ಪತ್ರಿಕೆ ಅನುಬಂಧ; ತಂದಿತು ಆನಂದ

7
ಒಡಲ ದನಿ

ಪತ್ರಿಕೆ ಅನುಬಂಧ; ತಂದಿತು ಆನಂದ

Published:
Updated:

 


ದಕ್ಷಿಣ ಕನ್ನಡ ಜಿಲ್ಲೆ ಒಡಿಯೂರು ಎಂಬ ಪುಟ್ಟ ಹಳ್ಳಿಯಿಂದ 1987ರ ಫೆಬ್ರುವರಿ ತಿಂಗಳಲ್ಲಿ ಮದುವೆಯಾಗಿ ಮೈಸೂರಿಗೆ ಬಂದು ನೆಲೆ ಊರಿದೆ. ಅಂದಿನಿಂದ ಇಂದಿನವರೆಗೂ `ಪ್ರಜಾವಾಣಿ' ಓದುವುದನ್ನು ಒಂದು ದಿನವೂ ತಪ್ಪಿಸಿಲ್ಲ!

 


ನಮ್ಮ ಮಾವ (ಜಿ.ಟಿ.ನಾರಾಯಣ ರಾವ್ 1926- 2008) ಪ್ರಜಾವಾಣಿಯ ಕಾಯಂ ಓದುಗರಾಗಿದ್ದರು. ಅವರು ಬೆಳಿಗ್ಗೆ ಎದ್ದೊಡನೆ ಮನೆ ಹೊರಗೆ ನಿಂತು ಗೇಟಿನ ಬಳಿ ಪತ್ರಿಕೆ ಬರುವುದನ್ನೇ ಕಾಯುತ್ತಿದ್ದರು. ಬಂದೊಡನೆ ಕೈಗೆತ್ತಿಕೊಂಡು ಆಮೂಲಾಗ್ರ ಓದುತ್ತಿದ್ದರು. ಒಂದೊಂದು ದಿನ  ಹುಡುಗ ಪತ್ರಿಕೆ ಹಾಕದೇ ತಪ್ಪಿಸುತ್ತಿದ್ದ.ಆ ದಿನ ಮಾವನ ಪಡಿಪಾಟಲು ನೋಡುವುದೇ ನಮಗಾನಂದ. `ಪತ್ರಿಕೆ ಹಾಕೇ ಇಲ್ಲ' ಎಂದು ನಮಗೆಲ್ಲ ನಾಲ್ಕೈದು ಸಲ ಹೇಳುತ್ತಾ ಶತಪಥ ಓಡಾಡುತ್ತಿದ್ದರು. ಪ್ರಜಾವಾಣಿ ಕಚೇರಿಗೆ ದೂರವಾಣಿ ಕರೆ ಮಾಡಿ `ನಮಗೆ ಪತ್ರಿಕೆ ಹಾಕಿಲ್ಲ, ಇವತ್ತು ಪತ್ರಿಕೆ ಬಂದಿದೆ ತಾನೇ' ಎಂದು ಖಚಿತಪಡಿಸಿಕೊಳ್ಳುತ್ತಿದ್ದರು. ತಿಂಡಿ ತಿಂದ ಕೂಡಲೇ ಚಿಲ್ಲರೆ ತೆಗೆದುಕೊಂಡು ಅಂಗಡಿಗೆ ಹೋಗಿ ಪತ್ರಿಕೆ ತಂದು ಓದಿದ ಮೇಲೇ ಅವರಿಗೆ ಸಮಾಧಾನ ಆಗುತ್ತಿದ್ದುದು. `ಅಲ್ಲ ಒಂದು ದಿನ ಪತ್ರಿಕೆ ಓದದೇ ಇದ್ದರೆ ಏನಾಗುತ್ತದೆ? ಪತ್ರಿಕೆಗೆ ಇಷ್ಟೊಂದು ದಾಸರಾಗಬಾರದು. ಇದು ಅತಿಯಾಯಿತು' ಎಂದು ಆಗ ನಾನು ಮನಸ್ಸಿನಲ್ಲೇ ಹೇಳಿಕೊಳ್ಳುತ್ತಿದ್ದೆ. ಆದರೆ ಈಗ ಅವರದೇ ಪರಿಸ್ಥಿತಿ ನನಗೆ ಅಂಟಿದೆ! ಆದರೆ ಪತ್ರಿಕೆ ಬರದಿದ್ದಾಗ ಕಚೇರಿಗೆ ದೂರವಾಣಿ ಕರೆ ಮಾಡುತ್ತಿಲ್ಲ ಅಷ್ಟೆ! 

