`ಪತ್ರಿಕಾ ಸ್ವಾತಂತ್ರ್ಯ ರಕ್ಷಿಸದ ಸರ್ಕಾರ ಆಳಲು ಅನರ್ಹ'

7

`ಪತ್ರಿಕಾ ಸ್ವಾತಂತ್ರ್ಯ ರಕ್ಷಿಸದ ಸರ್ಕಾರ ಆಳಲು ಅನರ್ಹ'

Published:
Updated:

ಮಂಗಳೂರು: `ಪತ್ರಿಕಾ ಸ್ವಾತಂತ್ರ್ಯ ಎತ್ತಿ ಹಿಡಿಯದಿದ್ದರೆ, ಪತ್ರಕರ್ತರ ರಕ್ಷಣೆಗೆ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಸರ್ಕಾರವು ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ಅಯೋಗ್ಯ ಎಂದು ಪರಿಗಣಿಸಬೇಕಾಗುತ್ತದೆ.

ಸಂವಿಧಾನದ 355 ಹಾಗೂ 356ನೇ ವಿಧಿ ಪ್ರಕಾರ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ನ್ಯಾ.ಮಾರ್ಕಂಡೇಯ ಕಟ್ಜು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, `ಮಂಗಳೂರಿನಲ್ಲಿ ಪೊಲೀಸರು ಹಾಗೂ ಗೂಂಡಾಗಳಿಂದ ಪತ್ರಕರ್ತರು ಪದೇ ಪದೇ ಕಿರುಕುಳ ಎದುರಿಸುತ್ತಿರುವ ಬಗ್ಗೆ ಮಾಹಿತಿ ಬಂದಿದೆ.

ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವುದು, ಪತ್ರಕರ್ತರಿಗೆ ಬೆದರಿಕೆ ನೀಡುವುದು ಸಹಿತ ಇನ್ನಿತರ ಯಾವುದೇ ರೀತಿಯ ಕಿರುಕುಳವನ್ನು ಪತ್ರಿಕಾ ಮಂಡಳಿ ಸಹಿಸುವುದಿಲ್ಲ. ಪತ್ರಿಕಾ ಸ್ವಾತಂತ್ರ್ಯ ಸಂವಿಧಾನದ 19 (1ಎ) ವಿಧಿಯ ಮೂಲಕ ನೀಡಲಾದ ಮೂಲಭೂತ ಹಕ್ಕು. ಇದನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ' ಎಂದರು.

`ಇಲ್ಲಿನ ರಾಜಕೀಯ, ಆಡಳಿತ ಹಾಗೂ ಪೊಲೀಸರು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತೆ ನಡೆದುಕೊಂಡರೆ, ಪತ್ರಕರ್ತರಿಗೆ ಬೆದರಿಕೆ ಒಡ್ಡಿದರೆ ಪತ್ರಿಕಾ ಮಂಡಳಿ ಕಠಿಣ ಕ್ರಮ ಕೈಗೊಳ್ಳಲಿದೆ. ಪತ್ರಕರ್ತರು ಸಹಿತ ನಾಗರಿಕರ ಹಕ್ಕುಗಳಿಗೆ ಧಕ್ಕೆ ಮಾಡುವ ಪೊಲೀಸರು ಹಾಗೂ ಗೂಂಡಾಗಳನ್ನು ಸರ್ಕಾರ ನಿಗ್ರಹಿಸಬೇಕು' ಎಂದು ಆಗ್ರಹಿಸಿದರು.

ಮನವಿ: ಹೋಂ ಸ್ಟೇ ದಾಳಿ ಬೆಳಕಿಗೆ ಬರಲು ಕಾರಣರಾದ ಪತ್ರಕರ್ತ ನವೀನ್ ಸೂರಿಂಜೆ ಅವರನ್ನೇ ಪೊಲೀಸರು ಆರೋಪಿಯನ್ನಾಗಿಸಿದ ಪ್ರಕರಣದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಪತ್ರಕರ್ತರ ಅಧ್ಯಯನ ಕೇಂದ್ರದ ನೇತೃತ್ವದಲ್ಲಿ ಕಟ್ಜು ಅವರಿಗೆ ಮನವಿ ಸಲ್ಲಿಸಲಾಯಿತು.

ನವೀನ್ ಸೂರಿಂಜೆ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಈ ಬಗ್ಗೆ ಯಾವುದೇ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ಕಟ್ಜು ತಿಳಿಸಿದರು.

ನವೀನ್ ಸೂರಿಂಜೆ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ ಕ್ರಮವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿ ಪಿಯುಸಿಎಲ್, ಕರ್ನಾಟಕ ಕೋಮು ಸೌಹಾರ್ದ ವೇದಿಕೆ, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ, ಸಿಟಿಜನ್ಸ್ ಫೋರಂ ಪ್ರಮುಖರೂ ಕಟ್ಜು ಅವರಿಗೆ ಮನವಿ ಸಲ್ಲಿಸಿದರು. ಪತ್ರಿಕಾ ಮಂಡಳಿ ಸದಸ್ಯ ರಾಜೀವನ್  ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry