ಪತ್ನಿ ಕೊಲೆಗಡುಕನಿಗೆ ಜೀವಾವಧಿ ಸಜೆ

7

ಪತ್ನಿ ಕೊಲೆಗಡುಕನಿಗೆ ಜೀವಾವಧಿ ಸಜೆ

Published:
Updated:

ಗುಲ್ಬರ್ಗ: ವಿಮೆ ಆಸೆಗಾಗಿ ಪತ್ನಿಯನ್ನೇ ಕೊಲೆ ಮಾಡಿದ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಒಂದನೇ ಅಪರ ಜಿಲ್ಲಾ ನ್ಯಾಯಾಧೀಶ ಬಸವರಾಜ್ ಸಪ್ಪಣ್ಣನವರ ಶುಕ್ರವಾರ ತೀರ್ಪು ನೀಡಿದ್ದಾರೆ.ಜೇವರ್ಗಿ ತಾಲ್ಲೂಕಿನ ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟನೂರು ಗ್ರಾಮದ ಸಿದ್ಧಲಿಂಗ ಪೀರಪ್ಪ ಕರಕಲ್ ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ. ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತ್ನಿ ಮಂಜುಳಾಳನ್ನು ಕೊಲೆ ಮಾಡಿ ವಿಮಾ ಹಣ ಪಡೆಯುವ ಉದ್ದೇಶದಿಂದ ಕೃತ್ಯವನ್ನು ಎಸಗಿದ್ದಾನೆ ಎನ್ನಲಾಗಿದೆ.ಪತ್ನಿ ಅಪಘಾತದಿಂದ ಸತ್ತರೆ ವಿಮಾ ಹಣ ಸಿಗುತ್ತದೆ ಎಂಬ ದುರಾಸೆಯಿಂದ 19ಮೇ 2010ರಂದು ತಡರಾತ್ರಿ ಸಿದ್ಧಲಿಂಗ ತನ್ನ ಗೆಳೆಯರಾದ ಸಿದ್ದು ಜೆಟ್ಟಪ್ಪ ಹಿಪ್ಪರಗಿ, ಈಶ್ವರ ಮಹಾದೇವಪ್ಪ ಮನಗೂಳಿ, ಬೈಲಪ್ಪ ಅರ್ಜುನ ತುರಾಯಿ ಅವರೊಂದಿಗೆ ಸೇರಿಕೊಂಡು ಪತ್ನಿಯನ್ನು ಕೊಲೆ ಮಾಡಿದ್ದನು.ಪತ್ನಿಯನ್ನು ಕಾರಿನಲ್ಲಿ ಜೇವರ್ಗಿ-ಸಿಂದಗಿ ರಸ್ತೆಯ ಬಳಿ ಕರೆದುಕೊಂಡು ಹೋಗಿ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಹಾಕಿದ್ದನು. ಬಳಿಕ ಆರೋಪಿ ಬೈಲಪ್ಪನಿಗೆ ಕರೆ ಮಾಡಿ, ಜೀಪನ್ನು ತರುವಂತೆ ಹೇಳಿದ್ದನು. ಕಾರಿಗೆ ಜೀಪನ್ನು ಡಿಕ್ಕಿ ಹೊಡಿಸುವ ಮೂಲಕ ಮಂಜುಳಾ ಅಪಘಾತದಿಂದ ಸತ್ತಂತೆ ಘಟನೆ ಸೃಷ್ಟಿ ಮಾಡಿದ್ದನು. ತನಿಖೆಯ ಬಳಿಕ ಈ ವಿಚಾರವು ಹೊರಬಿದ್ದಿತ್ತು. ಇದಕ್ಕೂ ಎರಡು ತಿಂಗಳ ಹಿಂದೆಯೇ ಆರೋಪಿ ತನ್ನ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿ ವಿಫಲನಾಗಿದ್ದನು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೊಲೆಯ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ಮತ್ತು 25,000 ರೂಪಾಯಿ ದಂಡ ಹಾಗೂ ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ್ದಕ್ಕಾಗಿ ಐದು ವರ್ಷ ಕಠಿಣ ಶಿಕ್ಷೆ ಮತ್ತು 10,000 ರೂಪಾಯಿ ದಂಡ ವಿಧಿಸಿದ್ದಾರೆ. ಸರ್ಕಾರಿ ಅಭಿಯೋಜಕ ಜಿ. ಸುದರ್ಶನ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry