ಭಾನುವಾರ, ಏಪ್ರಿಲ್ 18, 2021
31 °C

ಪತ್ರಕರ್ತನ ಬಂಧನಕ್ಕೆ ವ್ಯಾಪಕ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಗರದ ಪಡೀಲ್‌ನ `ಮಾರ್ನಿಂಗ್ ಮಿಸ್ಟ್~ ಹೋಂ ಸ್ಟೇಯಲ್ಲಿ ಜುಲೈ 28ರಂದು ಹುಟ್ಟುಹಬ್ಬ ಆಚರಿಸುತ್ತಿದ್ದ ಯುವಕ, ಯುವತಿಯರ ಮೇಲೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಸುದ್ದಿ ವಾಹಿನಿಯ ಪತ್ರಕರ್ತ ನವೀನ್ ಸೂರಿಂಜೆ ಅವರನ್ನು ಬಂಧಿಸಿರುವುದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಸಿಪಿಐ, ಎಸ್‌ಡಿಪಿಐ ಸಹಿತ ಹಲವು ರಾಜಕೀಯ ಪಕ್ಷಗಳು, ಹಲವಾರು ಸಂಘಟನೆಗಳು ಈ ಬಂಧನ ಖಂಡಿಸಿ  ಬಹಿರಂಗ ಹೇಳಿಕೆ ನೀಡಿದ್ದರೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಸಮಾನ ಮನಸ್ಕ ಸಂಘಟನೆಗಳು ಪ್ರತಿಭಟನಾ ಪ್ರದರ್ಶನ ನಡೆಸಿವೆ.ಈ ಮಧ್ಯೆ, ಬಂಧಿತರಾಗಿರುವ ನವೀನ್ ಸೂರಿಂಜೆ ಅವರು ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್ ಅವರ ಮೂಲಕ ಪ್ರಥಮ ಮಾಹಿತಿ ವರದಿಗೆ (ಎಫ್‌ಐಆರ್) ತಾವು ಸಲ್ಲಿಸಿದ ಉತ್ತರ ಏನು ಎಂಬುದನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದು, ಹೋಂ ಸ್ಟೇ ದಾಳಿಯ ವಿಡಿಯೊ ಚಿತ್ರೀಕರಣವನ್ನು ತಾವು ನಡೆಸಿಲ್ಲದಿದ್ದರೂ, ಹಿಂದೂ ಸಂಘಟನೆಗಳ ನಿಜವಾದ ಬಣ್ಣವನ್ನು ಈ ಹಿಂದೆ ಬಯಲಿಗೆ ಎಳೆದಿದ್ದ ಕಾರಣಕ್ಕೆ ಸೇಡಿನಿಂದ ತಮ್ಮ ವಿರುದ್ಧ ದುರುದ್ದೇಶದಿಂದ ಆರೋಪ ಹೊರಿಸಲಾಗಿದೆ. ದಾಳಿ ನಡೆಯುವ ಬಗ್ಗೆ ಪೊಲೀಸರಿಗೆ ಮೊದಲೇ ಮಾಹಿತಿ ಇದ್ದರೂ ದಾಳಿ ತಡೆಯುವಲ್ಲಿ ಯಾವುದೇ ಪ್ರಯತ್ನ ನಡೆಸಿರಲಿಲ್ಲ ಎಂದು ಹೇಳಿದ್ದಾರೆ.ಕಾಂಗ್ರೆಸ್ ನಾಯಕತ್ವವನ್ನೇ ಕೆಣಕಿದ ಪೂಜಾರಿ: ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರು ಪತ್ರಕರ್ತನ ಬಂಧನವನ್ನು ಉಗ್ರವಾಗಿ ಖಂಡಿಸಿದ್ದು, ಮಾಧ್ಯಮವನ್ನು ದಮನಿಸುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ನಡೆಯಬೇಕು. ರಾಜ್ಯ ಕಾಂಗ್ರೆಸ್ ನಾಯಕತ್ವ ತಕ್ಷಣ ತನ್ನ ನಿರ್ಧಾರವನ್ನು ಜನತೆಯ ಮುಂದೆ ಇಡಬೇಕು. ಮುಂದಿನ ಚುನಾವಣೆಯಲ್ಲೂ ಈ ವಿಷಯವನ್ನು ಪ್ರಚಾರದ ಒಂದು ಭಾಗವಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.