ಗುರುವಾರ , ಏಪ್ರಿಲ್ 15, 2021
21 °C

ಪತ್ರಕರ್ತರು ಪೊಲೀಸ್ ಮಾಹಿತಿದಾರರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: `ಪತ್ರಕರ್ತರು ಪೊಲೀಸ್ ಮಾಹಿತಿದಾರರ್ಲ್ಲಲ. ಯಾವುದೇ ಘಟನೆ ಬಗ್ಗೆ ಅವರು ಪೊಲೀಸರಿಗೆ ಮಾಹಿತಿ ನೀಡಿ ವರದಿ ಮಾಡಬೇಕೆಂದಿಲ್ಲ~ ಎಂದು ಹಿರಿಯ ವಕೀಲರಾದ ಹೇಮಲತಾ ಮಹಿಷಿ ಅಭಿಪ್ರಾಯಪಟ್ಟರು.ಮಂಗಳೂರಿನ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಪಿಯುಸಿಎಲ್ ಹಾಗೂ ಬೆಂಗಳೂರಿನ ಪರ್ಯಾಯ ಕಾನೂನು ವೇದಿಕೆ ಸಿದ್ಧ ಪಡಿಸಿದ, ಬರ್ತ್ ಡೇ ಪಾರ್ಟಿಗಳ ಮೇಲೆ ನಡೆದ ದಾಳಿ ಹಾಗೂ ಸಂಘ ಪರಿವಾರ, ಕೋಮು ಪೊಲೀಸ್‌ಗಿರಿಯ ಜಂಟಿ ಸತ್ಯಶೋಧನಾ ವರದಿಯ ಪುಸ್ತಕವನ್ನು ಇಲ್ಲಿನ ಸಹೋದಯದಲ್ಲಿ ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.`ಯಾವುದೇ ವಿಷಯ ಧೃಢಪಡದೇ ಆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವುದೂ ಸರಿಯಲ್ಲ. ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದವರನ್ನೇ ಬಲಿಪಶು ಮಾಡುವ ಯತ್ನ ಹಿಂದಿನಿಂದಲೂ ನಡೆಯುತ್ತಾ ಬಂದಿದೆ~ ಎಂದರು.

`ಸಂಸ್ಕೃತಿ ರಕ್ಷಣೆ ಹೆಸರಿನಲ್ಲಿ ಬರ್ತ್ ಡೇ ಪಾರ್ಟಿ ಮೇಲೆ ದಾಳಿ ನಡೆದಿದೆ.

 

ಯಾರು ಬೇಕಾದರೂ ಕಾನೂನು ಕೈಗೆತ್ತಿಕೊಳ್ಳಬಹುದೇ? ಇಂತಹ ದಾಳಿ ನಡೆಸುವವರಿಗೆ ಧೈರ್ಯ ಎಲ್ಲಿಂದ ಬರುತ್ತದೆ ಎಂಬ ಬಗ್ಗೆಯೂ ಚಿಂತನೆ ನಡೆಸಬೇಕಾಗಿದೆ. ರಾಜಕೀಯ ರಕ್ಷಣೆ ಇಲ್ಲದೇ ಇಂತಹ ದಾಳಿ ನಡೆಯಲು ಸಾಧ್ಯವಿಲ್ಲ. ಭವಿಷ್ಯದ ನಾಯಕರಾಗಿ ಬಿಂಬಿಸಿಕೊಳ್ಳಲು ಇಂತಹ ದಾಳಿ ನಡೆಸಿದರೆ ದೇಶದ ಗತಿ ಏನಾಗಬಹುದು?~ ಎಂದು ಅವರು ಆತಂಕ ವ್ಯಕ್ತಪಡಿಸಿದರು.`ಸಮರ್ಪಕ ರೀತಿಯಲ್ಲಿ ವಿಚಾರಣೆ ತಪ್ಪಿತಸ್ಥರಿಗೆ ಶಿಕ್ಷೆ ಆಗುವುದು ಖಂಡಿತಾ. ಮುಂದೆ ಇಂತಹ ಘಟನೆ ಮರುಕಳಿಸುವುದನ್ನು ತಪ್ಪಿಸುವ ಸಲುವಾಗಿಯಾದರೂ ಏಟು ತಿಂದ ಯುವತಿಯರು ಧೈರ್ಯದಿಂದ ಸಾಕ್ಷಿ ಹೇಳಬೇಕು~ ಎಂದರು.ಮಣಿಪಾಲ ಸಂವಹನ ಸಂಸ್ಥೆ ನಿರ್ದೇಶಕ ವರದೇಶ ಹಿರೇಗಂಗೆ ಮಾತನಾಡಿ, `ಪ್ರಕರಣ ಬೆಳಕಿಗೆ ಬರಲು ಕಾರಣಕರ್ತರಾದ ಪತ್ರಕರ್ತರ ವಿರುದ್ಧವೇ ಪೊಲೀಸರು ಮೊಕದ್ದಮೆ ದಾಖಲಿಸಿರುವುದು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ಹಲ್ಲೆ. ಸರ್ಕಾರ ತಕ್ಷಣ ಮೊಕದ್ದಮೆ ಹಿಂದಕ್ಕೆ ಪಡೆಯಬೇಕು~ ಎಂದು ಒತ್ತಾಯಿಸಿದರು.`ಪಬ್ ದಾಳಿ ಹಾಗೂ ಹೋಂಸ್ಟೇ ದಾಳಿಯ ನಡುವೆ ಯುವಜನಾಂಗದ ಮೇಲೆ ಈ ರೀತಿಯ 112ಕ್ಕೂ ಅಧಿಕ ಹಲ್ಲೆಗಳು ನಡೆದಿವೆ. ಈ ಪ್ರಕರಣಗಳಲ್ಲಿ ಹಲ್ಲೆಗೊಳಗಾದವರನ್ನೇ ಠಾಣೆಗೆ ಕರೆಸಿ ಬುದ್ಧಿಹೇಳುವ ಮೂಲಕ ಪೊಲೀಸರು ಅವರನ್ನು ಆರೋಪಿಗಳಂತೆ ನಡೆಸಿಕೊಂಡಿದ್ದಾರೆ~ ಎಂದರು. `ಪೊಲೀಸರು ಯುವತಿಯರನ್ನು ಅಶ್ಲೀಲವಾಗಿ ಬಿಂಬಿಸಿದ ಆರೋಪವನ್ನು ಪತ್ರಕರ್ತನ ಮೇಲೆ ಹೊರಿಸಿರುವುದು ಸರಿಯಲ್ಲ~ ಎಂದು ತಿಳಿಸಿದರು.ಮಂಗಳೂರು ವಿವಿ ಕನ್ನಡ ವಿಭಾದ ಪ್ರಾಧ್ಯಾಪಕಿ ಡಾ.ಸಬೀಹಾ ಭೂಮಿಗೌಡ  ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ಭಟ್ ಬಾಕ್ರಬೈಲ್, ಪರ್ಯಾಯ ಕಾನೂನು ವೇದಿಕೆಯ ಅರವಿಂದ ನಾರಾಯಣ್, ಗುಲಾಬಿ ಬಿಳಿಮಲೆ, ವಿಜಯಲಕ್ಷ್ಮಿ, ವಿದ್ಯಾ ದಿನಕರ್ ಮತ್ತಿತರರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.