ಪತ್ನಿ ಸಾವಿನ ಸುದ್ದಿ ಕೇಳಿ ಪತಿ ಆತ್ಮಹತ್ಯೆ

7

ಪತ್ನಿ ಸಾವಿನ ಸುದ್ದಿ ಕೇಳಿ ಪತಿ ಆತ್ಮಹತ್ಯೆ

Published:
Updated:

ಸುರಪುರ: ಪತ್ನಿ ಸಾವನ್ನಪ್ಪಿದ ಸುದ್ದಿ ಕೇಳಿ ಆಕೆಯ ಪತಿ ಆಸ್ಪತ್ರೆಯ ಐದನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ.ಇಲ್ಲಿನ ಮೇದಾ ಗಲ್ಲಿಯ ಕೃಷ್ಣ ಚವಲಕರ್ (30) ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅವರು ಬೀದರಿನ ಸಾಫ್ಟ್‌ವೇರ್ ಎಂಜಿನಿಯರ್ ಪೂಜಾ (22) ಅವರನ್ನು ಒಂದು ವರ್ಷದ ಹಿಂದೆ ವಿವಾಹವಾಗಿದ್ದರು.ಈ ದಂಪತಿ ಬೆಂಗಳೂರಿನಲ್ಲಿ ಸಂಸಾರ ಮಾಡಿಕೊಂಡಿದ್ದರು. ಪೂಜಾ ಗರ್ಭವತಿಯಾದ ಮೇಲೆ ಹೆರಿಗೆಗೆಂದು ಮೂರು ತಿಂಗಳ ಹಿಂದೆ ತವರು ಬೀದರಿಗೆ ತೆರಳಿದ್ದಳು. ಪತಿಯನ್ನು ಬಿಟ್ಟಿರಲಾರದ ಪತ್ನಿ ಮತ್ತೆ ಬೆಂಗಳೂರಿಗೆ ಬಂದಿದ್ದಳು. ಹೆರಿಗೆ ದಿನಾಂಕ ಒಂದು ವಾರ ಇರುವಾಗಲಷ್ಟೆ ಬೀದರಿಗೆ ಮರಳಿದ್ದಳು. ಕಳೆದ ತಿಂಗಳು 14 ರಂದು ಗಂಡು ಮಗು ಜನಸಿತ್ತು.  ಬಾಣಂತಿಗೆ 15 ದಿವಸದ ಹಿಂದೆ ಜ್ವರ ಕಾಣಿಸಿಕೊಂಡಿತ್ತು.  ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಿಗ್ಗೆ ಪೂಜಾ ಇಹಲೋಕ ತ್ಯಜಿಸಿದಳು.

ಪತ್ನಿ ಸಾವಿನಿಂದ ದಿಗ್ಭ್ರಾಂತನಾದ ಪತಿ ಆಸ್ಪತ್ರೆಯ ಐದನೇ ಅಂತಸ್ತಿನಿಂದ ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗಿದೆ. ದಂಪತಿಯ ಅಂತ್ಯಕ್ರಿಯೆ ಬುಧವಾರ ಸಂಜೆ ಸುರಪುರದಲ್ಲಿ ನೆರವೇರಿತು.ಬಾಲಕಿ ಆತ್ಮಹತ್ಯೆ: ಬಾಲಕಿಯೊಬ್ಬಳು ಅಪಾರ್ಟ್‌ಮೆಂಟ್‌ನ ಏಳನೇ ಮಹಡಿಯಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜೆ.ಪಿ.ನಗರ ಏಳನೇ ಹಂತದ ಪುಟ್ಟೇನಹಳ್ಳಿಯಲ್ಲಿ ಬುಧವಾರ ಸಂಜೆ ನಡೆದಿದೆ.ಆದರ್ಶ ಅಪಾರ್ಟ್‌ಮೆಂಟ್ ನಿವಾಸಿ ಮುರಳಿ ಎಂಬುವರ ಪುತ್ರಿ ಎಂ.ತನಯಾ (15) ಆತ್ಮಹತ್ಯೆ ಮಾಡಿಕೊಂಡ ಬಾಲಕಿ. ಆಕೆ ಕುಮಾರನ್ಸ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಳು.‘ಮುಂದಿನ ತಿಂಗಳಿನಿಂದ ಪರೀಕ್ಷೆ ಆರಂಭವಾಗಲಿದ್ದು, ಸರಿಯಾಗಿ ಓದಿಲ್ಲ ಎಂದು ತನಯಾ ಹೇಳುತ್ತಿದ್ದಳು. ಪರೀಕ್ಷೆಗೆ ಸಿದ್ಧಳಾಗದ ಕಾರಣ ಆತಂಕಗೊಂಡು ಮಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೋಷಕರು ಹೇಳಿಕೆ ಕೊಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪತಿ ಕತ್ತು ಕೊಯ್ದುಕೊಲೆ: ಪತ್ನಿ ಬಂಧನ

ಬೆಂಗಳೂರು:ನಗರದ ಗಾರ್ವೆಬಾವಿಪಾಳ್ಯದ ಬಂಡೆಪಾಳ್ಯದಲ್ಲಿ ಪತಿಯನ್ನೇ ಕೊಲೆ ಮಾಡಿದ್ದ ಮಹಿಳೆಯೊಬ್ಬಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.ಲಕ್ಷ್ಮಿ (28) ಬಂಧಿತ ಆರೋಪಿ. ಆಕೆ ಪತಿ ರಾಜ ಎಂಬಾತನನ್ನು ಫೆ.17ರಂದು ಕೊಲೆ ಮಾಡಿದ್ದಳು. ಕೊಲೆ ಘಟನೆ ನಡೆದ ಸಂದರ್ಭದಲ್ಲಿ ವಿಚಾರಣೆ ಮಾಡಿದಾಗ ‘ಪತಿಯೇ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ’ ಎಂದು ಲಕ್ಷ್ಮಿ ಹೇಳಿಕೆ ಕೊಟ್ಟಿದ್ದಳು. ಈ ಹಿನ್ನೆಲೆಯಲ್ಲಿ ಮೊದಲು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ‘ರಾಜ ಆತ್ಮಹತ್ಯೆ ಮಾಡಿಕೊಂಡಿಲ್ಲ. ಬದಲಿಗೆ ಆತನನ್ನು ಕೊಲೆ ಮಾಡಲಾಗಿದೆ’ ಎಂದು ವರದಿ ನೀಡಿದ್ದರು. ಆದ್ದರಿಂದ ಲಕ್ಷ್ಮಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ‘ಪತಿ ಪ್ರತಿನಿತ್ಯ ಪಾನಮತ್ತನಾಗಿ ಬಂದು ಕಿರುಕುಳ ನೀಡುತ್ತಿದ್ದ. ಆದ್ದರಿಂದ ಕಿರುಕುಳ ತಾಳಲಾರದೆ, ಪತಿ ಮಲಗಿದ್ದ ಸಂದರ್ಭದಲ್ಲಿ ನಾನೇ ಚಾಕುವಿನಿಂದ ಆತನ ಕತ್ತು ಕೊಯ್ದು ಕೊಲೆ ಮಾಡಿದೆ ಎಂದು ಹೇಳಿದಳು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಲಕ್ಷ್ಮಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಸ್ನೇಹಿತನಿಂದಲೇ ಕಳವು: ಶಾಸಕ ದೂರು

ಬೆಂಗಳೂರು: ‘ಸ್ನೇಹಿತ ತೋಹಿದ್ ಶೇಖ್ ಎಂಬುವರು ಲಕ್ಷಾಂತರ ರೂ ಮೌಲ್ಯದ ನನ್ನ ಮೊಬೈಲ್ ಮತ್ತು ಕೈಗಡಿಯಾರವನ್ನು ಕಳವು ಮಾಡಿದ್ದಾರೆ’ ಎಂದು ಆರೋಪಿಸಿ ವಿಜಾಪುರ ಜಿಲ್ಲೆ ಇಂಡಿ ಕ್ಷೇತ್ರದ ಮಾಜಿ ಶಾಸಕ ರವಿಕಾಂತ್ ಪಾಟೀಲ್ ಅವರು ಚಾಮರಾಜಪೇಟೆ ಠಾಣೆಯಲ್ಲಿ ಬುಧವಾರ ದೂರು ದಾಖಲಿಸಿದ್ದಾರೆ.‘ಚಾಮರಾಜಪೇಟೆ ಆರನೇ ಮುಖ್ಯರಸ್ತೆಯಲ್ಲಿರುವ ನನ್ನ ಮನೆಗೆ 2009ರಲ್ಲಿ ಬಂದಿದ್ದ ಸೊಲ್ಲಾಪುರದ ಶೇಖ್ ಅವರು ಮನೆಯಲ್ಲಿದ್ದ 6.46 ಲಕ್ಷ ರೂಪಾಯಿ ಮೌಲ್ಯದ ವೆರ್ಟು ಕಂಪೆನಿಯ ಮೊಬೈಲ್ ಫೋನ್ ಮತ್ತು ಯುಲಿಸಿಸ್ ಕಂಪೆನಿಯ 2.80 ಲಕ್ಷ ರೂಪಾಯಿ ಬೆಲೆ ಬಾಳುವ ಕೈಗಡಿಯಾರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆ’ ಎಂದು  ದೂರಿನಲ್ಲಿ ತಿಳಿಸಿದ್ದಾರೆ.‘ಶೇಖ್ ಅವರು ಮನೆಯಿಂದ ಹೋದ ನಂತರ ಕಳವಿನ ಬಗ್ಗೆ  ಗೊತ್ತಾಯಿತು. ತನಿಖೆ ನಡೆಸಿ ಕಳವಾಗಿರುವ ವಸ್ತುಗಳನ್ನು ವಾಪಸ್ ಕೊಡಿಸಬೇಕು’ ಎಂದು  ಪಾಟೀಲ್ ದೂರಿನಲ್ಲಿ ಮನವಿ ಮಾಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry