ಪತಿ ಬಿಡುಗಡೆಗೆ ಕಾದಿರುವ ಪತ್ನಿ ರೇವತಿ

ಮೈಸೂರು: ‘ಜೈಲಲ್ಲಿದ್ದರೆ 15 ದಿನಗಳಿಗೊಮ್ಮೆಯಾದರೂ ಗಂಡ ಅನ್ಬುರಾಜ್ ಭೇಟಿ ಆಗುತ್ತಿತ್ತು. ಮಗಳನ್ನು ಅವರೂ ನೋಡುತ್ತಿದ್ದರು. ಇನ್ನು ಕಷ್ಟ...’ ಎಂದು ಒತ್ತಿ ಬರುತ್ತಿದ್ದ ಅಳುವನ್ನು ತಡೆದುಕೊಂಡು ಹೇಳಿದರು ಕೆ.ರೇವತಿ.
ಸನ್ನಡತೆಯ ಆಧಾರದ ಮೇಲೆ ಗಣರಾಜ್ಯೋತ್ಸವ ದಿನದಂದು ಇಲ್ಲಿನ ಜೈಲಿನಿಂದ ಬಿಡುಗಡೆಗೊಂಡ ರೇವತಿ ಅವರು ಅನ್ಬುರಾಜ್ ಅವರ ಊರಾದ ತಮಿಳುನಾಡಿನ ಈರೋಡು ಜಿಲ್ಲೆಯ ಅಂದಿಯೂರಲ್ಲಿದ್ದು ಶುಕ್ರವಾರ ‘ಪ್ರಜಾವಾಣಿ’ಯೊಂದಿಗೆ ದೂರವಾಣಿ ಮೂಲಕ ಮಾತನಾಡಿದರು.
‘3 ದಿನಗಳಾಯಿತು ಅನ್ಬುರಾಜ್ ಮನೆಯಲ್ಲಿರುವೆ. ಅನ್ಬು ಅವರ ಅಪ್ಪ, ಅಮ್ಮ, ಮೈದುನ ಸಣ್ಣದಾದ ದಿನಸಿ ಅಂಗಡಿ ಇಟ್ಟುಕೊಂಡಿದ್ದಾರೆ. ಮಗಳು ಮುಕ್ತಾ ಎಲ್ಲರೊಂದಿಗೆ ಬೆರೆಯುತ್ತಿಲ್ಲ. ಜೈಲಿಗೆ ಹೊಂದಿಕೊಂಡಿದ್ದಳು. ಕೆಲ ದಿನ ಬೇಕು ಇಲ್ಲಿಗೆ ಹೊಂದಿಕೊಳ್ಳಲು. ಜೈಲಲ್ಲಾದರೆ 15 ದಿನಗಳಿಗೊಮ್ಮೆ ಅರ್ಧ ಗಂಟೆಯಾದರೂ ಅನ್ಬು ಅವರನ್ನು ಭೇಟಿಯಾಗುತ್ತಿದ್ದೆ. ಈಗ ಭೇಟಿಯಾಗಲು 10 ಗಂಟೆಗಳ ಪ್ರಯಾಣ ಮಾಡಬೇಕು’ ಎಂದು ಬೇಸರ ವ್ಯಕ್ತಪಡಿಸಿದರು.
‘ನನ್ನವರೆಂದು ಯಾರೂ ಇಲ್ಲ. ಚಿಕ್ಕವಯಸ್ಸಿನಲ್ಲಿ ಅಪ್ಪ–ಅಮ್ಮ ತೀರಿಕೊಂಡರು. ಸಂಬಂಧಿಕರು ಚೆನ್ನೈನಿಂದ ಬೆಂಗಳೂರಿಗೆ ಯಾರದೋ ಮನೆಯಲ್ಲಿ ಬಿಟ್ಟರು. ಆಕೆ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದರು. ಚಿನ್ನಾಭರಣದ ಆಸೆ ತೋರಿಸಿದರು. ಹೊರದೇಶಕ್ಕೆ ಕಳುಹಿಸುವುದಾಗಿ ಭರವಸೆ ನೀಡಿದರು. ಒಪ್ಪದಾಗ ಚಾಕುವಿನಿಂದ ಇರಿಯುವುದಾಗಿ ಹೆದರಿಸಿದರು. ಅದೇ ಚಾಕುವಿನಿಂದ ಅವರನ್ನು ಗಾಯಗೊಳಿಸಿದಾಗ ಪ್ರಜ್ಞೆತಪ್ಪಿ ಬಿದ್ದುಬಿಟ್ಟೆ. ಕಣ್ಣು ಬಿಟ್ಟಾಗ ಆಸ್ಪತ್ರೆಯಲ್ಲಿದ್ದೆ. ಆಕೆ ಸತ್ತುಹೋಗಿದ್ದಳು. ಆಗ ನನಗೆ 16 ವರ್ಷ. ಶಿಕ್ಷೆಯಾಗಿ ಮೈಸೂರಿಗೆ ಬಂದೆ. ಕನ್ನಡ ಮಾತನಾಡಲು, ಓದಲು ಕಲಿತೆ. 13 ವರ್ಷಗಳಾಯಿತು. ಈಗ ಬಿಡು ಗಡೆಯಾಗಿದೆ’ ಎಂದು ನಿಟ್ಟುಸಿರು ಬಿಟ್ಟರು.
‘ಜೈಲಲ್ಲಿದ್ದಾಗ ಹೊಲಿಗೆ ತರಬೇತಿ ಪಡೆದೆ. ಅನ್ಬು ಅವರ ಪರಿಚಯವಾಗಿ ಪೆರೋಲ್ ಮೇಲೆ ಊರಿಗೆ ಹೋದಾಗ ಮದುವೆ ಮಾಡಿಕೊಂಡೆವು. 9 ತಿಂಗಳ ಹಿಂದೆ ಮುಕ್ತಾ ಹುಟ್ಟಿದಳು’ ಎಂದು ಸಮಾಧಾನಪಟ್ಟರು.
‘ಅನ್ಬು ಅವರು 18 ವರ್ಷಗಳಿಂದ ಮೈಸೂರಿನ ಜೈಲಲ್ಲಿದ್ದಾರೆ. ಅವರಿಗೂ ಆಗ 18 ತುಂಬಿರಲಿಲ್ಲ. ಅವರ ಊರಿನ ಕಾಡಿನ ಬಳಿ ತಿಂಡಿ ತಿನ್ನಲು ಹೋದಾಗ ವೀರಪ್ಪನ್ ತಂಡ ನೋಡಿ ಹಿಡಿದುಕೊಂಡಿತು. ಅಲ್ಲಿಂದ ವಾಪಸು ಮನೆಯ ಬಳಿ ಹೋದಾಗ ಎಸ್ಟಿಎಫ್ನವರು ಇದ್ದರು. ಅವರನ್ನು ನೋಡಿ ಹೆದರಿಕೊಂಡು ವಾಪಸು ವೀರಪ್ಪನ್ ಬಳಿ ಹೋದರು. ಚಾಮರಾಜನಗರ ಜಿಲ್ಲೆಯ ಅರಣ್ಯ ಇಲಾಖೆಯ ಗಾರ್ಡ್ ಅಪಹರಣ ಪ್ರಕರಣದಲ್ಲಿ ವೀರಪ್ಪನ್ ತಂಡದಲ್ಲಿ ಅನ್ಬು ಇದ್ದರು ಎನ್ನುವ ಕಾರಣಕ್ಕೆ ಶರಣಾಗತಿಯಾದ ನಂತರ ಮೈಸೂರು ಜೈಲಿಗೆ ವರ್ಗಾಯಿಸಲಾಯಿತು’ ಎಂದು ಸ್ಮರಿಸಿಕೊಂಡರು.
‘ಅವರು ಮೈಸೂರಿಗೆ ಜೈಲಿಗೆ ಹೋದಾಗ ಕನ್ನಡ ಬರುತ್ತಿರಲಿಲ್ಲ. ಕನ್ನಡ ಮಾತನಾಡಲು ಕಲಿತು, ಓದಲು ಶುರು ಮಾಡಿದರು. ನಂತರ ರಂಗಾಯಣದ ಕಲಾವಿದ ಹುಲಗಪ್ಪ ಕಟ್ಟಿಮನಿ ಅವರು ಆಡಿಸಿದ ನಾಟಕಗಳಲ್ಲಿ ಇಬ್ಬರೂ ಪಾತ್ರ ಮಾಡಿದೆವು. ಇಬ್ಬರ ವ್ಯಕ್ತಿತ್ವದಲ್ಲೂ ಬದಲಾವಣೆಯಾಗಿದೆ. ನಾಟಕ ಆಡುವ ಮುನ್ನ ಹೇಗೆ ಮಾತನಾಡಬೇಕೆಂದು ಗೊತ್ತಾಗಲಿಲ್ಲ. ನಾಟಕಕ್ಕೂ ಮುನ್ನ ನಡೆಯುತ್ತಿದ್ದ ತಾಲೀಮಿನಲ್ಲಿ ಅನ್ಬು ಸಿಗುತ್ತಿದ್ದರು. ಆಮೇಲೆ ನಾಟಕ ವಾಡುವಾಗ ಬೇರೆ ಬೇರೆ ಊರುಗಳನ್ನು ನೋಡಿದೆ. ಧಾರವಾಡ, ಬೆಳಗಾವಿ, ಬೆಂಗಳೂರಿನ ಕೈದಿಗಳನ್ನು ಕಂಡು ಮಾತನಾಡಿದೆ. ಅಲ್ಲಿನವರು ಹೇಳುತ್ತಿದ್ದ ಅವರ ಜೀವನದ ಕಷ್ಟಕ್ಕಿಂತ ನನ್ನದೇನೂ ಅಲ್ಲ ಎಂದು ಸಮಾಧಾನಪಟ್ಟು ಕೊಳ್ಳುತ್ತಿದ್ದೆ’ ಎಂದು ವಿವರಿಸಿದರು.
‘ಸನ್ನಡತೆಯ ಆಧಾರದ ಮೇಲೆ ಕೈದಿಗಳನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ಆದರೆ, ಯಾವೊಂದು ಅಪರಾಧ ಮಾಡದ ಅನ್ಬು ಅವರ ಬಿಡುಗಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ ಅವರು ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಸದ್ಯ ದಲ್ಲೇ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಕಂಡು ಮನವಿ ಮಾಡಿಕೊಳ್ಳುವೆ. 18 ವರ್ಷಗಳಿಂದ ಜೈಲಲ್ಲಿರುವ ಅನ್ಬು ಅವರು ಬಿಡುಗಡೆಯಾದರೆ ಉಳಿದ ಜೀವನ ವನ್ನು ಮಗಳು ಮುಕ್ತಾಳೊಟ್ಟಿಗೆ ಕಳೆಯುತ್ತೇವೆ’ ಎಂದು ಗದ್ಗದಿತರಾದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.