ಮಂಗಳವಾರ, ಜೂನ್ 22, 2021
26 °C

ಪತ್ರಕರ್ತರ ಮೇಲೆ ಹಲ್ಲೆ: ಕರವೇ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ವಕೀಲರು ನಡೆಸಿದ ಹಲ್ಲೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ ಶೆಟ್ಟಿ ಬಣ) ತಾಲ್ಲೂಕು ಘಟಕದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.ಅಶೋಕ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಸಂಘಟನೆಯ ಕಾರ್ಯಕರ್ತರು, ಬಸವೇಶ್ವರ ವೃತ್ತಕ್ಕೆ ತೆರಳಿ ರಸ್ತೆ ತಡೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಸರ್ಕಾರ ಹಾಗೂ ವಕೀಲರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ರಸ್ತೆ ತಡೆ ನಂತರ ಮಾತನಾಡಿದ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ವಿಜಯಕುಮಾರ, ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆದ ದಾಳಿ ಎಂದು ಟೀಕಿಸಿದರು.ಕಾನೂನನ್ನು ರಕ್ಷಣೆ ಮಾಡಬೇಕಾದವರೇ ಈ ರೀತಿ ವರ್ತಿಸಿದ್ದು ಸರಿಯಲ್ಲ. ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಡುವ ರೈತರು, ನಾಡು-ನುಡಿಗಾಗಿ ಹೋರಾಡುವವರನ್ನು ಕೂಡಲೇ ಬಂಧಿಸಿ ಅನಗತ್ಯ ಕಿರುಕುಳ ನೀಡುವ ಪೊಲೀಸರು, ಈ ಘಟನೆಗೆ ಸಂಬಂಧಿಸಿದಂತೆ ಎಲ್ಲ ತಪ್ಪಿತಸ್ಥರನ್ನು ಬಂಧಿಸಿಲ್ಲ ಎಂದು ದೂರಿದರು. ತಪ್ಪಿತಸ್ಥರ ಭಾವಚಿತ್ರಗಳು ಸತತವಾಗಿ ಟಿವಿಗಳಲ್ಲಿ ಬಿತ್ತರಗೊಂಡರೂ ಕ್ರಮ ತೆಗೆದುಕೊಳ್ಳದಿರುವ ಪೊಲೀಸರ ಕ್ರಮ ಸರಿಯಲ್ಲ ಎಂದು ಟೀಕಿಸಿದರು. ಮನವಿ ಪತ್ರವನ್ನು ತಹಶೀಲ್ದಾರ್ ಬಿ.ಎಲ್.ಘೋಟೆ ಅವರಿಗೆ  ಸಲ್ಲಿಸಿದರು.ಸಂಘಟನೆಯ ನಗರ ಘಟಕದ ಗೌರವಾಧ್ಯಕ್ಷ ವೀರಣ್ಣ ಗೊಂಡಬಾಳ, ಮುಖಂಡರಾದ ಬಸವರಾಜ, ಲಕ್ಷ್ಮೀಪ್ರಿಯ, ಆದೋನಿ ಶೇಖ್ ಹುಸೇನ್, ಜಾನ್, ಮರಿಯಪ್ಪ ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.