 


ಮೊದ ಮೊದಲು ನಾನು ಪತ್ರಿಕೆಯನ್ನು ಓದಿದ ಶಾಸ್ತ್ರ ಮಾತ್ರ ಮಾಡುತ್ತಿದ್ದೆ. ಆ ಅಭ್ಯಾಸವನ್ನು ಮಾವ ಕಿತ್ತೆಸೆದರು. ಅವರು ಪ್ರತಿ ದಿನ ನನಗೆ, `ನೋಡು ಪ್ರಜಾವಾಣಿಯಲ್ಲಿ ಇಂಥ ಲೇಖನ ಬಂದಿದೆ. ಓದಿದೆಯಾ?' ಎಂದು ಕೇಳುತ್ತಿದ್ದರು. `ಇಲ್ಲ' ಎಂದು ಉತ್ತರಿಸಿದರೆ `ಓದು' ಎನ್ನುತ್ತಿದ್ದರು. ಆಗ ಓದಲೇ ಬೇಕಾಗುತ್ತಿತ್ತು. ಏಕೆಂದರೆ ಸ್ವಲ್ಪ ಹೊತ್ತು ಬಿಟ್ಟು `ಲೇಖನ ಓದಿದೆಯಾ, ಏನನಿಸಿತು?' ಎಂದು ಮರೆಯದೇ ಕೇಳುತ್ತಿದ್ದರು. ಅನಿವಾರ್ಯವಾಗಿ ಸರಿಯಾಗಿ ಪತ್ರಿಕೆ ಓದಲೇಬೇಕಿತ್ತು ಹಾಗೂ ಆ ಲೇಖನದ ಬಗ್ಗೆ ಚೆನ್ನಾಗಿತ್ತೋ ಇಲ್ಲವೋ ಎಂದು ವಿವರಿಸಬೇಕಿತ್ತು. ಅಲ್ಲಿಂದ ಮುಂದೆ ಪ್ರಜಾವಾಣಿಯ ಓದಿನ ಗೀಳು ನನಗೆ ಹತ್ತಿತು. ಪ್ರಜಾವಾಣಿಯಲ್ಲಿ ಯಾವುದಾದರೂ ಲೇಖನದ ಕೆಲವು ವಾಕ್ಯಗಳನ್ನು ತೆಗೆದುಕೊಂಡು `ನೋಡು ಈ ವಾಕ್ಯವನ್ನು ಹೇಗೆಲ್ಲ ಬರೆಯಬಹುದು, ಹೇಗೆ ಬರೆದರೆ ಶೈಲಿ ಚೆನ್ನಾಗಿರುತ್ತದೆ ಎಂದೆಲ್ಲ ಮಾವ ನನಗೆ ಪಾಠ ಮಾಡುತ್ತಿದ್ದರು. ನಾನು ಆಸಕ್ತಿಯಿಂದ ಕೇಳಿಸಿಕೊಂಡು `ಹೌದಲ್ಲ, ಹೀಗೆ ಬರೆದರೆ ಚೆನ್ನಾಗಿರುತ್ತದೆ' ಎಂದು ಹೇಳುತ್ತಿದ್ದೆ. 

 