`ಒಂದು ವೇಳೆ ನವೀನ್ ಈ ದಾಳಿ ಘಟನೆಗೆ ಸಾಕ್ಷಿಯಾಗಿರದಿರುತ್ತಿದ್ದರೆ ಇಡೀ ಪ್ರಕರಣವೇ ಮುಚ್ಚಿ ಹೋಗಿಬಿಡುತ್ತಿತ್ತು. ಸ್ವತಃ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರೇ ಈ ಘಟನೆಯಿಂದ ತೀವ್ರವಾಗಿ ಮನನೊಂದಿದ್ದರು. ಈ ದಾಳಿ ಕೃತ್ಯ ಜಗತ್ತಿಗೆ ತೆರೆದುಕೊಂಡಿದ್ದರಿಂದಲೇ ಕೆಲವು ಆರೋಪಿಗಳು ಬಂಧನಕ್ಕೆ ಒಳಗಾಗುವಂತಾಯಿತು. ಮಾಧ್ಯಮದವರು ಇದೇ ರೀತಿ ವರದಿ ಮಾಡಬೇಕು ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ನವೀನ್ ಅವರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ಪತ್ರಿಕಾ ಸ್ವಾತಂತ್ರ್ಯವನ್ನು ದಮನಿಸುವ ಕಾರ್ಯ ಕೈಗೊಂಡಿದೆ~ ಎಂದು ಆರೋಪಿಸಿದರು.ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಮಾಜಿ ಸಚಿವ ಅಮರನಾಥ ಶೆಟ್ಟಿ, ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ.ಸದಾಶಿವ, ರಾಜ್ಯ ಕಾರ್ಯದರ್ಶಿ ಎಂ.ಜಿ.ಹೆಗಡೆ ಪತ್ರಿಕಾಗೋಷ್ಠಿ ನಡೆಸಿ, ಪರ್ತಕರ್ತನನ್ನು ಬಂಧಿಸುವ ಮೂಲಕ ಬಿಜೆಪಿ ಸರ್ಕಾರ ತನ್ನ ಫ್ಯಾಸಿಸ್ಟ್ ಧೋರಣೆ ಪ್ರದರ್ಶಿಸಿದೆ ಎಂದು ಆರೋಪಿಸಿದ್ದಾರೆ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಗುರುವಾರ ಸಂಜೆ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗ ಮೌನ ಪ್ರತಿಭಟನೆ ನಡೆಸಿ, ನವೀನ್ ಅವರ ಮೇಲೆ ಹೊರಿಸಿರುವ ಆರೋಪಗಳ ಬಗ್ಗೆ ಪಾರದರ್ಶಕವಾಗಿ ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಈ ಹಿಂದೆ ಜಂಟಿ ಸಮಿತಿ ರಚಿಸಿ ಪ್ರಕರಣದ ವಿಚಾರಣೆ ನಡೆಸಲಾಗುವುದೆಂದು ನೀಡಿದ್ದ ಭರವಸೆ ಮರೆತ ಪೊಲೀಸ್ ಇಲಾಖೆಯ ವರ್ತನೆ ಖಂಡಿಸಲಾಯಿತು.

 

ಈ ಬಂಧನವನ್ನು ಪ್ರತಿಭಟಿಸಿ ಸರ್ಕಾರಿ ಕಾರ್ಯಕ್ರಮಗಳ ವರದಿ ಮಾಡುವಾಗ ಕಪ್ಪು ಪಟ್ಟಿ ಧರಿಸಲು ಸಂಘ ನಿರ್ಧರಿಸಿದೆ. ಈ ಮಧ್ಯೆ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವೂ ನವೀನ್ ಅವರ ಬಂಧನವನ್ನು ಉಗ್ರವಾಗಿ ಖಂಡಿಸಿದೆ. ಈ ಬಂಧನದ ಮೂಲಕ ಪತ್ರಿಕಾ ಸ್ವಾತಂತ್ರ್ಯ ಹರಣಕ್ಕೆ ಸರ್ಕಾರ ಯತ್ನಿಸಿದೆ, ತಕ್ಷಣ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಸಂಘದ ಅಧ್ಯಕ್ಷ ಗಂಗಾಧರ ಮೊದಲಿಯಾರ್ ಮತ್ತು ಪ್ರಧಾನ ಕಾರ್ಯದರ್ಶಿ ಎನ್.ರಾಜು ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.