ರಂಗಗಳಲ್ಲೂ ಪುರುಷನಿಗೆ ಸಮಾನವಾಗಿ ನಿಲ್ಲಬಲ್ಲ ಹೆಣ್ಣು ಎಂದು ಆಕೆಯನ್ನು ಬಣ್ಣಿಸಬಹುದು.ಆದರ್ಶ- ಮಹಿಳೆ ಪುರುಷ ವ್ಯಾಖ್ಯೆ ಒಂದೇ: ಆದರ್ಶ ಮಹಿಳೆ ಮತ್ತು ಪುರುಷನಿಗೆ ಪ್ರತ್ಯೇಕ ವ್ಯಾಖ್ಯೆ ಕೊಡುವ ಅಗತ್ಯವಿಲ್ಲ. ನಮ್ಮದು ಕುಟುಂಬ ವ್ಯವಸ್ಥೆ ಇರುವ ಸಮಾಜ. ವೈಯಕ್ತಿಕ ಗುರಿ ಮತ್ತು ಕುಟುಂಬದ ಗುರಿ ಎರಡನ್ನೂ ಮುಟ್ಟಲು ಯತ್ನಿಸುವವರು ಆದರ್ಶ ಮಹಿಳೆ ಅಥವಾ ಪುರುಷ ಆಗಬಲ್ಲರು. ತಂದೆ - ತಾಯಿ, ಮಕ್ಕಳನ್ನು ಸಾಕಿ ಸಲಹುವ ಜವಾಬ್ದಾರಿ ಮಹಿಳೆ, ಪುರುಷ, ದಂಪತಿ ಮೇಲಿರುತ್ತದೆ. ತಮ್ಮ ವೈಯಕ್ತಿಕ ಸಾಧನೆಗಳ ಜತೆಗೆ ಕುಟುಂಬದ ಬಗ್ಗೆ ಕಾಳಜಿ ವಹಿಸುವವರೇ ಆದರ್ಶ ವ್ಯಕ್ತಿಗಳಾಗುತ್ತಾರೆ. ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳ ಹೊರತಾಗಿಯೂ ಲಿವ್-ಇನ್ ರಿಲೇಷನ್‌ಶಿಪ್‌ಗಳು ಆಧುನಿಕತೆಯ ಸಂಕೇತ ಎನ್ನಬಹುದು. ಸಂಬಂಧಕ್ಕೆ ಕಟ್ಟುಬಿದ್ದು ಸಾಯುವವರೆಗೂ ಜತೆಗೆ ಬಾಳಬೇಕೆಂಬ ಉದ್ದೇಶ ನಿಧಾನವಾಗಿ ಇಲ್ಲವಾಗುತ್ತಿದೆ. ವಿವಾಹ ಮಹಿಳೆಗೆ ಬಂಧನ ಎಂಬ ಪರಿಕಲ್ಪನೆಯೂ ಬದಲಾಗುತ್ತಿದೆ ಎನ್ನಬಹುದು.ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ಮೂರು ರೀತಿ ಗುರುತಿಸಬಹುದು. ಪುರುಷ ಸಿಬ್ಬಂದಿಗೆ ಸಮಾನವಾಗಿ ಕೆಲಸ ಮಾಡುವ, ಅವರಿಗಿಂತಲೂ ಉತ್ತಮವಾಗಿ ಕೆಲಸ ಮಾಡುವ ಮತ್ತು ಆಸಕ್ತಿ ಇಲ್ಲದೆ ಸಂಬಳಕ್ಕೆ ಕೆಲಸ ಮಾಡುವ ಮಹಿಳೆಯರೂ ಇಲ್ಲಿದ್ದಾರೆ.ಇದು ಹಿಂದೆಯೂ ಹೀಗೆಯೇ ಇತ್ತು, ಈಗಲೂ ಬದಲಾಗಿಲ್ಲ ಎಂಬುದು ಅಲೋಕ್ ಅವರ ಅಭಿಪ್ರಾಯ. ಆಧುನಿಕತೆಯನ್ನು ಒಗ್ಗಿಸಿಕೊಳ್ಳು ವುದು ಒಳ್ಳೆಯದು ಆದರೆ ಅತಿರೇಕ ಬೇಡ ಎಂಬುದು ಅವರ ನಿಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry