ಪತ್ರಿಕಾಗೋಷ್ಠಿಗೆ ಬಾರದ ಸಚಿನ್

7
ಟೀಕೆಗಳಿಗೆ ಮಾತಿನ್ಲ್ಲಲಿ ಪ್ರತಿಕ್ರಿಯೆ ನೀಡಲು ನಿರಾಕರಣೆ

ಪತ್ರಿಕಾಗೋಷ್ಠಿಗೆ ಬಾರದ ಸಚಿನ್

Published:
Updated:

ಕೋಲ್ಕತ್ತ: ತಮ್ಮ ವಿರುದ್ಧ ಎದ್ದಿರುವ ಟೀಕೆಗಳಿಗೆ ಮಾತಿನ್ಲ್ಲಲಿ ಪ್ರತಿಕ್ರಿಯೆ ನೀಡಲು ಆಸಕ್ತಿ ಹೊಂದಿಲ್ಲದ ಸಚಿನ್ ತೆಂಡೂಲ್ಕರ್ ಬುಧವಾರ ಪಂದ್ಯದ ಬಳಿಕ ಪತ್ರಿಕಾಗೋಷ್ಠಿಗೂ ಬರಲಿಲ್ಲ. ಇದು ಎಲ್ಲರನ್ನು ಅಚ್ಚರಿಯಲ್ಲಿ ಮುಳುಗಿಸಿತು.ಟೆಸ್ಟ್ ಕ್ರಿಕೆಟ್ ಪಂದ್ಯದ ದಿನದಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರು ಅಂದಿನ ದಿನದ ಅಂತ್ಯಕ್ಕೆ ಪತ್ರಿಕಾಗೋಷ್ಠಿಗೆ ಆಗಮಿಸುವುದು ವಾಡಿಕೆ. ತಂಡದ ಯೋಜನೆ, ತಮ್ಮ ಆಟದ ಬಗ್ಗೆ ಗೋಷ್ಠಿಯಲ್ಲಿ ಅವರು ಮಾತನಾಡುತ್ತಾರೆ. ಆದರೆ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಬ್ಯಾಟ್ ಮೂಲಕ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರಿಸಿದ ತೆಂಡೂಲ್ಕರ್ ಆ ಬಳಿಕ ಮಾಧ್ಯಮದವರ ಕಣ್ಣಿಗೆ ಕಾಣಿಸಿಕೊಳ್ಳಲೇ ಇಲ್ಲ.ಮಾತನಾಡಲು ಸಚಿನ್ ಆಗಮಿಸುತ್ತಾರೆ ಎಂದುಕೊಂಡು ಪಶ್ಚಿಮ ಬಂಗಾಳದ ಕ್ರಿಕೆಟ್ ಸಂಸ್ಥೆಯ ಮಾಧ್ಯಮ ಸಭಾಂಗಣದಲ್ಲಿ ಪತ್ರಕರ್ತರು ಕಿಕ್ಕಿರಿದು ತುಂಬಿದ್ದರು. ಟಿವಿ ಕ್ಯಾಮರಾಗಳು ಸನ್ನದ್ಧವಾಗಿದ್ದವು. ಆದರೆ ಮಾತನಾಡಲು ಬಂದಿದ್ದು ಗೌತಮ್ ಗಂಭೀರ್. ಆಗ ಎಲ್ಲರೂ ನಿರಾಸೆಯಲ್ಲಿ ಗೊಣಗಲು ಶುರು ಮಾಡಿದರು.

`ಹೌದು, ಪ್ರತಿ ತಂಡದಿಂದ ಉತ್ತಮ ಪ್ರದರ್ಶನ ತೋರಿದವರು ಹಾಜರಾಗುತ್ತಾರೆ. ಆದರೆ ಪತ್ರಿಕಾಗೋಷ್ಠಿಗೆ ಹಾಜರಾಗುವಂತೆ ನಾವು ತೆಂಡೂಲ್ಕರ್ ಅವರನ್ನು ಒತ್ತಾಯಿಸಲು ಸಾಧ್ಯವೇ? ಅದು ತಂಡದ ಆಡಳಿತಕ್ಕೆ ಬಿಟ್ಟ ವಿಚಾರ. ಟೀಕೆಗಳಿಗೆ ಅವರು ಯಾವತ್ತೂ ಪ್ರತಿಕ್ರಿಯಿಸುವುದಿಲ್ಲ ಎಂಬುದು ಗೊತ್ತಿರುವ ವಿಚಾರ. ಹಾಗಾಗಿ ಈ ರೀತಿ ಮಾಡಿರಬಹುದು' ಎಂದು ಪಶ್ಚಿಮ ಬಂಗಾಳದ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಯೊಬ್ಬರು ನುಡಿದಿದ್ದಾರೆ.ದಿನದಾಟದಲ್ಲಿ ಹೆಚ್ಚು ವಿಕೆಟ್ ಪಡೆದ ಜೇಮ್ಸ ಆ್ಯಂಡರ್ಸನ್ ಇಂಗ್ಲೆಂಡ್ ತಂಡದ ಪರವಾಗಿ ಮಾಧ್ಯಮದವರನ್ನು ಉದ್ದೇಶಿ ಮಾತನಾಡಿದರು. ತೆಂಡೂಲ್ಕರ್ ಔಟ್ ಮಾಡಿದ ಸಂಭ್ರಮವನ್ನು ಅವರು ಹಂಚಿಕೊಂಡರು.`ಮೊದಲ ದಿನ ಉತ್ತಮ ಪ್ರದರ್ಶನ ತೋರಿದ್ದೇವೆ. ನನ್ನ ಸಾಧನೆಯ ಬಗ್ಗೆಯೂ ಖುಷಿ ಇದೆ. ಸಚಿನ್ ವಿಕೆಟ್ ನನ್ನ ಪಾಲಿಗೆ ಸ್ಮರಣೀಯ. ಅವರ ವಿಕೆಟ್ ಪತನದ ಕಾರಣ ನಾವು ಮೇಲುಗೈ ಸಾಧಿಸಲು ಸಾಧ್ಯವಾಯಿತು. ಕ್ರೀಸ್‌ನಲ್ಲಿ ಒಮ್ಮೆ ಗಟ್ಟಿಯಾಗಿ ನೆಲೆಯೂರಿದರೆ ಸಚಿನ್ ವಿಕೆಟ್ ಪಡೆಯುವುದು ಕಷ್ಟ' ಎಂದು ಆ್ಯಂಡರ್ಸನ್ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry