ಶುಕ್ರವಾರ, ಮೇ 20, 2022
19 °C

ಪತ್ರಕರ್ತನನ್ನು ಹೊರಹಾಕಿದ ನಿತ್ಯಾನಂದ ಶಿಷ್ಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕನ್ನಡದ ಖಾಸಗಿ ಸುದ್ದಿ ವಾಹಿನಿಯೊಂದರ ಪತ್ರಕರ್ತನನ್ನು ಸುದ್ದಿಗೋಷ್ಠಿಯಿಂದ ಹೊರಹಾಕುವಂತೆ ತನ್ನ ಶಿಷ್ಯ ಬಣಕ್ಕೆ ಸೂಚಿಸಿದ ಧ್ಯಾನಪೀಠದ ಪೀಠಾಧ್ಯಕ್ಷ ನಿತ್ಯಾನಂದ ಸ್ವಾಮೀಜಿ. ಪತ್ರಕರ್ತನ ವಿರುದ್ಧ ಹರಿಹಾಯ್ದ ಸ್ವಾಮೀಜಿಯ ಶಿಷ್ಯ ಬಣ. ಆ ಪತ್ರಕರ್ತನನ್ನು ಬಲವಂತವಾಗಿ ಸುದ್ದಿಗೋಷ್ಠಿಯಿಂದ ಹೊರಹಾಕಿದ ಶಿಷ್ಯರು.ನಂತರ ಸುದ್ದಿಗೋಷ್ಠಿಯಿಂದ ಹೊರನಡೆದ ಪತ್ರಕರ್ತರು...ಇವಿಷ್ಟು ಸಂಗತಿಗಳು ನಡೆದದ್ದು ಗುರುವಾರ ಮಧ್ಯಾಹ್ನ ಬಿಡದಿ ಬಳಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ಆಶ್ರಮದಲ್ಲಿ. ಸ್ವಾಮೀಜಿಯ ಶಿಷ್ಯಂದಿರು ಹಾಗೂ ಖಾಸಗಿ ವಾಹಿನಿಯೊಂದರ ಪ್ರತಿನಿಧಿಗಳ ಜತೆ ಈ ವೇಳೆ ವಾಕ್ ಸಮರ ಹಾಗೂ ಮಾತಿನ ಚಕಮಕಿ ನಡೆಯಿತು.ನಿತ್ಯಾನಂದ ಸ್ವಾಮೀಜಿ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬರ ಸಂದರ್ಶನ ಖಾಸಗಿ ವಾಹಿನಿಯೊಂದರಲ್ಲಿ ಇತ್ತೀಚೆಗೆ ಪ್ರಸಾರ ವಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಮತ್ತು ಸ್ಪಷ್ಟನೆ ನೀಡುವ ಉದ್ದೇಶದಿಂದ ಸ್ವಾಮೀಜಿ ಗುರುವಾರ ಆಶ್ರಮದಲ್ಲಿ ಸುದ್ದಿಗೋಷ್ಠಿ ಕರೆದಿದ್ದರು.ಈ ಸಂದರ್ಭದಲ್ಲಿ ವಾಹಿನಿಯೊಂದರ ಪತ್ರಕರ್ತ ಕೇಳಿದ ಪ್ರಶ್ನೆಯೊಂದರಿಂದ `ಅವಾಕ್~ ಆದ ಸ್ವಾಮೀಜಿ ಆ ಪತ್ರಕರ್ತನನ್ನು ಸುದ್ದಿಗೋಷ್ಠಿ ನಡೆಯು ತ್ತಿದ್ದ ಸಭಾಂಗಣದಿಂದ ಹೊರ ಕಳುಹಿಸು ವಂತೆ ತಮ್ಮ ಶಿಷ್ಯ ಬಣಕ್ಕೆ ಆದೇಶಿಸಿದರು. ಕೂಡಲೇ ಅವರ ಮಹಿಳಾ ಹಾಗೂ ಪುರುಷ ಶಿಷ್ಯ ಬಣ ಆಗಮಿಸಿ ಸಂಬಂಧಿಸಿದ ಪತ್ರಕರ್ತನ ಜತೆ ವಾಗ್ವಾದ ನಡೆಸಿ, ಹರಿಹಾಯ್ದರು.ನಂತರ ಏರು ಧ್ವನಿಯಲ್ಲಿ ಇಲ್ಲಿಂದ ಹೊರಹೋಗಬೇಕು ಎಂದು ಸೂಚಿಸಿದರು. `ಸಭೆಗೆ ಬರಲು ನಿಮಗೆ ಅನುಮತಿ ನೀಡಿದವರು ಯಾರು? ನೀವು ನಿಜವಾದ ಪತ್ರ ಕರ್ತರೋ ಅಥವಾ ಅಲ್ಲವೋ? ಯಾರ ಪ್ರತಿ ನಿಧಿಯಾಗಿ ಇಲ್ಲಿಗೆ ಬಂದಿದ್ದೀರಾ ?~ ಎಂದು ಆಕ್ರೋಶದಿಂದ ಪ್ರಶ್ನಿಸಿದರು.ಇದಕ್ಕೆ ಸಮಾಧಾನದಿಂದ ಉತ್ತರಿ ಸಲು ಪತ್ರಕರ್ತ ಮುಂದಾದಾಗ ಅದನ್ನು ಕೇಳದೆ, ಸಭಾಂಗಣದಿಂದ ಹೊರನಡೆ ಯುವಂತೆ ಗದರಿಸಿದರು. ಕೂಡಲೇ ಇನ್ನಷ್ಟು ಭಕ್ತ ಸಮೂಹ ಅಲ್ಲಿಗೆ ಆಗಮಿಸಿ, ಹೊರ ನಡೆಯುವಂತೆ ಪತ್ರಕರ್ತನನ್ನು ದಬಾಯಿಸಿತು. ಕೆಲವರು ಬಲ ಪ್ರಯೋಗ ಮಾಡಲೂ ಮುಂದಾ ದರು. ಆಗ ಆ ಪತ್ರಕರ್ತ ಸಭೆಯಿಂದ ಹೊರ ನಡೆದರು. ತಕ್ಷಣವೇ ಇತರೆ ಎಲ್ಲ ಪತ್ರಕರ್ತರು ಅವರನ್ನು ಹಿಂಬಾಲಿಸಿ ಸುದ್ದಿಗೋಷ್ಠಿಯನ್ನು ಬಹಿಷ್ಕರಿಸಿದರು.ಘಟನೆಗೆ ಕಾರಣವೇನು ?: ನಿತ್ಯಾನಂದ ಸ್ವಾಮೀಜಿ ಅವರಿಗೆ ಸಂಬಂಧಿಸಿದಂತೆ ಅಮೆರಿಕದ ಕೋರ್ಟ್‌ವೊಂದು ಹೊರಡಿ ಸಿದ್ದ `ಸಮನ್ಸ್~ ವಿಷಯ ಕುರಿತು ಖಾಸಗಿ ವಾಹಿನಿಯ ಪತ್ರಕರ್ತ ಪ್ರಸ್ತಾಪಿಸಿದ್ದಕ್ಕೆ ಆಕ್ರೋಶಗೊಂಡ ಸ್ವಾಮೀಜಿ ತಮ್ಮ ಶಿಷ್ಯ ಸಮೂಹಕ್ಕೆ ಆತನನ್ನು ಹೊರ ಕಳುಹಿಸುವಂತೆ ಸೂಚಿಸಿದರು. ಆ ಸಂದರ್ಭದಲ್ಲಿ ಈ ಘಟನೆ ನಡೆಯಿತು.`ಅಮೆರಿಕದಲ್ಲಿ ಇರುವ ಭಾರತೀಯ ಮೂಲದ ವಿನಯ್ ಭಾರದ್ವಾಜ್ ಎಂಬುವರು ನಿತ್ಯಾನಂದ ಸ್ವಾಮೀಜಿ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಅಮೆರಿಕದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ಅಲ್ಲಿನ ನ್ಯಾಯಾಲಯ ಸ್ವಾಮೀಜಿಗೆ `ಸಮನ್ಸ್~ ಜಾರಿಗೊಳಿಸಿದೆ. ಅದು ಸ್ವಾಮೀಜಿಯವರ ಗಮನಕ್ಕೆ ಬಂದಿದೆಯಾ? `ಸಮನ್ಸ್~ ಅನ್ನು ಸ್ವಾಮೀಜಿ ಸ್ವೀಕರಿಸಿದ್ದಾರಾ?~ ಎಂದು ಪತ್ರಕರ್ತ ಕೇಳಿದ ಪ್ರಶ್ನೆಯೇ ಇಷ್ಟೆಲ್ಲ ಘಟನೆ ನಡೆಯಲು ಕಾರಣವಾಯಿತು.`ಆಗ ಉತ್ತರಿಸಿದ ಸ್ವಾಮೀಜಿ ಈ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಕುರಿತು ನನಗೆ ಯಾವುದೇ `ಸಮನ್ಸ್~ ಬಂದಿಲ್ಲ~ ಎಂದರು. ಆಗ ಪತ್ರಕರ್ತ, `ಕೋರ್ಟ್‌ನ `ಸಮನ್ಸ್~ ತೆಗೆದುಕೊಂಡು ಬಂದ ವ್ಯಕ್ತಿಯನ್ನು ಆಶ್ರಮದ ಭದ್ರತಾ ಸಿಬ್ಬಂದಿ ಒಳಗೆ ಬಿಟ್ಟಿಲ್ಲ ಎಂಬ ದೂರು ಇದೆ. ಇದು ನಿಜವೇ?~ ಎಂದು ಕೇಳಿದರು. ಅದಕ್ಕೆ ಸ್ವಾಮೀಜಿ `ಅಂತಹದ್ದೇನೂ ಆಶ್ರಮದಲ್ಲಿ ನಡೆದಿಲ್ಲ. ನ್ಯಾಯಾಲಯ ಸಮನ್ಸ್ ಹೊರಡಿಸಿರುವ ವಿಚಾರ ನನಗೆ ತಿಳಿದಿಲ್ಲ~ ಎಂದರು.ಆಗ ಕೂಡಲೇ ಆ ಪತ್ರಕರ್ತ `ನಿಮಗೆ ನ್ಯಾಯಾಲಯ ಹೊರಡಿಸಿರುವ `ಸಮನ್ಸ್~ ಪ್ರತಿ ನನ್ನ ಬಳಿ ಇದೆ, ನೋಡಿ~ ಎಂದು ಅದನ್ನು ಪ್ರದರ್ಶಿಸಿದ. ಆಗ ಕಕ್ಕಾಬಿಕ್ಕಿಯಾದ ನಿತ್ಯಾನಂದ ಸ್ವಾಮೀಜಿ ಆಸನದಿಂದ ಎದ್ದು, `ಆ ವ್ಯಕ್ತಿ ಇಲ್ಲಿಗೆ ಪತ್ರಕರ್ತನಾಗಿ ಬಂದಿದ್ದಾನೋ ಅಥವಾ ಮತ್ಯಾರ ಪ್ರತಿನಿಧಿಯಾಗಿ ಬಂದಿದ್ದಾನೋ ಗೊತ್ತಿಲ್ಲ. ಆತನನ್ನು ನನ್ನ ಬಳಿ ಬರಲು ಬಿಡಬೇಡಿ. ಮೊದಲು ಇಲ್ಲಿಂದ ಹೊರಹಾಕಿ~ ಎಂದು ಶಿಷ್ಯಗಣಕ್ಕೆ ನಿರ್ದೇಶನ ನೀಡಿದರು. ಆಗಾ ಶಿಷ್ಯರು ಪತ್ರಕರ್ತನ್ನು ಮುತ್ತಿಗೆ ಹಾಕಿದರು.`ನೀನು ನಿಜವಾದ ಪತ್ರಕರ್ತ ಹೌದೋ ಅಲ್ಲವೋ. ಮೊದಲು ನಿನ್ನ ಗುರುತಿನ ಚೀಟಿ ತೋರಿಸು~ ಎಂದು ಶಿಷ್ಯಂದಿರು ಆಕ್ರೋಶ ವ್ಯಕ್ತಪಡಿಸುತ್ತ ಪತ್ರಕರ್ತನನ್ನು ಹೊರಹಾಕಿದರು. ಈ ಘಟನೆಯಿಂದ ಬೇಸರಗೊಂಡ ಇತರ ಪತ್ರಕರ್ತರೂ  ಹೊರನಡೆದರು.ಸಭಾಂಗಣದ ಹೊರಗಡೆ ಸ್ವಾಮೀಜಿ ಶಿಷ್ಯ ಬಣ ಮತ್ತು ಕೆಲ ಮಾಧ್ಯಮಗಳ ಪ್ರತಿನಿಧಿಗಳ ನಡುವೆ `ವಾಕ್ ಸಮರ~ ನಡೆಯಿತು. ಆ ಪತ್ರಕರ್ತ ತಾನು ಪ್ರತಿನಿಧಿಸುತ್ತಿದ್ದ ವಾಹಿನಿಯ ಗುರುತಿನ ಚೀಟಿ ತೋರಿಸಿದ ನಂತರ ಶಿಷ್ಯಂದಿರ ಆಕ್ರೋಶ ಇನ್ನಷ್ಟು ಹೆಚ್ಚಾಯಿತು. ಕಾರಣ ಸ್ವಾಮೀಜಿ ರಾಸಲೀಲೆ ಪ್ರಕರಣ ಕುರಿತು ಮಹಿಳೆಯೊಬ್ಬರ ಸಂದರ್ಶನ ಪ್ರಸಾರ ಮಾಡಿದ ವಾಹಿನಿಯ ಪ್ರತಿನಿಧಿ ಆ ಪತ್ರಕರ್ತನಾಗಿದ್ದುದು ಶಿಷ್ಯ ಬಣದ ಆಕ್ರೋಶ ಹೆಚ್ಚಿಸಲು ಕಾರಣವಾಗಿತ್ತು.  ಘಟನೆ ಕುರಿತು ಎರಡೂ ಕಡೆಯವರು ಬಿಡದಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.