ಪತ್ನಿಗೆ ಎಂಟು ತಿಂಗಳಿಂದ ಗೃಹ ಬಂಧನದಲ್ಲಿಟ್ಟು ಹಿಂಸೆ

ಮಂಗಳವಾರ, ಜೂಲೈ 16, 2019
26 °C

ಪತ್ನಿಗೆ ಎಂಟು ತಿಂಗಳಿಂದ ಗೃಹ ಬಂಧನದಲ್ಲಿಟ್ಟು ಹಿಂಸೆ

Published:
Updated:

ಬೆಂಗಳೂರು: ವ್ಯಕ್ತಿಯೊಬ್ಬ ಪತ್ನಿಯನ್ನು 8 ತಿಂಗಳುಗಳಿಂದ ಗೃಹ ಬಂಧನದಲ್ಲಿಟ್ಟು ಮಾನಸಿಕ ಹಿಂಸೆ ನೀಡಿರುವ ಘಟನೆ ನಗರದ ಮಲ್ಲೇಶ್ವರದಲ್ಲಿ ನಡೆದಿದೆ. ಈ ಬಗ್ಗೆ ವೈಯಾಲಿಕಾವಲ್ ಪೊಲೀಸರು ಮಲ್ಲೇಶ್ವರದ ಪೈಪ್‌ಲೈನ್ ರಸ್ತೆಯ 6ನೇ ಅಡ್ಡರಸ್ತೆ ನಿವಾಸಿ ಚಂದ್ರಶೇಖರ್ (32) ಎಂಬಾತನನ್ನು ಬಂಧಿಸಿದ್ದಾರೆ.ಮೂಲತಃ ಉಡುಪಿ ತಾಲ್ಲೂಕಿನ ಚಂದ್ರಶೇಖರ್, ಸಂಬಂಧಿಕರ ಮಗಳೇ ಆದ ಉಷಾ ಅವರನ್ನು 2004ರಲ್ಲಿ ವಿವಾಹವಾಗಿದ್ದ. ಮಲ್ಲೇಶ್ವರದಲ್ಲಿ ಬೀಡಾ ಅಂಗಡಿ ಇಟ್ಟುಕೊಂಡಿದ್ದ ಆತ ಮದುವೆಯ ನಂತರ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಪೈಪ್‌ಲೈನ್ ರಸ್ತೆಯ ಬಾಡಿಗೆ ಮನೆಗೆ ಬಂದು ನೆಲೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಕೆಲ ವರ್ಷಗಳ ಹಿಂದೆ ಪತ್ನಿ ಮತ್ತು ಮಕ್ಕಳನ್ನು ಸ್ವಂತ ಊರಿಗೆ ಕಳುಹಿಸಿದ ಆತ ಬೇರೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಅಲ್ಲದೇ ಆಕೆೆಯನ್ನು ಮನೆಗೆ ಕರೆದು ಕೊಂಡು ಬಂದು ಅವಳ ಜತೆಯೇ ಸಂಸಾರ ಮಾಡಲಾರಂಭಿಸಿದ್ದ. ಈ ವಿಷಯ ತಿಳಿದ ಚಂದ್ರಶೇಖರ್‌ನ ಪೋಷಕರು ಎಂಟು ತಿಂಗಳ ಹಿಂದೆ ಉಷಾ ಅವರನ್ನು ಆತನೊಂದಿಗೆ ಬೆಂಗಳೂರಿಗೆ ಕಳುಹಿಸಿದ್ದರು. ಆತನ ಮಕ್ಕಳು ಮಾತ್ರ ಅಜ್ಜಿ ಮನೆಯಲ್ಲೇ ಉಳಿದುಕೊಂಡಿದ್ದರು ಎಂದು ಹೇಳಿದ್ದಾರೆ.`ಪತ್ನಿಯನ್ನು ನಗರಕ್ಕೆ ಕರೆದುಕೊಂಡು ಬಂದ ದಿನದಿಂದಲೂ ಆತ ಅವರನ್ನು ಮನೆಯಲ್ಲೇ ಕೂಡಿಹಾಕಿದ್ದ, ಹೊರಗೆ ಹೋಗಲು ಅವಕಾಶ  ನೀಡಿರಲಿಲ್ಲ. ಈ ವಿಷಯ ತಿಳಿದ ಅಕ್ಕಪಕ್ಕದ ಮನೆಯವರು ಠಾಣೆಗೆ ಬುಧವಾರ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಆತನ ಮನೆ ಬಳಿ ಹೋಗಿ ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂತು~ಎಂದು ವೈಯಾಲಿಕಾವಲ್ ಇನ್‌ಸ್ಪೆಕ್ಟರ್ ಅಬ್ದುಲ್ ಖಾದರ್ `ಪ್ರಜಾವಾಣಿ~ಗೆ ತಿಳಿಸಿದರು.

`ಪತ್ನಿ ಮಾನಸಿಕವಾಗಿ ಅಸ್ವಸ್ಥಳಾಗಿದ್ದಳು. ಆದ ಕಾರಣದಿಂದಲೇ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿದ್ದೆ.ಅಲ್ಲದೇ ಉಡುಪಿಯಲ್ಲಿ ಮನೋವೈದ್ಯರಿಂದ ಪತ್ನಿಗೆ ಚಿಕಿತ್ಸೆ ಸಹ ಕೊಡಿಸಿದ್ದೆ~ ಎಂದು ಚಂದ್ರಶೇಖರ್ ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾನೆ.ಘಟನೆ ಬಗ್ಗೆ ಉಷಾ ಪೋಷ ಕರಿಗೆ ಮಾಹಿತಿ ನೀಡಲಾಗಿದ್ದು ಅವರ ವಿಚಾರಣೆ ನಡೆಸಿದ ನಂತರ ಉಷಾ  ಮಾನಸಿಕವಾಗಿ ಅಸ್ವಸ್ಥರಾಗಿದ್ದರೆ ಅಥವಾ ಇಲ್ಲವೇ ಎಂದು ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.`ಉಷಾ ಅವರನ್ನು ಗೃಹ ಬಂಧನದಲ್ಲಿಟ್ಟು ಮಾನಸಿಕ ಹಿಂಸೆ ನೀಡಿದ ಆರೋಪದ ಮೇಲೆ ಚಂದ್ರಶೇಖರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ~ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry