ಗುರುವಾರ , ಮೇ 19, 2022
23 °C

ಪತ್ರಿಕೆಗೆ ವಿಶ್ವಾಸಾರ್ಹತೆಯೇ ಮುಖ್ಯ: ಪಾಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪತ್ರಿಕೆ ಒಮ್ಮೆ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಸಾಧ್ಯವಿಲ್ಲ. ಆದ್ದರಿಂದ ಪತ್ರಿಕೋದ್ಯಮಿ ಎಂದಿಗೂ ಮಾರಾಟದ ವಸ್ತುವಲ್ಲ ಎನ್ನುವುದನ್ನು ಸಾಬೀತುಪಡಿಸಬೇಕು’ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಕರೆ ನೀಡಿದರು.ಕರ್ನಾಟಕ ಮಾಧ್ಯಮ ಅಕಾಡೆಮಿ ಸೋಮವಾರ ನಗರದಲ್ಲಿ ಏರ್ಪಡಿಸಿದ್ದ 2008-09ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.‘ಮಹಿಳೆಯ ಚಾರಿತ್ರ್ಯ ಹರಣವಾದರೂ ಅದನ್ನು ಮತ್ತೆ ಪಡೆಯಬಹುದು. ಆದರೆ ಪತ್ರಿಕೆಯೊಂದಕ್ಕೆ ಕೆಟ್ಟ ಹೆಸರು ಬಂದರೆ ಜನರು ಅದನ್ನು ಮಾನ್ಯ ಮಾಡುವುದು ಸಾಧ್ಯವಿಲ್ಲ. ಪತ್ರಿಕೆಯೊಂದು ನಿರಂತರವಾಗಿ ವಿಶ್ವಾಸಾರ್ಹತೆ ಕಾಯ್ದುಕೊಳ್ಳುವುದು ಕಷ್ಟದ ಸಂಗತಿ. ಆದರೆ ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಹಾಗೂ ‘ದಿ ಹಿಂದೂ’ ಪತ್ರಿಕೆಗಳು ಅನೇಕ ದಶಕಗಳಿಂದ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಬಂದಿರುವುದು ಹೆಮ್ಮೆಯ ವಿಚಾರವಾಗಿದೆ’ ಎಂದು ಹೇಳಿದರು.‘ಪತ್ರಕರ್ತ ಅಪಾರವಾಗಿ ಓದುವ ಸಾಮರ್ಥ್ಯ ಹೊಂದಿರಬೇಕು. ತನ್ನ ಪತ್ರಿಕೆಯ ಜತೆ ಇತರ ಪತ್ರಿಕೆಗಳು ಬರೆದಿರುವುದನ್ನು ಗ್ರಹಿಸುವ ಹಾಗೂ ಲೋಕದ ಆಗುಹೋಗುಗಳನ್ನು ತಿಳಿಯುವ ಸಾಮರ್ಥ್ಯವನ್ನು ಪಡೆಯಬೇಕು. ಪತ್ರಕರ್ತನ ಬರವಣಿಗೆಯನ್ನು ಯಾವ ಶಾಲೆಯಲ್ಲಿಯೂ ಕಲಿಯುವುದು ಸಾಧ್ಯವಿಲ್ಲ. ಸ್ವಯಂ ಪರಿಶ್ರಮದಿಂದ ಬರವಣಿಗೆಯನ್ನು ಒಲಿಸಿಕೊಳ್ಳಬೇಕಿದೆ’ ಎಂದು ಹೇಳಿದರು.ಭಾರತೀಯ ಪತ್ರಿಕಾ ಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಎನ್.ರಾಯ್ ಮಾತನಾಡಿ ‘ದೇಶದ ನಾಲ್ಕನೇ ಆಧಾರ ಸ್ತಂಭ ಎನ್ನಿಸಿಕೊಂಡ ಭಾರತೀಯ ಮಾಧ್ಯಮ ಪ್ರಸ್ತುತ ಆತ್ಮ ವಿಮರ್ಶೆ ಮಾಡಿಕೊಳ್ಳುವ ಸ್ಥಿತಿಯಲ್ಲಿದೆ. ಜನರ ನಂಬಿಕೆಗಳನ್ನು ಸುಳ್ಳು ಮಾಡುವಂತಹ ಸ್ಥಿತಿಗೆ ಏಕೆ ತಲುಪಲಾಗಿದೆ ಎಂಬುದನ್ನು ಸ್ವಯಂ ಪ್ರಶ್ನಿಸಿಕೊಳ್ಳುವ ಅಗತ್ಯ ಇದೆ’ ಎಂದು ಹೇಳಿದರು.‘ಎರಡು ಶತಮಾನಗಳ ಸುದೀರ್ಘ ಇತಿಹಾಸ ಹೊಂದಿರುವ ಭಾರತೀಯ ಮಾಧ್ಯಮ ಇತ್ತೀಚೆಗೆ ಅನೇಕ ಕಳಂಕಗಳನ್ನು ಎದುರಿಸುತ್ತಿದೆ. ವಿಶ್ವಕ್ಕೆ ಮಾದರಿಯಾಗುವ ಎಲ್ಲಾ ಶಕ್ತಿ ಸಾಮರ್ಥ್ಯಗಳು ಭಾರತೀಯ ಮಾಧ್ಯಮಕ್ಕೆ ಇದೆ ಎನ್ನುವುದನ್ನು ಪತ್ರಕರ್ತರು ಮರೆಯಬಾರದು’ ಎಂದರು.2008ರ ವಿಶೇಷ ಪ್ರಶಸ್ತಿ ಸ್ವೀಕರಿಸಿದ ‘ಪ್ರಜಾವಾಣಿ’ ಸಂಪಾದಕ ಕೆ.ಎನ್.ಶಾಂತಕುಮಾರ್ ಅವರು ಮಾತನಾಡಿ ‘ಓದುಗರು ಪತ್ರಿಕೆಯ ವರದಿಯನ್ನು ಓದಿ ಬೆನ್ನು ತಟ್ಟುವುದು ಶ್ರೇಷ್ಠ ಪ್ರಶಸ್ತಿ ನೀಡಿದಂತೆ. ಹಾಡು-ಹಕ್ಕಿಗಳಿಗೆ ಬಿರುದು ಸನ್ಮಾನಗಳ ಅಗತ್ಯ ಇಲ್ಲವಾದರೂ ಈ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿಗಿಂತಲೂ ಮಿಗಿಲಾದ ಸಂತಸವನ್ನು ನೀಡಿದೆ’ ಎಂದು ತಿಳಿಸಿದರು. ‘ಶ್ರೇಷ್ಠ ವರದಿ ಮಾಡಿದ ನಾಡಿನ ಅನೇಕ ಪತ್ರಕರ್ತರಿಗೆ ಪ್ರಶಸ್ತಿ ಉತ್ಸಾಹ ಮೂಡಿಸಲಿದೆ. ಶ್ರದ್ಧೆ, ಪ್ರಾಮಾಣಿಕತೆಯಿಂದ ದುಡಿಯಲು ಪ್ರಶಸ್ತಿ ಪ್ರೇರಣೆ ನೀಡಲಿದೆ’ ಎಂದರು.ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಡಿ.ಪಿ. ಪರಮೇಶ್ವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ರಮೇಶ್ ಬಿ.ಝಳಕಿ, ಅಕಾಡೆಮಿಯ ಕಾರ್ಯದರ್ಶಿ ಡಾ.ಬಿ.ಆರ್.ಮಮತಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.