ಶನಿವಾರ, ಮೇ 8, 2021
25 °C

ಪತ್ರಿಕೋದ್ಯಮ ಶಿಕ್ಷಣ: ಪ್ರಯೋಗಶೀಲತೆ ಬೇಡವೆ?

ಡಾ. ನಿರಂಜನ ವಾನಳ್ಳಿ Updated:

ಅಕ್ಷರ ಗಾತ್ರ : | |

ಪತ್ರಿಕೋದ್ಯಮ ಶಿಕ್ಷಣ ಆರಂಭಗೊಂಡಾಗ ಅದರ ಔಚಿತ್ಯದ ಕುರಿತೇ ಪ್ರಶ್ನೆಗಳಿದ್ದವು. ಪತ್ರಕರ್ತನ ಕೌಶಲಗಳನ್ನು ನಾಲ್ಕು ಗೋಡೆಗಳ ನಡುವಿನ ತರಗತಿಗಳಲ್ಲಿ ಕಲಿಸಲು ಸಾಧ್ಯವೇ ಎಂದು ಶಿಕ್ಷಣ ತಜ್ಞರು ಹುಬ್ಬು ಏರಿಸಿದರೆ, ಪತ್ರಿಕೋದ್ಯಮ ಶಿಕ್ಷಣದ ನೆರವಿಲ್ಲದೆ ಪತ್ರಕರ್ತರಾದವರು ಹೀಯಾಳಿಸಿದ್ದರು. `ಪತ್ರಿಕಾಲಯದೊಳಕ್ಕೆ ಕಾಲಿಡುವಾಗ ತರಗತಿಯಲ್ಲಿ ಕಲಿದ್ದನ್ನು ಮರೆತು ಬರಬೇಕು~ ಎಂಬುದು ಪತ್ರಿಕಾಲಯದೊಳಗೆ ಆಗ ಚಾಲ್ತಿಯಲ್ಲಿದ್ದ ಉಡಾಫೆಯ ಮಾತಾಗಿತ್ತು.

ಆದರೂ ಪತ್ರಿಕೋದ್ಯಮ ಶಿಕ್ಷಣ, ಕಾಲದ ಪರೀಕ್ಷೆಯನ್ನು ಗೆದ್ದು ಬಂದಿದೆ. ಜಾಗತಿಕವಾಗಿ ಸರ್ವತ್ರ ಮಾನ್ಯತೆ ಗಳಿಸಿಕೊಂಡಿದೆ. ಈಗ ಅದು ಪತ್ರಿಕೋದ್ಯಮ ಶಿಕ್ಷಣವೆಂದು ಕರೆಸಿಕೊಳ್ಳದೇ ಸಕಲ ಮಾಧ್ಯಮವನ್ನೂ ಒಳಗೊಂಡ ವಿಸ್ತ್ರತ `ಮಾಧ್ಯಮ ಶಿಕ್ಷಣ~ವಾಗಿ ಬೆಳೆದಿದೆ. ಕರ್ನಾಟಕದಲ್ಲಿ ಈಗ ಹೆಚ್ಚಿನ ವಿವಿಗಳು, ಬಹುತೇಕ ಕಾಲೇಜುಗಳು ಪದವಿ ಮತ್ತು ಸ್ನಾತಕೋತ್ತರ ಮಟ್ಟದಲ್ಲಿ ಮಾಧ್ಯಮ ಶಿಕ್ಷಣವನ್ನು ವಿವಿಧ ಹೆಸರುಗಳ ಅಡಿಯಲ್ಲಿ ಬೋಧಿಸುತ್ತಿವೆ.

ಅರವತ್ತರ ದಶಕದಲ್ಲಿ ಆರಂಭವಾದ ಮೈಸೂರು ವಿವಿಯ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆ ಆ ಕಾಲದಲ್ಲೇ ಪತ್ರಿಕೋದ್ಯಮವನ್ನೂ ಅಂಚೆ ತೆರಪಿನ ಶಿಕ್ಷಣ ಕ್ರಮಕ್ಕೆ ಅಳವಡಿಸಿ ದಾಖಲೆ ನಿರ್ಮಿಸಿತ್ತು. ಬೇರೆ ಬೇರೆ ರಾಜ್ಯಗಳ ಪತ್ರಕರ್ತರನ್ನೂ ಆಕರ್ಷಿಸುತ್ತಿತ್ತು. 1996ರಲ್ಲಿ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯನ್ನು ಕೇಂದ್ರವಾಗಿಟ್ಟುಕೊಂಡು ಕರ್ನಾಟಕ ರಾಜ್ಯ ಮುಕ್ತ ವಿವಿಯನ್ನು ಸ್ಥಾಪಿಸಲಾಯ್ತು. ಅಲ್ಲಿಂದ ಮುಂದಕ್ಕೆ ಮುಕ್ತ ವಿವಿಯು ಸಂವಹನ ಮತ್ತು ಪತ್ರಿಕೋದ್ಯಮವನ್ನೂ ಮುಕ್ತ ಶಿಕ್ಷಣ ಪದ್ಧತಿಗೆ ಅಳವಡಿಸಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ನೀಡಲಾರಂಭಿಸಿತು. ಇದರಿಂದ ಕರ್ನಾಟಕದಲ್ಲಿ ಹಾಗೂ ಹೊರರಾಜ್ಯಗಳಲ್ಲಿ ಕಾರ್ಯನಿರತ ಪತ್ರಕರ್ತರಾಗಿದ್ದೂ ಸಾಂಪ್ರದಾಯಿಕ ಪತ್ರಿಕೋದ್ಯಮ ಶಿಕ್ಷಣ ಹೊಂದಿರದ ಬಹಳಷ್ಟು ಪತ್ರಕರ್ತರಿಗೆ ಅನುಕೂಲವಾಯ್ತು. ಈಗ ರಾಜ್ಯ ಮುಕ್ತ ವಿವಿ ಮಾತ್ರವಲ್ಲ, ಹಂಪಿ ಕನ್ನಡ ವಿವಿ, ಧಾರವಾಡದ ಕರ್ನಾಟಕ ವಿವಿಯೂ ಸಮೂಹ ಸಂವಹನ ಹಾಗೂ ಮಾಧ್ಯಮ ಅಧ್ಯಯನದಲ್ಲಿ ಸ್ನಾತಕೋತ್ತರ ತರಗತಿಗಳನ್ನು ಮುಕ್ತ  ವಿವಿ ಮಾದರಿಯಲ್ಲಿ ನಡೆಸುತ್ತಿವೆ.   ಪತ್ರಿಕೋದ್ಯಮ ಶಿಕ್ಷಣ ಸಾರ್ವತ್ರಿಕಗೊಂಡು ಎಲ್ಲರಿಗೂ ದೊರೆಯುವಂತಾಗಿರುವುದು ಸ್ವಾಗತಾರ್ಹ ಬೆಳವಣಿಗೆ.ಆದರೆ ಮುಕ್ತ ವಿವಿ ಪದ್ಧತಿಯು ಪದವಿಯನ್ನು ಉದಾರಗೊಳಿಸುವ ಭರದಲ್ಲಿ ಸಂವಹನ ಶಿಕ್ಷಣವನ್ನು ಲಘುವಾಗಿಸಿದೆಯೋ ಎಂಬ  ಅನುಮಾನ ಬರುತ್ತದೆ. ಯಾಕೆಂದರೆ ಆರಂಭದಲ್ಲಿ ಪತ್ರಿಕೋದ್ಯಮ ತರಗತಿಗಳಿಗೆ ಸಂಪರ್ಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಯೋಗಿಕ ತರಗತಿಗಳಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿತ್ತು. ಅಂಚೆ ತೆರಪಿನ ಶಿಕ್ಷಣವಿದ್ದಾಗ ಕೂಡ ಸಂಪರ್ಕ ತರಗತಿಗಳಲ್ಲಿ ಭಾಗವಹಿಸದೇ ಇದ್ದವರು ಪರೀಕ್ಷೆಗೆ ಕೂರುವಂತಿರಲಿಲ್ಲ.

ವರದಿ ಬರೆಯದೇ ಪದವಿ

ಆದರೆ ಈಗ ನೋಡಿದರೆ ಕನ್ನಡವನ್ನೋ ಚರಿತ್ರೆಯನ್ನೋ ಓದುವ  ಹಾಗೆ ಸಮೂಹ ಸಂವಹನವನ್ನೂ ಎಂಎ ಮಟ್ಟದಲ್ಲಿ ತೆಗೆದುಕೊಂಡು ನಿಗದಿತ ಶುಲ್ಕ ಕಟ್ಟಿ ಪರೀಕ್ಷೆ ಬರೆದು ಪಾಸಾಗಲು ಅವಕಾಶ ಕಲ್ಪಿಸಲಾಗಿದೆ. ಒಂದೇ ಒಂದು ವರದಿ ಬರೆಯದೇ, ಸುದ್ದಿ ಸಂಪಾದಿಸದೇ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಬಹುದೆಂಬುದು ಆಘಾತಕಾರಿ. ವಿಷಾದವೆಂದರೆ ಎರಡು ವರ್ಷ ತರಗತಿಗಳಲ್ಲಿ ಕುಳಿತು ಅಧ್ಯಯನ ನಡೆಸುವವರಿಗೂ ಇವರಿಗೂ ಕಾನೂನಿನ ದೃಷ್ಟಿಯಿಂದ ಯಾವ ವ್ಯತ್ಯಾಸವೂ ಇಲ್ಲ. ಅವರಿಗೂ ಇವರಿಗೂ ಸಮಾನತೆ! ಹೀಗಾಗಿ ವಿದ್ಯಾರ್ಥಿಗಳು ಪದವಿ ಪಡೆದ ಮೇಲೆ ಯಾವುದೋ ಒಂದು ಪತ್ರಿಕೆಗೆ ಸೇರಿ, ಕೆಲಸ ಮಾಡಿಕೊಂಡು, ಮುಕ್ತ ವಿವಿಗೆ ಶುಲ್ಕ ಕಟ್ಟಿ  ಎಂಎ ಪರೀಕ್ಷೆ ಬರೆಯುವುದೇ ಲಾಭದಾಯಕವೆಂದು ಎಣಿಸಿದರೆ ಆಶ್ಚರ್ಯವಿಲ್ಲ.

ಯಾವುದು ಪ್ರಯೋಗಾತ್ಮಕ ವಿಷಯವಲ್ಲವೋ ಅದರಲ್ಲಿ ದೂರಶಿಕ್ಷಣದಲ್ಲಿ  ಪದವಿ ನೀಡುವ ಕ್ರಮ ತಪ್ಪಲ್ಲ. ಆದರೆ ಪತ್ರಿಕೋದ್ಯಮದಂಥ ಪ್ರಯೋಗವೇ ಮೂಲವಾದ ತರಗತಿಗಳಿಗೂ  ಕೇವಲ ಶುಲ್ಕ ಕಟ್ಟಿಸಿಕೊಂಡು ಸಂಪರ್ಕ ಕಾರ್ಯಕ್ರಮಕ್ಕೆ ಹಾಜರಾಗುವುದನ್ನೂ ಕಡ್ಡಾಯ ಮಾಡದೆ, ಯಾರು ಬೇಕಾದರೂ ಪರೀಕ್ಷೆ ಬರೆದು ಪಾಸಾಗಬಹುದು ಎಂಬ ಪರಿಸ್ಥಿತಿ ನಿಮಾಣ ಮಾಡುವುದು ಪತ್ರಿಕೋದ್ಯಮ ಶಿಕ್ಷಣವನ್ನು ನಗೆಪಾಟಲಿಗೆ ಈಡು ಮಾಡುತ್ತದೆ. 

ಅಂದರೆ ಪತ್ರಿಕೋದ್ಯಮ ಶಿಕ್ಷಣದ ಆರಂಭದಲ್ಲಿ ಕೇವಲ ಥಿಯರಿ ಕಲಿಸುತ್ತಾ ನೈಜ ಪತ್ರಿಕೋದ್ಯಮದಿಂದ ದೂರ ಉಳಿದುಬಿಟ್ಟಿತ್ತು. ಪತ್ರಕರ್ತರು ಹಾಗೂ ಪ್ರಯೋಗ ನಿಷ್ಠ ಅಧ್ಯಾಪಕರುಗಳ ಪ್ರಯತ್ನದ ಫಲವಾಗಿ ಥಿಯರಿಗೂ ಪ್ರಯೋಗಕ್ಕೂ ಇರುವ ಕಂದಕವನ್ನು ಬಹುಪಾಲು ಮುಚ್ಚಲಾಗಿದೆ. ಪ್ರಾಯೋಗಿಕ ಅನುಭವ ಕಡ್ಡಾಯ ಮಾಡಲಾಗಿದೆ. ಸಾಮಾನ್ಯ ವಿವಿಗಳಲ್ಲಿ ಕಲಿಯುವ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಥಿಯರಿ ಹಾಗೂ ಪ್ರಾಕ್ಟಿಕಲ್ ಈ ಎರಡರಲ್ಲೂ ಪರೀಕ್ಷೆ ಬರೆಯಬೇಕಾಗುತ್ತದೆ.

ಆದರೆ ಮುಕ್ತ ವಿವಿ ಪದ್ಧತಿಯಲ್ಲಿ ಮತ್ತೆ ಚರಿತ್ರೆಯ ಪದವಿಗೂ ಪತ್ರಿಕೋದ್ಯಮ ಪದವಿಗೂ ವ್ಯತ್ಯಾಸವಿಲ್ಲವೆಂಬ ಸ್ಥಿತಿ ತರುವುದು ಪತ್ರಿಕೋದ್ಯಮ ಶಿಕ್ಷಣವನ್ನು ಹೊರಟಲ್ಲಿಗೇ ತಂದು ನಿಲ್ಲಿಸಿದ ಕ್ರಮವಾಗಿದೆ. ಈ ಬಗ್ಗೆ ಪತ್ರಿಕಾ ವಲಯದ್ಲ್ಲಲಿ, ಶಿಕ್ಷಣ ತಜ್ಞರುಗಳ ನಡುವೆ ಚರ್ಚೆ ನಡೆಯಲಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.