`ನೋಡು ಇವತ್ತಿನ ಪತ್ರಿಕೆಯ ಇಂಥ ಲೇಖನದಲ್ಲಿ ಒಂದು ತಪ್ಪು ನುಸುಳಿದೆ. ಪತ್ತೆ ಹಚ್ಚು ನೋಡುವ' ಎಂದು ನನಗೆ ಸವಾಲೆಸೆಯುತ್ತಿದ್ದರು. ಪ್ರಾರಂಭದಲ್ಲಿ ನನಗೆ ಗೊತ್ತಾಗುತ್ತಿರಲಿಲ್ಲ. ಅವರೇ ತೋರಿಸಿ `ಇದು ಹೀಗಾಗಬೇಕು' ಎನ್ನುತ್ತಿದ್ದರು. ಒಂದು ವಾಕ್ಯವನ್ನು ಹೇಗೆ ಬರೆಯಬಹುದು, ಹೇಗೆ ಬರೆದರೆ ಚೆನ್ನ ಎಂಬುದು ಆಗ ನನ್ನ ಅರಿವಿಗೆ ಬಂತು. ಉದಾಹರಣೆಗೆ `ನಾನು ಇವತ್ತು ಬೆಳಿಗ್ಗೆ ಬೇಗ ಎದ್ದೆ' ಎಂಬುದನ್ನು `ಇವತ್ತು ಬೆಳಿಗ್ಗೆ ನಾನು ಬೇಗ ಎದ್ದೆ' ಎಂದು ಬರೆದರೆ ಆ ಶೈಲಿಯೇ ಉತ್ತಮ ಎಂದು ನನಗೆ ಮಾವ ತಿಳಿ ಹೇಳಿದ್ದರು. `ನಾನು ಎಂಬುದು ವಾಕ್ಯದ ಮೊದಲು ಬಂದರೆ ಶೋಭಿಸುವುದಿಲ್ಲ' ಎನ್ನುತ್ತಿದ್ದರು.ಆದಷ್ಟೂ  `ನಾನು ಎಂಬ ಶಬ್ದ ಬರದಂತೆಯೇ ವಾಕ್ಯ ರಚಿಸಬೇಕು. ಅನಿವಾರ್ಯವಾದರೆ ಮಾತ್ರ ನಾನು ಸೇರಿಸಬೇಕು' ಎಂದಿದ್ದರು. ಕ್ರಮೇಣ ನನ್ನ ಜ್ಞಾನದ ಅರಿವು ಪ್ರಜಾವಾಣಿ ಓದಿನಿಂದ ಹಾಗೂ ಮಾವನ ಪಾಠದಿಂದ ಬೆಳವಣಿಗೆ ಹೊಂದಿತು. ಹೀಗೆ ದಿನಾ ನಮ್ಮಿಬ್ಬರ ನಡುವೆ ಪತ್ರಿಕೆಯ ಓದಿನ ಬಗ್ಗೆ ಸಂವಾದ, ಚರ್ಚೆ ನಡೆಯುತ್ತಿತ್ತು. 

 


ಪ್ರಜಾವಾಣಿಯನ್ನು ಮೊದಲು ಓದಲು ನನಗೂ ಮಾವನಿಗೂ ಸ್ಪರ್ಧೆ ಏರ್ಪಡುತ್ತಿತ್ತು. ಮಾವ ಓದಿ ಕೆಳಗಿಡುವುದನ್ನೇ ಕಾಯುತ್ತಿದ್ದೆ. ಮಧ್ಯೆ ಅವರಿಗೆ ದೂರವಾಣಿ ಕರೆ ಬಂದರೆ ಕೂಡಲೇ ನಾನು ನಿಧಿ ಸಿಕ್ಕಂತೆ ಪತ್ರಿಕೆ ಕೈಗೆತ್ತಿಕೊಳ್ಳುತ್ತಿದ್ದೆ. ಅಕ್ಷರಿ (ಮಗಳು) ಪತ್ರಿಕೆ ಓದುವ ಹಂತಕ್ಕೆ ಬಂದ ಮೇಲೆ ನಮ್ಮ ಮೂವರಲ್ಲಿ ಪ್ರಜಾವಾಣಿ ಓದಲು ಪೈಪೋಟಿ ಶುರುವಾಯಿತು. ಅವಳಾದರೋ ಬಲು ಘಾಟಿ. ಅಜ್ಜನಿಂದ ಪತ್ರಿಕೆ ಕಿತ್ತುಕೊಂಡು `ಅಜ್ಜ ಬೇಗ ಓದಿ ಕೊಡುತ್ತೇನೆ. ನನಗೆ ಶಾಲೆಗೆ ಹೋಗಬೇಕಲ್ಲ. ಮತ್ತೆ ನೀನೇ ಓದು' ಎನ್ನುತ್ತಿದ್ದಳು. ಅಜ್ಜನೂ ಮೊಮ್ಮಗಳ ವಾದಕ್ಕೆ ತಲೆಬಾಗಿ ಬೇರೆ ಪತ್ರಿಕೆ ಕೈಗೆತ್ತಿಕೊಳ್ಳುತ್ತಿದ್ದರು. 

 


ಮಾವ ಮೈಸೂರಿನಿಂದ ಹೊರಗೆಲ್ಲಾದರೂ ಕೆಲವು ದಿನಗಳ ಮಟ್ಟಿಗೆ ತೆರಳುವಾಗ `ಪತ್ರಿಕೆಗಳನ್ನೆಲ್ಲ ತೆಗೆದಿಡು, ಬಂದು ಓದುತ್ತೇನೆ' ಎಂದು ತಪ್ಪದೇ ಹೇಳುತ್ತಿದ್ದರು. `ಹಳೆ ಪತ್ರಿಕೆಯನ್ನು ಎಂತದು ಓದುವುದು' ಎಂದು ಗೊಣಗುತ್ತಿದ್ದೆ. ಈಗ ನಾನು ಕೂಡ ಎಷ್ಟು ದಿನಕ್ಕೆ ಹೊರಗೆ ಹೋದರೂ ಬಂದ ಮೇಲೆ ಎಲ್ಲ ದಿನದ ಪ್ರಜಾವಾಣಿಯನ್ನೂ ಬುಡದಿಂದ ಕೊನೆ ತನಕ ಓದಿದ ಮೇಲೆಯೇ ರದ್ದಿಗೆ ಹಾಕುವುದು. ಎಷ್ಟೇ ದಿನಗಳಾದರೂ ಸರಿ, ಪ್ರಜಾವಾಣಿ ಓದದೇ ಇದ್ದರೆ ಏನೋ ಕಳೆದುಕೊಂಡ ಭಾವ. ಪತ್ರಿಕೆ ಹರವಿ ಕುಳಿತಾಗ ನಮ್ಮ ಅತ್ತೆ `ಪರೀಕ್ಷೆಗೆ ತಯಾರಿ ಜೋರು' ಎಂದು ನನ್ನನ್ನು ತಮಾಷೆ ಮಾಡುತ್ತಾರೆ. ಹಿಂದೆ ನಾನು ಮಾವನನ್ನು ತಮಾಷೆ ಮಾಡಿದ್ದೆಲ್ಲವನ್ನೂ ಈಗ ಪ್ರಾಂಜಲ ಮನಸ್ಸಿನಿಂದ ಹಿಂದಕ್ಕೆ ಪಡೆಯುವೆ. 

 


ಪ್ರಜಾವಾಣಿಯಲ್ಲಿ ಬರುವ ಲೇಖನಗಳು ಮೌಲಿಕವಾಗಿರುತ್ತವೆ. ಬೇರೆ ಯಾವ ಪತ್ರಿಕೆ ಓದಿದರೂ ಲಭಿಸದ ಸುಖ ಪ್ರಜಾವಾಣಿ ಓದಿನಿಂದ ನನಗೆ ಸಿಗುತ್ತದೆ. ಈಗ ಪ್ರತಿ ವಾರವೂ ಒಂದೊಂದು ಪುರವಣಿ ಬರುತ್ತಿದೆ. ಅದನ್ನು ಓದಲು ಖುಷಿಯಾಗುತ್ತಿದೆ. `ಕಾಮನಬಿಲ್ಲು' ಚೆನ್ನಾಗಿದೆ. ಕ್ರಿಕೆಟ್ ಅಂದರೆ ನನಗೆ ತುಸು ಒಲವು ಜಾಸ್ತಿ. ಪ್ರಜಾವಾಣಿಯಲ್ಲಿ ಬರುವ ಯಾವುದೇ ಆಟದ ವಿವರಣೆ, ಅದರಲ್ಲೂ ಕ್ರಿಕೆಟ್ ಆಟದ ವಿವರ ಓದಲು ಬಲು ಪ್ರಿಯ. ಪತ್ರಿಕೆ ಹಿಡಿದು ನಾನು ಮೊದಲು ಕೊನೆಯ ಪುಟವನ್ನೇ ಓದುವುದು. ಅದೆಲ್ಲ ಓದಿದ ಮೆಲೆಯೇ ಮುಖಪುಟದತ್ತ ಗಮನ ಹರಿಸುವುದು. ಪ್ರಜಾವಾಣಿಯ ನನ್ನ ನಂಟು ಬೆಳ್ಳಿಹಬ್ಬದತ್ತ ದಾಪುಗಾಲಿಡುತ್ತಾ ಸಾಗುತ್ತಿದೆ ಎಂದು ಹೇಳಲು ನನಗೆ ಬಲು ಹೆಮ್ಮೆಯಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry