ಸೋಮವಾರ, ಏಪ್ರಿಲ್ 12, 2021
23 °C

ಪತ್ನಿ ಅಂಕಪಟ್ಟಿಗಳ ನಕಲು: ವಂಚಕನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪತ್ನಿಯ ಅಂಕಪಟ್ಟಿಗಳ ನಕಲು ಪ್ರತಿಗಳ ನೆರವಿನಿಂದ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಪಡೆದು ವಂಚಿಸಿದ್ದ ಆರೋಪದ ಮೇಲೆ ಪಾಪರೆಡ್ಡಿಪಾಳ್ಯದ ನಂದನ್ (33) ಎಂಬಾತನನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ.`ಆರೋಪಿಯು ಪತ್ನಿ ಲತಾ ಅವರ ದ್ವಿತೀಯ ಪಿಯುಸಿ ಮತ್ತು ಬಿ.ಕಾಂ ಪದವಿ ಅಂಕಪಟ್ಟಿಗಳ ನಕಲು ಪ್ರತಿಗಳ ನೆರವಿನಿಂದ ಈ ಕೃತ್ಯ ಎಸಗಿದ್ದ. ಅಂಕಪಟ್ಟಿಯಲ್ಲಿ ಲತಾ ಅವರ ಹೆಸರಿರುವ ಜಾಗದಲ್ಲಿ ಆತ ತನ್ನ ಹೆಸರು ನಮೂದಿಸಿ ಜೆರಾಕ್ಸ್ ಮಾಡಿಸುತ್ತಿದ್ದ. ನಂತರ ಜೆರಾಕ್ಸ್ ಪ್ರತಿಗಳಿಗೆ ನೋಟರಿಯಿಂದ ದೃಢೀಕರಣ ಮಾಡಿಸುತ್ತಿದ್ದ. ಬಳಿಕ ಈ ಅಂಕಪಟ್ಟಿಗಳನ್ನು ಬಳಸಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಪಡೆಯುತ್ತಿದ್ದ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.ಇದೇ ರೀತಿ ಹ್ಯೂಲೆಟ್ ಪ್ಯಾಕರ್ಡ್ (ಎಚ್‌ಪಿ) ಕಂಪೆನಿಯಲ್ಲಿ ಕೆಲಸ ಪಡೆದಿದ್ದ ನಂದನ್, ಆ ಕಂಪೆನಿಯಲ್ಲಿ 2005ರಿಂದ 2008ರವರೆಗೆ ವ್ಯವಸ್ಥಾಪಕನಾಗಿದ್ದ. ಆ ನಂತರ `ಅಮಿಕಾರ್ಪ್~ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿ 2008ರಿಂದ 2011ರವರೆಗೆ ಮಾರಾಟ ವಿಭಾಗದಲ್ಲಿ ನಿರ್ದೇಶಕನಾಗಿದ್ದ. ಬಳಿಕ 2011ರ ಆಗಸ್ಟ್‌ನಲ್ಲಿ ಐಬಿಎಂ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ್ದ ಆತ ಉಪ ಪ್ರಧಾನ ವ್ಯವಸ್ಥಾಪಕನಾಗಿದ್ದ. ಐಬಿಎಂ ಕಂಪೆನಿಯಲ್ಲಿ ಆತನಿಗೆ ಮಾಸಿಕ ಸುಮಾರು ಎರಡು ಲಕ್ಷ ರೂಪಾಯಿ ಸಂಬಳ ಬರುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.ಡಿಪ್ಲೊಮಾ ತರಗತಿಯಲ್ಲಿ ಅನುತ್ತೀರ್ಣನಾಗಿರುವ ನಂದನ್, ಪತ್ನಿಯ ಅಂಕಪಟ್ಟಿಗಳ ನಕಲು ಪ್ರತಿಗಳ ನೆರವಿನಿಂದ ಕೇರಳದ ಭಾರತೀಯ ನಿರ್ವಹಣಾ ಸಂಸ್ಥೆಯಲ್ಲಿ (ಐಐಎಂ) ಪ್ರವೇಶ ಗಿಟ್ಟಿಸಿ ಸ್ನಾತಕೋತ್ತರ ಪದವಿ ಪಡೆದಿದ್ದ. ಆರೋಪಿಯಿಂದ ನಕಲಿ ಅಂಕಪಟ್ಟಿಯ ಪ್ರತಿಗಳನ್ನು ಜಪ್ತಿ ಮಾಡಲಾಗಿದೆ. ಇಂತಹ ದೃಢೀಕೃತ ಅಂಕಪಟ್ಟಿ ಮಾಡಿಕೊಡುವ    ಕೃತಕ್ಕೆ ಸಹಕರಿಸಿದ್ದ ವಕೀಲ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಪತ್ನಿಯಿಂದಲೇ ಪ್ರಕರಣ ಬಯಲು:  ಈ ಕೃತ್ಯದಲ್ಲಿ ಲತಾ ಅವರ ಪಾತ್ರವಿದೆ ಎಂದು ತನಿಖೆಯಿಂದ ಗೊತ್ತಾಗಿದೆ. ಖಾಸಗಿ ಕಂಪೆನಿಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗಿಯಾಗಿರುವ ಲತಾ ಅವರೇ ಪತಿಗೆ ವಂಚನೆಯ ಸಂಚು ರೂಪಿಸಿಕೊಟ್ಟಿದ್ದರು. ಈ ನಡುವೆ ಅವರಿಗೆ, ಪತಿ ಸಹೋದ್ಯೋಗಿ ಮಹಿಳೆಯ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಅನುಮಾನ ಮೂಡಿತ್ತು. ಇದರಿಂದಾಗಿ ಅವರು, ಪತಿಯ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಅಂಕಪಟ್ಟಿಗಳನ್ನು ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ದೂರು ನೀಡಿದ್ದರು. ಈ ದೂರು ಆಧರಿಸಿ ತನಿಖೆ ನಡೆಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.